More

    ಪ್ರವಾಹ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿ

    ಶಿರಹಟ್ಟಿ: ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ ಸಂಭವಿಸಬಹುದಾದ ಅತಿವೃಷ್ಟಿ, ಅನಾವೃಷ್ಟಿ ಹಾಗೂ ಪ್ರವಾಹಗಳಂತಹ ಸಂದಿಗ್ಧ ಸ್ಥಿತಿಯನ್ನು ಎದುರಿಸಲು ತಾಲೂಕು ಆಡಳಿತ ಸನ್ನದ್ಧವಾಗಬೇಕು. ಬೆಳೆ ವಿಮೆ ಯೋಜನೆ ಮತ್ತು ಬೆಳೆ ಸಮೀಕ್ಷೆ ಆಪ್ ಕುರಿತು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ರೈತರಿಗೆ ಸಮಗ್ರ ಮಾಹಿತಿ ನೀಡಬೇಕು ಎಂದು ತಾಪಂ ಆಡಳಿತಾಧಿಕಾರಿ ಹಾಗೂ ಜಿಪಂ ಮುಖ್ಯ ಯೋಜನಾಧಿಕಾರಿ ವಾಗೀಶ ಶಿವಾಚಾರ್ಯ ಎಸ್.ಎಂ. ಸೂಚಿಸಿದರು.
    ಪಟ್ಟಣದ ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ತಾಪಂ ಮಾಸಿಕ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
    ಕೋವಿಡ್ ಲಸಿಕೆ ಬಗ್ಗೆ ಬಗ್ಗೆ ಟಿಎಚ್​ಒ ಡಾ. ಸುಭಾಸ ದೈಗೊಂಡ ಅವರಿಂದ ಮಾಹಿತಿ ಪಡೆದ ವಾಗೀಶ ಅವರು, ಯಾವುದೇ ಕಾರಣಕ್ಕೂ ಲಸಿಕೆಗೆ ಕೊರತೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.
    ಕೃಷಿ ಇಲಾಖೆಯ ಮಾಹಿತಿ ನೀಡಿದ ಅಧಿಕಾರಿ ನೇತ್ರಾವತಿ, ಮುಂಗಾರು ಹಂಗಾಮಿನ ಬೀಜ ವಿತರಣೆ ಹಾಗೂ ಕೃಷಿ ಆಧಾರಿತ ಯೋಜನೆಗಳ ಮಾಹಿತಿ ನೀಡಿದರು. ಖುಷ್ಕಿ ಹಾಗೂ ನೀರಾವರಿ ಸೇರಿದಂತೆ ತಾಲೂಕಿನಲ್ಲಿ 3,810 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಮತ್ತು 11,650 ಹೆಕ್ಟೇರ್ ಪ್ರದೇಶದಲ್ಲಿ ಗೋವಿನ ಜೋಳ ಬಿತ್ತನೆ ಮಾಡಲಾಗಿದೆ. ಒಟ್ಟು 17 ಸಾವಿರ ಹೆಕ್ಟೇರ್​ನಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆ. ಈ ಬಾರಿ ತೊಗರಿ ಬೀಜಕ್ಕೆ ಹೆಚ್ಚಿನ ಬೇಡಿಕೆ ಬಂದಿದ್ದು ಈಗಾಗಲೇ 50 ಕ್ವಿಂಟಾಲ್ ಹಂಚಿಕೆ ಮಾಡಲಾಗಿದ್ದು, ಇನ್ನು 50 ಕ್ವಿಂಟಾಲ್ ಬೀಜದ ಅಗತ್ಯವಿದೆ ಎಂದರು.
    ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಎಲ್ಲರಿಗೂ ಉದ್ಯೋಗ ನೀಡಿ ಗುಳೆ ಹೋಗದಂತೆ ನೋಡಿಕೊಳ್ಳಬೇಕು ಎಂದು ವಾಗೀಶ ಅವರು ಇಒಗೆ ಸೂಚಿಸಿದರು. ಅಲ್ಲದೆ, ಪ್ರಗತಿ ಪರಿಶೀಲನಾ ಸಭೆಗೆ ಬಾರದ ನಿರ್ವಿುತ, ಭೂಸೇನಾ ನಿಗಮ, ಸಾರಿಗೆ, ಹೆಸ್ಕಾಂ, ಪಿಎಂಜಿಎಸ್​ವೈ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸುವುದಾಗಿ ಜಿಪಂ. ಮುಖ್ಯ ಯೋಜನಾಧಿಕಾರಿ ವಾಗೀಶ ಶಿವಾಚಾರ್ಯ ಸಭೆಯ ಗಮನ ಸೆಳೆದರು. ಈ ವೇಲೆ ತಾಪಂ.ಇಒ ಡಾ. ಎನ್.ಎಚ್. ಓಲೇಕಾರ ಇದ್ದರು.
    ಮಕ್ಕಳ ಪೋಷಣೆಗೆ ಸಿದ್ಧರಾಗಿ
    ಕೋವಿಡ್ ಸೋಂಕಿನ ಸಂಭವನೀಯ 3ನೇ ಅಲೆ ಎದುರಾಗುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ವಿಶೇಷವಾಗಿ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳನ್ನು ಗುರುತಿಸಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಲು ಸರ್ವಸನ್ನದ್ಧರಾಗಬೇಕು ಎಂದು ವಾಗೀಶ ಅವರು ಅಧಿಕಾರಿಗಳಿಗೆ ಸೂಚಿಸಿದರು. ಸಿಡಿಪಿಒ ಮೃತ್ಯುಂಜಯ ಮಾತನಾಡಿ, ‘ಶಿರಹಟ್ಟಿ ತಾಲೂಕಿನಲ್ಲಿ 25 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅವರಲ್ಲಿ 16 ಮಕ್ಕಳನ್ನು ತಾಯಂದಿರೊಂದಿಗೆ ಕರೆತಂದು ಶಿರಹಟ್ಟಿ ಬಿಸಿಎಂ ವಸತಿ ನಿಲಯದ ಆರೈಕೆ ಕೇಂದ್ರದಲ್ಲಿ ವಿಶೇಷ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ಮಾಡಿಸಿ ನಿತ್ಯವೂ ಪೌಷ್ಟಿಕ ಆಹಾರ ನೀಡಲಾಗುತ್ತಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts