More

    ಪರಿಸರದ ಲಕ್ಷಣ ಆಧರಿಸಿ ಕಬ್ಬು ಬೆಳೆಯಿರಿ

    ಹಳಿಯಾಳ: ತಾಲೂಕಿನಲ್ಲಿ ಬಹು ವರ್ಷಗಳಿಂದ ವಾಣಜ್ಯ ಬೆಳೆ ಕಬ್ಬಿನ ಬೇಸಾಯ ಆರಂಭಗೊಂಡಿದೆ. ಆದ್ದರೆ, ರೈತರು ನಿರೀಕ್ಷಿಸಿದ ಪ್ರಮಾಣದಲ್ಲಿ ಇಳುವರಿ ಬರುತ್ತಿಲ್ಲ ಆದಾಯವು ಕೈಸೇರುತ್ತಿಲ್ಲ. ಹೀಗಾಗಿ ರೈತರು ತಮ್ಮ ಬೇಸಾಯಕ್ಕೆ ಅನುಕೂಲವಾದ ತಳಿಗಳನ್ನು ಬೆಳೆಯಲು ಮುಂದಾಗಬೇಕು ಎಂದು ಸಂಕೇಶ್ವರ ಕಬ್ಬು ಸಂಶೋಧನೆ ಕೇಂದ್ರದ ವಿಜ್ಞಾನಿ ಡಾ. ಸಂಜಯ ಪಾಟೀಲ ಹೇಳಿದರು.

    ಪಟ್ಟಣದ ಆರ್​ಸೆಟಿ ಸಭಾಂಗಣದಲ್ಲಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್​ಸೆಟ್ ಸಂಸ್ಥೆ ಹಾಗೂ ಕೃಷಿ ಇಲಾಖೆ ಜಂಟಿಯಾಗಿ ಮಂಗಳವಾರ ಆಯೋಜಿಸಿದ್ದ ಕಬ್ಬಿನ ಬೆಳೆಯಲ್ಲಿ ಆಧುನಿಕ ಬೇಸಾಯ ಕ್ರಮ ಹಾಗೂ ಮೌಲ್ಯವರ್ಧನೆ ಕುರಿತು ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಹಳಯಾಳ ತಾಲೂಕಿನಲ್ಲಿ ಶೇ. 60ರಷ್ಟು ಚಂದಗಡ ಕಬ್ಬಿನ ತಳಿಯ ಬೇಸಾಯ ನಡೆದಿದೆ. ಆದರೆ, ಈ ತಳಿ ಇಲ್ಲಿ ಸೂಕ್ತವಲ್ಲ, ಈ ಭಾಗದಲ್ಲಿ ಮಳೆಯೂ ಹೆಚ್ಚು ಹಾಗೂ ಬೇಸಿಗೆಯಲ್ಲಿ ನೀರಿನ ಕೊರತೆಯು ಇರುತ್ತದೆ. ಈ ಪರಿಸರದ ಲಕ್ಷಣಗಳನ್ನು ಆಧರಿಸಿ ಹೆಚ್ಚು ಇಳುವರಿ ನೀಡುವ ಕಬ್ಬಿನ ತಳಿಯ ಬೇಸಾಯಕ್ಕೆ ಮುಂದಾಗಬೇಕು ಎಂದರು.

    ಬೆಲ್ಲ ಉತ್ಪಾದನೆಗೂ ರೈತರು ಹೆಚ್ಚಿನ ಆಸಕ್ತಿ ವಹಿಸಬೇಕು. ಬೆಳೆದ ಕಬ್ಬನ್ನು ಸಕ್ಕರೆ ಕಾರ್ಖಾನೆಗೆ ನೀಡುವುದರಿಂದ ಕಬ್ಬು ಕಟಾವಿಗೆ ರೈತರು ಹಾಗೂ ಕಾರ್ಖಾನೆಯ ಮೇಲೂ ಒತ್ತಡ ಹೆಚ್ಚಾಗುತ್ತದೆ. ಅದಕ್ಕಾಗಿ ರೈತರು ಕಬ್ಬಿನ ಇಳುವರಿಯ ಶೇ. 15ರಷ್ಟು ಭಾಗವನ್ನು ಬೆಲ್ಲ ಉತ್ಪಾದನೆಗೆ ವಿನಿಯೋಗಿಸಬೇಕು. ಬೆಲ್ಲ ಉತ್ಪಾದನೆ ಹಾಗೂ ಅಲೆಮನೆ ಆರಂಭಿಸಲು ಸರ್ಕಾರದಿಂದ ಸಬ್ಸಿಡಿ ರೂಪದಲ್ಲಿ ರಿಯಾಯತಿ ಸೌಲಭ್ಯಗಳಿವೆ. ಇದರಿಂದ ಹೆಚ್ಚಿನ ಆದಾಯವೂ ರೈತರಿಗೆ ಸಿಗಲಿದೆ ಎಂದು ಸಂಜಯ ಪಾಟೀಲ ಹೇಳಿದರು.

    ಸಂಕೇಶ್ವರ ಕಬ್ಬು ಸಂಶೋಧನಾ ಕೇಂದ್ರದ ಬೇಸಾಯ ಶಾಸ್ತ್ರದ ವಿಜ್ಞಾನಿ ಸುನೀಲಕುಮಾರ ನೂಲ್ವಿ, ಕಬ್ಬಿನ ಬೇಸಾಯದಲ್ಲಿ ಮೌಲ್ಯವರ್ಧನೆ ಕುರಿತು ತರಬೇತಿ ನೀಡಿದರು. ಸಿ.ಬಿ.ಡಿ ಆರ್​ಸೆಟಿ ಸಂಸ್ಥೆ ನಿರ್ದೇಶಕ ಪ್ರಸನ್ನಕುಮಾರ ಕುಲಕರ್ಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

    ಕಾರ್ಯಾಗಾರದಲ್ಲಿ ರೇಷ್ಮೆ ಇಲಾಖೆ ಅಧಿಕಾರಿ ಬಿ.ಎನ್. ಕುಂದರಗಿ, ಮೀನುಗಾರಿಕೆ ಇಲಾಖೆಯ ಡಿ.ಜಿ. ಹಾದಿಮನಿ, ಆರ್​ಸೆಟಿ ಸಂಸ್ಥೆಯ ಸಂಯೋಜಕ ವಿನಾಯಕ ಚವ್ಹಾಣ್, ಕೃಷಿ ಇಲಾಖೆಯ ಆತ್ಮಾ ಯೋಜನೆಯ ತಾಂತ್ರಿಕ ವ್ಯವಸ್ಥಾಪಕ ಸುಧಾಕರ ಎಂ.ಸಿ., ಜಿಲ್ಲಾ ಸಹಕಾರಿ ಯೂನಿಯನ್ ಉಪಾಧ್ಯಕ್ಷ ಶಿವಪುತ್ರಪ್ಪ ನುಚ್ಛಂಬ್ಲಿ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಶಂಕರ ಕಾಜಗಾರ, ಪ್ರಗತಿ ಪರ ರೈತ ಎಸ್.ಜಿ. ಮಾನಗೆ, ಸಂಜು ಉಪ್ಪೀನ ಪಾಲ್ಗೊಂಡಿದ್ದರು.

    ಕಳೆದ ವರ್ಷ ಎಕರೆಗೆ 107 ಟನ್ ಕಬ್ಬು ಬೆಳೆದ ನೀಲವಾಣಿ ಗ್ರಾಮದ ಯುವ ರೈತ ಶ್ರೀಕಾಂತ ಮಿರಾಶಿ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಕ್ಷೇತ್ರ ಮೇಲ್ವಿಚಾರಕ ವಿಷ್ಣು ಮಡಿವಾಳ ಕಾರ್ಯಕ್ರಮ ನಿರ್ವಹಿಸಿದರು.

    ತಾಲೂಕಿನಲ್ಲಿ 25 ಸಾವಿರ ಹೆಕ್ಟೇರ್ ಕಬ್ಬಿನ ಬೇಸಾಯ ನಡೆಯುತ್ತಿದೆ. ಈ ಭಾಗದಲ್ಲಿ ಸರಾಸರಿ ಇಳುವರಿ ಎಕರೆಗೆ 30 ರಿಂದ 33 ಟನ್ ಫಸಲು ಬರುತ್ತಿದೆ. ರೈತರು ಬೇಸಾಯದಲ್ಲಿ ವೈಜ್ಞಾನಿಕ ಕ್ರಮ, ಹೊಸ ಸಂಶೋಧನೆಗಳನ್ನು ಅಳವಡಿಸಿಕೊಳ್ಳಬೇಕು. ಆದಷ್ಟು ಸಾವಯವ ಗೊಬ್ಬರ ಬಳಕೆಗೆ ಆದ್ಯತೆ ನೀಡಿ, ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಬೇಕು. ಈ ಮೂಲಕ ಹೆಚ್ಚು ಇಳುವರಿ ಪಡೆಯಲು ಮುಂದಾಗಬೇಕು.
    | ಪಿ.ಐ. ಮಾನೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts