More

    ಫಸಲು ರಕ್ಷಣೆಗೆ ಬೇಕಿದೆ ಶೀಥಲೀಕರಣ ಘಟಕ

    ಹಾನಗಲ್ಲ: ತಾಲೂಕಿನಾದ್ಯಂತ ಮಾವು-ಬಾಳೆ, ಚಿಕ್ಕು ಹೇರಳವಾಗಿ ಬೆಳೆಯಲಾಗುತ್ತಿದ್ದು, ಶೇಖರಣೆಗಾಗಿ ಎಪಿಎಂಸಿ ಆವರಣದಲ್ಲಿ ಪ್ಯಾಕ್​ಹೌಸ್, ಶೀಥಲೀಕರಣ ಘಟಕಗಳನ್ನು ಪ್ರಾರಂಭಿಸುವ ಅಗತ್ಯವಿದೆ. ದರ ಕುಸಿತ, ಮಾರುಕಟ್ಟೆ ಏರಿಳಿತಗಳನ್ನು ನಿಭಾಯಿಸಲು ಇದು ಸಹಕಾರಿಯಾಗುತ್ತದೆ ಎಂದು ಶಾಸಕ ಸಿ.ಎಂ. ಉದಾಸಿ ಹೇಳಿದರು.

    ಪಟ್ಟಣದ ಎಪಿಎಂಸಿ ಆವರಣದಲ್ಲಿ ಕುಮಾರೇಶ್ವರ ತೋಟಗಾರಿಕೆ ರೈತ ಉತ್ಪಾದಕರ ಕಂಪನಿ ವತಿಯಿಂದ ಆರಂಭಿಸಲಾದ ಮಾವು ಫಸಲು ಖರೀದಿ ಕೇಂದ್ರವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು. ಸಂಸ್ಕರಣೆ ಮತ್ತು ಸಾಗಾಣಿಕೆಗೆ ವ್ಯವಸ್ಥೆ ಕೈಗೊಳ್ಳದಿದ್ದರೆ ಗುಣಮಟ್ಟ ಕಾಪಾಡಲು ಸಾಧ್ಯವಿಲ್ಲ. ಗ್ರೇಡಿಂಗ್ ಹಾಗೂ ಪ್ಯಾಕಿಂಗ್ ಸರಿಯಾಗಿ ಕೈಗೊಳ್ಳಬೇಕು. ಯಾವುದೇ ಹಣ್ಣು ತರಕಾರಿಗಳನ್ನು ಮಾರುಕಟ್ಟೆಯ ಬೇಡಿಕೆ ಆಧರಿಸಿ ಪೂರೈಸಬೇಕು. ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಇಲಾಖೆ ಅಧಿಕಾರಿಗಳು ಗಮನಹರಿಸಬೇಕು. ರೈತರಿಗೆ ಈ ಕುರಿತು ಅಗತ್ಯ ತರಬೇತಿ ನೀಡಬೇಕು. ರೈತರೇ ಪ್ರಾರಂಭಿಸಿರುವ ಈ ಖರೀದಿ ಕೇಂದ್ರವನ್ನು ಸದುಪಯೋಗ ಪಡೆದುಕೊಂಡು ನೇರ ಗ್ರಾಹಕ ಮಾರುಕಟ್ಟೆ ಸೃಷ್ಟಿಸಲು ಕೈಜೋಡಿಸಬೇಕು ಎಂದರು.

    ಕಂಪನಿ ಅಧ್ಯಕ್ಷ ಹನುಮಗೌಡ ಪಾಟೀಲ ಮಾತನಾಡಿ, ನಗರಗಳಲ್ಲಿರುವ ಅಪಾರ್ಟ್ ಮೆಂಟ್​ಗಳಿಗೆ ನೇರವಾಗಿ ಹಣ್ಣುಗಳನ್ನು ಹಂಚಿಕೆ ಮಾಡಲು ಯೋಜನೆ ರೂಪಿಸಲಾಗಿದೆ. ಈಗಾಗಲೇ ಇಲ್ಲಿನ ಮಾವು ಜಲಗಾವ್ ಅಲ್ಪಾನ್ಸೋ ಹೆಸರಲ್ಲಿ ಮಾರುಕಟ್ಟೆಯಲ್ಲಿ ವ್ಯಾಪಕ ಹೆಸರು ಗಳಿಸಿದೆ. ಅದನ್ನು ಹಾನಗಲ್ಲ ಅಲ್ಪಾನ್ಸೋ ಬ್ರ್ಯಾಂಡ್ ಮೂಲಕ ಗ್ರಾಹಕರ ಮನೆಗಳಿಗೆ ತಲುಪಿಸಲು ಆನ್​ಲೈನ್ ಮೂಲಕ ಬೇಡಿಕೆ ಪಟ್ಟಿ ಪಡೆಯುತ್ತಿದ್ದೇವೆ. ಇದರಿಂದಾಗಿ ಮಧ್ಯವರ್ತಿಗಳ ಬದಲಾಗಿ ರೈತ ಬೆಳೆಗಾರರಿಗೆ ಹೆಚ್ಚು ಲಾಭ ದೊರೆಯಲಿದೆ. ಫಸಲಿನ ಮಾರಾಟ ಬೆಲೆಯನ್ನೇ ರೈತರಿಗೆ ನೀಡಲಾಗುತ್ತಿದ್ದು, ಯಾವುದೇ ಕಮಿಷನ್ ಪಡೆಯುತ್ತಿಲ್ಲ ಎಂದು ವಿವರಿಸಿದರು.

    ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಲ್. ಪ್ರದೀಪ ಮಾತನಾಡಿ, ಹಣ್ಣಿನ ತೂಕ ಹೆಚ್ಚಿಸುವ ಭರದಲ್ಲಿ ಅನಗತ್ಯ ರಾಸಾಯನಿಕ, ಕ್ರಿಮಿನಾಶಕ ಬಳಕೆಯಿಂದ ಮಾವಿನ ಗುಣಮಟ್ಟ ಕುಸಿತವಾಗುತ್ತದೆ. ಅದರಲ್ಲಿ ವಿಷಕಾರಕ ಅಂಶಗಳೂ ಹೆಚ್ಚಾಗುತ್ತವೆ ಎಂದು ಎಚ್ಚರಿಸಿದರು.

    ತೋಟಗಾರಿಕೆ ಸಹಾಯಕ ನಿರ್ದೇಶಕ ಮಂಜುನಾಥ ಬಣಕಾರ, ಎಪಿಎಂಸಿ ಅಧ್ಯಕ್ಷ ಶೇಕಣ್ಣ ಮಹರಾಜ್​ಪೇಟ, ಮಾಜಿ ಅಧ್ಯಕ್ಷ ಬಿ.ಎಸ್.ಅಕ್ಕಿವಳ್ಳಿ, ಕಾರ್ಯದರ್ಶಿ ಪರಮಶೆಟ್ಟಿ, ಮಾವು ಬೆಳೆಗಾರರಾದ ಮಲ್ಲನಗೌಡ ಪಾಟೀಲ, ಕಲ್ಯಾಣಕುಮಾರ ಶೆಟ್ಟರ, ಮರಿಗೌಡ ಪಾಟೀಲ, ಮನೋಜ ದೇಸಾಯಿ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ಸಿ.ಕೆ.ಪಾಟೀಲ, ಶಾಂತಕ್ಕ ಅಂಗಡಿ, ಕಂಪನಿ ವ್ಯವಸ್ಥಾಪಕ ಅನಿಲ ಅಂಗಡಿ ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts