More

    ಪೈಪ್‌ಲೈನ್‌ನಲ್ಲಿ ಮತ್ತೆ ಮಾಂಸದ ತುಂಡು! : ಓವರ್‌ಹೆಡ್ ಟ್ಯಾಂಕ್‌ನಲ್ಲಿ 2 ಅಡಿ ಹೂಳು ಜನರಲ್ಲಿ ಮತ್ತಷ್ಟು ಆತಂಕ ನಿರಂತರ ಶೋಧ

    ಚನ್ನಪಟ್ಟಣ : ನಗರವನ್ನು ಬೆಚ್ಚಿ ಬೀಳಿಸಿರುವ ಓವರ್‌ಹೆಡ್ ಟ್ಯಾಂಕ್ ಪೈಪ್‌ನಲ್ಲಿ ಶವದ ಕಾಲು ಪತ್ತೆ ಪ್ರಕರಣದ ಕಾರ್ಯಾಚರಣೆ ಶುಕ್ರವಾರವೂ ಮುಂದುವರಿದಿದ್ದು, ಮತ್ತೆ ಮಾಂಸದ ತುಂಡುಗಳು ಪತ್ತೆಯಾಗಿವೆ.
    ನಗರ ನ್ಯಾಯಾಲಯ ಹಿಂಭಾಗವಿರುವ ನೀರಿನ ಓವರ್‌ಹೆಡ್ ಟ್ಯಾಂಕ್ ಪೈಪ್‌ಲೈನ್ ವಾಲ್ವ್‌ನಲ್ಲಿ ಮೃತದೇಹದ ಕಾಲು ಪತ್ತೆಯಾಗಿತ್ತು. ಅನುಮಾನದ ಹಿನ್ನೆಲೆಯಲ್ಲಿ ದೇಹದ ಉಳಿದ ಭಾಗಗಳ ಪತ್ತೆಗಾಗಿ ಪೈಪ್‌ಲೈನ್ ಹಾದುಹೋಗಿರುವ ಮಾರ್ಗದಲ್ಲಿ ಪರಿಶೀಲನೆ ಮುಂದುವರಿಸಲಾಗಿತ್ತು.

    ಬುಧವಾರವೂ ಮಾಂಸದ ತುಂಡು ಹಾಗೂ ಕಾಲಿನ ಪಾದ ಹಾಗೂ ಇತ್ತರ ಭಾಗಗಳು ಪತ್ತೆಯಾಗಿತ್ತು. ಗುರುವಾರ ಮತ್ತೊಂದು ಮಾಂಸದ ತುಂಡು ನೀರಿನ ಕೊಳವೆಯಲ್ಲಿ ದೊರೆತಿತ್ತು. ಜಲಮಂಡಳಿ, ನಗರಸಭೆ ಹಾಗೂ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಹೆದ್ದಾರಿಯ 6, 7 ಹಾಗೂ 8ನೇ ಅಡ್ಡರಸ್ತೆಯ ಬಳಿ ಪೈಪ್‌ಲೈನ್‌ನಲ್ಲಿ ಶುಕ್ರವಾರವೂ ಮಾಂಸದ ತುಂಡುಗಳು ಪತ್ತೆಯಾಗಿವೆ.

    ನಿರಂತರ ಶೋಧ: ಜಲಮಂಡಳಿ ಟ್ಯಾಂಕ್‌ನ ವಾಲ್ವ್‌ನಲ್ಲಿ ಶವದ ಕಾಲು ಪತ್ತೆಯಾದ 20 ದಿನದ ನಂತರ ಎಚ್ಚೆತ್ತುಕೊಂಡಿರುವ ಜಲಮಂಡಳಿ ಗುರುವಾರ ಟ್ಯಾಂಕ್ ಸ್ವಚ್ಛಗೊಳಿಸುವ ಕಾರ್ಯ ಕೈಗೆತ್ತಿಕೊಂಡಿದೆ. ಬುಧವಾರ ನಗರದ 10ನೇ ಅಡ್ಡರಸ್ತೆಯ ಬಳಿಯ ಪೈಪ್‌ಲೈನ್‌ನಲ್ಲಿ ಮೃತ ದೇಹದ ಅಂಗ ಪತ್ತೆಯಾದ ಹಿನ್ನೆಲೆಯಲ್ಲಿ ನಗರದ 5ನೇ ಅಡ್ಡರಸ್ತೆ, ನೂತನ ನ್ಯಾಯಲಯದ ಮುಂಭಾಗ ಮತ್ತು 9ನೇ ಅಡ್ಡರಸ್ತೆಗಳಲ್ಲಿ ಶೋಧ ಮುಂದುವರಿದಿದೆ.

    ಟ್ಯಾಂಕ್‌ನಲ್ಲಿ ಹೂಳು : ಸ್ವಚ್ಛತಾ ಕಾರ್ಯ ನಡೆಸಿದ ವೇಳೆ ಓವರ್‌ಹೆಡ್ ಟ್ಯಾಂಕ್‌ನೊಳಗೆ ಸಾಕಷ್ಟು ಹೂಳು ಸಂಗ್ರಹವಾಗಿದ್ದು ಕಂಡುಬಂತು. 2 ಅಡಿಯಷ್ಟು ಹೂಳು ತುಂಬಿಕೊಂಡಿದ್ದು, ಸ್ವಚ್ಛತಾ ಕಾರ್ಯದ ವೇಳೆ ಹೊರತೆಗೆಯಲಾಗಿದೆ. ಕಾಲಕಾಲಕ್ಕೆ ಟ್ಯಾಂಕ್ ಸ್ವಚ್ಛಗೊಳಿಸ ಬೇಕಾದ ಜಲಮಂಡಳಿ ನಿರ್ಲಕ್ಷ್ಯಕ್ಕೆ ಟ್ಯಾಂಕ್‌ನೊಳಗೆ ಸಂಗ್ರಹವಾಗಿರುವ ಕೊಳೆಯೇ ಸಾಕ್ಷಿಯಾಗಿದೆ. ಇಷ್ಟು ದಿನ ನಗರದ ಜನತೆಗೆ ಅಧಿಕಾರಿಗಳು ಇದೇ ನೀರು ಕುಡಿಸಿದ್ದಾರೆ ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಸುನೀಲ್‌ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ಟ್ಯಾಂಕ್‌ನ ಸ್ವಚ್ಛತೆಯನ್ನು ಜಲಮಂಡಳಿ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ. ನಿರ್ಲಕ್ಷ್ಯ ತೋರಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts