More

    ಬದುಕು ಕಳೆದುಕೊಂಡ ಕುರಿಗಾಹಿ ಕುಟುಂಬದ ರೋದನೆ

    ಬೆಳಗಾವಿ: ಕಲ್ಲು&ಮುಳ್ಳು ಎನ್ನದೇ ಬೆಟ್ಟು&ಗುಡ್ಡ ಸುತ್ತಾಡಿ, ಬಿಸಿಲು, ಮಳೆ, ಚಳಿ ಲೆಕ್ಕಿಸದೆ ವರ್ಷಗಟ್ಟಲೇ ಬೆಳೆಸಿದ್ದ ಕುರಿಗಳು ಕಣ್ಣೆದುರೇ ಕೊನೆಯುಸಿರೆಳೆಯುತ್ತಿದ್ದನ್ನು ಕಂಡು ಆ ಕುಟುಂಬಗಳ ರೋದನ ಹೇಳತಿರದು. “ಇವು ಕೇವಲ ಕುರಿಗಳಲ್ರೀ.. ನಮ್ಮ ಬದುಕು’ ಎಂದು ನಮಿಸುತ್ತಲೇ, ಕುರಿಗಾಹಿ ಕುಟುಂಬಸ್ಥರು ಕಣ್ಣೀರುಡುತ್ತಿದ್ದ ದೃಶ್ಯ ಮನಕಲುಕುವಂತಿತ್ತು.

    ಬೆಳಗಾವಿ ತಾಲೂಕಿನ ಕೊಂಡಸಕೊಪ್ಪ ಗ್ರಾಮದ ನಿಂಗಪ್ಪ ದೇಮನ್ನವರ ಹಾಗೂ ಸುನೀಲ ದೇಮನ್ನವರ ಅವರ 9 ಕುರಿಗಳು ಸೋಮವಾರ ಮೃತಪಟ್ಟಿದ್ದು, ಮರಣೋತ್ತರ ಪರೀಕ್ಷೆ ಮಾಡಿರುವ ವೈದ್ಯಾಧಿಕಾರಿಗಳು, ಕುರಿ ಸಾವಿಗೆ ಫುಡ್​ ಪಾಯ್ಸನ್​ ಕಾರಣ ಎಂದು ವರದಿ ನೀಡಿದ್ದಾರೆ.

    ಕೊಂಡಸಕೊಪ್ಪ ವ್ಯಾಪ್ತಿಯ ಗುಡ್ಡಗಾಡು ಪ್ರದೇಶದಲ್ಲಿನ ತಮ್ಮ ಕುರಿದೊಡ್ಡಿಯಲ್ಲಿನ ಕುರಿಗಳ ಒದ್ದಾಟ ನೋಡುತ್ತಿದ್ದ ಕುಟುಂಬಸ್ಥರು, ತಮ್ಮ ಬದುಕು ಬದುಕಿಸಿಕೊಡುವಂತೆ ವೈದ್ಯಾಧಿಕಾರಿಗಳಲ್ಲಿ ಅಂಗಲಾಚುತ್ತಿದ್ದರು. ಸ್ಥಳದಲ್ಲೇ ಬೀಡು ಬಿಟ್ಟಿರುವ ಪಶು ವೈದ್ಯಾಧಿಕಾರಿಗಳು ನಿರಂತರ ನಿಗಾ ಇರಿಸಿದ್ದು, ತೀವ್ರ ಅಸ್ವಸ್ಥಗೊಂಡಿರುವ 40ಕ್ಕೂ ಅಧಿಕ ಕುರಿಗಳಿಗೆ ಚಿಕಿತ್ಸೆ ಮುಂದುವರಿದಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಕೆ.ಕೆ.ಕೊಪ್ಪದ ಪಶುವೈದ್ಯಾಧಿಕಾರಿ ಕೆ.ಬಿ.ಅಸ್ಕಿ ಅವರು, “ಶುಕ್ರವಾರವೇ ಕುರಿಗಳಿಗೆ ಪುಡ್​ಪಾಯ್ಸನ್​ ಆಗಿದೆ. ಒಂದೊಮ್ಮೆ ಬೆಳೆ ಸೇವಿಸಿದ್ದಾಗ ಆಗುತ್ತಿದ್ದ ತೊಂದರೆ ಎಂದು ಭಾವಿಸಿ, ತಮಗೆ ಗೊತ್ತಿರುವ ಚಿಕಿತ್ಸೆ ನೀಡಿ ಪ್ರಯತ್ನಿಸಿದ್ದಾರೆ. ಆದರೆ, ಕುರಿಗಳು ತೀವ್ರ ಅಸ್ವಸ್ಥಗೊಂಡಿದ್ದರಿಂದ ಸ್ಥಳಿಯರ ಮೂಲಕ ನಮ್ಮ ಗಮನಕ್ಕೆ ತಂದಿದ್ದಾರೆ. ಆ ಬಳಿಕವೇ ಚಿಕಿತ್ಸೆ ಆರಂಭಿಸಿದ್ದೇವೆ. ಈ ವರೆಗೆ 9 ಕುರಿಗಳು ಸಾವಿಗೀಡಾಗಿದ್ದು, ಇನ್ನುಳಿದ ಕುರಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ವಿವರಿಸಿದರು.

    ಆಗಿದ್ದೇನು? : ಕಳೆದ ನಾಲ್ಕು ದಿನಗಳ ಹಿಂದೆ ಬಸ್ತವಾಡ ಗ್ರಾಮದ ಬಳಿ ನಡೆದಿದ್ದ ಪಂಚಮಸಾಲಿ ಸಮಾವೇಶದಲ್ಲಿ ಬಂದವರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಜನರು ಉಳಿದ ರೊಟ್ಟಿ&ಪಲ್ಯ, ಅನ್ನವನ್ನು ಸ್ಥಳದಲ್ಲೆ ಎಸೆದು ಹೋಗಿದ್ದರು. ಕುರಿ ಮೇಯಲು ಹೋದಾಗ ಈ ಅನ್ನ ಹಾಗೂ ರೊಟ್ಟಿ ಸೇವಿಸಿದ್ದರಿಂದ ಹೀಗಾಗಿದೆ ಎನ್ನುತ್ತಾರೆ ದೇಮನ್ನವರ ಕುಟುಂಬಸ್ಥರು. ಎಸೆದಿದ್ದ ಆಹಾರ ಸೇವಿಸಿದ ಕುರಿಗಳ ಪೈಕಿ 70 ಕುರಿಗಳು ಅಸ್ವಸ್ಥಗೊಂಡಿದ್ದು, ನಿಂಗಪ್ಪ ವಿಠ್ಠಲ ದೇಮನ್ನವರ ಅವರ ನಾಲ್ಕು ಹಾಗೂ ಸುನಿಲ ದೇಮನ್ನವರ ಅವರ 5 ಕುರಿಗಳು ಮೃತಪಟ್ಟಿವೆ. ಇನ್ನೂ ಎರಡು ಕುರಿಗಳ ಸ್ಥಿತಿ ಗಂಭೀರವಾಗಿದ್ದು, ಪಶುವೈದ್ಯಾಧಿಕಾರಿಗಳ ತಂಡ ಉಪಚಾರ ಮುಂದುವರಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts