More

    ಬಂದರು ನಿರ್ವಣಕ್ಕಾಗಿ ಗಡಿ ರೇಖೆ ಬದಲು

    ಕಾರವಾರ: ಹೊನ್ನಾವರದ ಕಾಸರಕೋಡಿನಲ್ಲಿ ಜಿಲ್ಲಾಡಳಿತ ಕರಾವಳಿ ಗಡಿ ರೇಖೆಯನ್ನು ಬದಲಿಸಲು ಹೊರಟಿದ್ದು, ಮುಂದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಇದೆ ಎಂದು ರಾಜ್ಯ ಜೀವ ವೈವಿಧ್ಯ ಮಂಡಳಿ ಸದಸ್ಯ ಪ್ರಕಾಶ ಮೇಸ್ತ ಎಚ್ಚರಿಸಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟೊಂಕದಲ್ಲಿ ಶರಾವತಿ ನದಿ ಹರಿವು ಬದಲಿಸಿದ್ದರಿಂದ ಸೃಷ್ಟಿಯಾದ ಖಾಲಿ ಜಾಗದಲ್ಲಿ 300ಕ್ಕೂ ಅಧಿಕ ಕುಟುಂಬಗಳು ತಲೆ, ತಲಾಂತರಗಳಿಂದ ವಾಸವಾಗಿವೆ. ಅವರಿಗೆಲ್ಲ 40 ವರ್ಷಗಳ ಹಿಂದೆಯೇ ಸರ್ಕಾರ ಪಟ್ಟಾ ನೀಡಿದೆ. ಈಗ ಅದೇ ಜಾಗಕ್ಕೆ ಹೊನ್ನಾವರ ತಹಸೀಲ್ದಾರರು ಹೊಸ ಸರ್ವೆ ನಂಬರ್ ನೀಡಿದ್ದಾರೆ. ಆ ಪ್ರದೇಶವನ್ನು ಬಂದರು ನಿರ್ವಣಕ್ಕೆ ಖಾಸಗಿ ಕಂಪನಿಗೆ ನೀಡಲಾಗಿದೆ. ಸುಮಾರು ನಾಲ್ಕು ಕಿಮೀ ಪ್ರದೇಶದ ಕರಾವಳಿಯ ಗಡಿಯನ್ನೇ ಬದಲು ಮಾಡಲಾಗಿದೆ ಎಂದು ದೂರಿದರು.

    ಕರಾವಳಿಯ ಗಡಿ ರೇಖೆಯನ್ನು ಆಧರಿಸಿ ಸಮುದ್ರದಲ್ಲಿ ಅಂತಾರಾಷ್ಟ್ರೀಯ ಗಡಿ ರೇಖೆ, ಹಡಗುಗಳ ಸಂಚಾರದ ನಕ್ಷೆ ನಿರ್ಧಾರವಾಗುತ್ತದೆ. ಇದರಿಂದ ಮೂಲ ನಕ್ಷೆಯನ್ನು ಅಥವಾ ಗಡಿ ರೇಖೆಯನ್ನು ಬದಲಿಸುವ ಅಧಿಕಾರ ಯಾರಿಗೂ ಇಲ್ಲ. ಹಾಗೇನಾದರೂ ಮಾರ್ಪಾಟು ಮಾಡಬೇಕಾದರೆ ಚೀಫ್ ಹೈಡ್ರೊಘ್ರಾಫರ್ ಗಮನಕ್ಕೆ ಬರಬೇಕಾಗುತ್ತದೆ. ಆದರೆ, ಜಿಲ್ಲಾಡಳಿತ ಯಾವುದೇ ಸಂಸ್ಥೆಗಳ ಗಮನಕ್ಕೆ ತಾರದೆ ಗಡಿ ರೇಖೆ ಬದಲು ಮಾಡಿದೆ. ಇದು ಮುಂದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಮಸ್ಯೆ ಉದ್ಭವವಾಗುವ ಸಾಧ್ಯತೆ ಇದೆ ಎಂದರು.

    ಹೊನ್ನಾವರ ಪರ್ಸೀನ್ ಬೋಟ್ ಯೂನಿಯನ್ ಅಧ್ಯಕ್ಷ ವಿಮೆಲ್ ಫರ್ನಾಂಡಿಸ್, ಹೊನ್ನಾವರದಲ್ಲಿ 1400ರಷ್ಟು ದೋಣಿಗಳಿವೆ. 23 ಸಾವಿರ ಜನ ಮೀನುಗಾರಿಕೆಯಿಂದ ಜೀವನ ನಡೆಸುತ್ತಿದ್ದಾರೆ. ಸರ್ಕಾರ ಮೀನುಗಾರರ ಕುಟುಂಬಗಳಿಗೆ ಯಾವುದೇ ಪರಿಹಾರ ನೀಡದೇ ಅವರನ್ನು ಒಕ್ಕಲೆಬ್ಬಿಸಲು ಹೊರಟಿದೆ. ರಸ್ತೆ ಹಾಗೂ ಬಂದರು ನಿರ್ಮಾಣ ಮಾಡುತ್ತಿದೆ ಎಂದು ದೂರಿದರು. ರಾಮಚಂದ್ರ ಹರಿಕಂತ್ರ, ಗಣಪತಿ ತಾಂಡೇಲ, ಶೇಷಗಿರಿ ತಾಂಡೇಲ, ರೇಣುಕಾ ತಾಂಡೇಲ, ಉಷಾ ತಾಂಡೇಲ, ಪಾರ್ವತಿ ತಾಂಡೇಲ, ರಾಧಾ ತಾಂಡೇಲ ಸುದ್ದಿಗೋಷ್ಠಿಯಲ್ಲಿದ್ದರು.

    ಬಂದರು ಕಾಮಗಾರಿಗೆ ವಿರೋಧ
    ಹೊನ್ನಾವರದ ಕಾಸರಕೋಡಿನ ಮಲ್ಲುಕುರ್ವಾ ಹಾಗೂ ಪಾವಿನಕುರ್ವಾದಲ್ಲಿ ಖಾಸಗಿ ಬಂದರಿನ ರಸ್ತೆ ಕಾಮಗಾರಿಯನ್ನು ಸ್ಥಗಿತ ಮಾಡುವಂತೆ ಮೀನುಗಾರರ ಮುಖಂಡರು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಅವರಿಗೆ ಗುರುವಾರ ಮನವಿ ಮಾಡಿದರು. ಕಂಪನಿ ಎಲ್ಲ ಕಾನೂನುಗಳನ್ನು ಮೀರುತ್ತಿದೆ. ಸರ್ಕಾರಿ ಅಧಿಕಾರಿಗಳು ಕಂಪನಿಗೆ ಸಾಥ್ ನೀಡುತ್ತಿದ್ದಾರೆ ಎಂದು ದೂರಿದರು. ಮಾಜಿ ಶಾಸಕ ಮಂಕಾಳ ವೈದ್ಯ, ಉತ್ತರ ಕನ್ನಡ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ, ಸುಧಾಕರ ಹರಿಕಂತ್ರ, ವಿನಾಯಕ ಹರಿಕಂತ್ರ ಇತರರು ಇದ್ದರು.

    ಮೀನುಗಾರರ ಸಂಘಟನೆ ಪದಾಧಿಕಾರಿಗಳು ಭೇಟಿ:
    ಹೊನ್ನಾವರ ಮಲ್ಲು ಕುರ್ವಾ ಬಂದರು ನಿರ್ಮಾಣ ಸ್ಥಳಕ್ಕೆ ರಾಷ್ಟ್ರೀಯ ಮೀನುಗಾರರ ಸಂಘಟನೆಯ ಪದಾಧಿಕಾರಿಗಳು ಗುರುವಾರ ಭೇಟಿ ನೀಡಿ, ಮೀನುಗಾರರ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಸಂಘಟನೆಯ ಅಧ್ಯಕ್ಷ ರಾಮ ಮೊಗೇರ, ಸ್ಥಳಕ್ಕೆ ಭೇಟಿ ನೀಡಿ ಕೂಡಲೆ ಕಾಮಗಾರಿ ಸ್ಥಗಿತ ಮಾಡುವಂತೆ ಒತ್ತಾಯಿಸಿದರು. ಇಲ್ಲದಿದ್ದಲ್ಲಿ ತೀವ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಸಂಘಟನೆಯ ಕಾರ್ಯಾಧ್ಯಕ್ಷ ಮಂಜುನಾಥ ಸುಣಗಾರ, ಪ್ರಧಾನ ಕಾರ್ಯದರ್ಶಿ ರಾಜು ಉಗ್ರಾಣಕರ್, ಕಾರ್ಯದರ್ಶಿ ಅಜಿತ ರಾಂಡೇಲ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts