More

    ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್

    ಗದಗ: ಸಂಗೊಳ್ಳಿ ರಾಯಣ್ಣ ಮೂರ್ತಿ ತೆರವುಗೊಳಿಸಿದ್ದನ್ನು ಖಂಡಿಸಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರಿಂದ ಪೊಲೀಸರು ಗುಂಪು ಚದುರಿಸಲು ಲಘುಲಾಠಿ ನಡೆಸಿದ ಘಟನೆ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಶನಿವಾರ ನಡೆದಿದೆ. ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

    ಬಳಗಾನೂರ ಗ್ರಾಮದ ಬಸ್ ನಿಲ್ದಾಣದ ಬಳಿಯ ಜಾಗದಲ್ಲಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು ಎಂದು ಹಾಲುಮತ ಕುರುಬ ಸಮಾಜದವರು ಮತ್ತು ಕಿತ್ತೂರು ರಾಣಿ ಚನ್ನಮ್ಮ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು ಎಂದು ಲಿಂಗಾಯತ ಪಂಚಮಸಾಲಿ ಸಮುದಾಯವರ ನಡುವೆ ಸಂಘರ್ಷ ನಡೆದಿತ್ತು. ಕಳೆದ ನಾಲ್ಕೈದು ವರ್ಷಗಳಿಂದ ಎರಡೂ ಸಮುದಾಯಗಳ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇತ್ತು. ಶುಕ್ರವಾರ ರಾತ್ರಿ ಕೆಲ ಯುವಕರು ಬಸ್ ನಿಲ್ದಾಣದ ಬಳಿಯ ಜಾಗದಲ್ಲಿ ಏಕಾಏಕಿ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ. ಇದನ್ನು ಗಮನಿಸಿದ ಗ್ರಾಮಸ್ಥರು, ಅನುಮತಿ ಇಲ್ಲದೆ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ ಎಂದು ಗ್ರಾಪಂ ಹಾಗೂ ಪೊಲೀಸರ ಗಮನಕ್ಕೆ ತಂದಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಎರಡು ಸಮುದಾಯಗಳ ಮಧ್ಯೆ ಗಲಾಟೆ ಸಂಭವಿಸಬಹುದೆಂಬ ಕಾರಣದಿಂದ ಎಸಿ ರಾಯಪ್ಪ ಹುಣಸಗಿ, ಡಿವೈಎಸ್ಪಿ ಪ್ರಲ್ಹಾದ ಹಾಗೂ ನೂರಾರು ಪೊಲೀಸ್ ಸಿಬ್ಬಂದಿ ಗ್ರಾಮಕ್ಕೆ ಆಗಮಿಸಿದ್ದಾರೆ. ಅನುಮತಿ ಇಲ್ಲದೆ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಹೀಗಾಗಿ ಅದನ್ನು ತೆರವುಗೊಳಿಸುವಂತೆ ಮನವಿ ಮಾಡಿದ್ದಾರೆ. ಆದರೆ, ಪೊಲೀಸರ ಮಾತಿಗೆ ಯುವಕರು ಮಣಿಯದಿದ್ದಾಗ ಪೊಲೀಸರೇ ಮೂರ್ತಿ ತೆರವುಗೊಳಿಸಲು ಮುಂದಾದಾಗ, ಕೆಲವು ಕಿಡಿಗೇಡಿಗಳು ಎಸಿ, ಡಿವೈಎಸ್ಪಿ ವಾಹನಗಳಿಗೆ ಅಡ್ಡವಾಗಿ ಮುಳ್ಳುಕಂಟಿ ಇಟ್ಟು ಕಲ್ಲು ತೂರಿದ್ದಾರೆ. ಆಗ ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.

    ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ವಣವಾಗಿದ್ದು, ಭದ್ರತೆಗಾಗಿ 4 ಸಿಪಿಐ, 10 ಪಿಎಸ್​ಐ, ನಾಲ್ಕು ಡಿಆರ್ ತುಕಡಿ ಸೇರಿದಂತೆ ನೂರಾರು ಪೊಲೀಸರನ್ನು ನಿಯೋಜಿಸಲಾಗಿದೆ.

    ಕಾನೂನು ಮೀರಿಲ್ಲ!: ‘ದೇಶಭಕ್ತ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದೇವೆ. ಆದರೆ ಪೊಲೀಸರು ಅದನ್ನು ತೆರವು ಮಾಡಿದ್ದಾರೆ. ಇದ್ಯಾವ ನ್ಯಾಯ? ಇದೇನು ಬ್ರಿಟಿಷ್ ಆಡಳಿತವೇ..? ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಕಾನೂನು ಮೀರಿ ಮೂರ್ತಿ ಪ್ರತಿಷ್ಠಾಪನೆ ಮಾಡಿಲ್ಲ. ಈ ಕುರಿತು ಗ್ರಾಮ ಪಂಚಾಯಿತಿಯಲ್ಲಿ ಠರಾವು ಪಾಸು ಮಾಡಲಾಗಿದೆ. ಆದರೂ ತೆರವು ಮಾಡಿದ್ದು ಏಕೆ? ಪೊಲೀಸರು ಯಾರ ಕುಮ್ಮಕ್ಕಿನಿಂದ ಮೂರ್ತಿ ತೆರವು ಮಾಡಿದ್ದಾರೆ ಎಂಬುದನ್ನು ತಿಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts