More

    ಪದವೀಧರ ಕ್ಷೇತ್ರದ ಚುನಾವಣೆ ಶಾಂತಿಯುತ

    ಕೋಲಾರ: ವಿಧಾನ ಪರಿಷತ್‌ನ ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಜಿಲ್ಲೆಯಾದ್ಯಂತ ಬುಧವಾರ ಶಾಂತಿಯುತ ಮತದಾನ ನಡೆದಿದ್ದು, ಶೇ.79.48 ಮತದಾನವಾಗಿದೆ. ಕಣದಲ್ಲಿದ್ದ 15 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.

    ಜಿಲ್ಲೆಯ 36 ಮತದಾನ ಕೇಂದ್ರಗಳಲ್ಲಿ ಬೆಳಗ್ಗೆ 8ಕ್ಕೆ ಮತದಾನ ಪ್ರಕ್ರಿಯೆ ಆರಂಭಗೊಂಡಿತು. ಎಲ್ಲೂ ಗೊಂದಲ ಕಂಡುಬರಲಿಲ್ಲ. ಬೆಳಗ್ಗೆ ಮತದಾನ ಮಂದಗತಿಯಲ್ಲಿ ಸಾಗಿದರೂ ಮಧ್ಯಾಹ್ನ 11ರ ನಂತರ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಯತ್ತ ಹೆಜ್ಜೆ ಹಾಕಿದರು. ಮಧ್ಯಾಹ್ನದ ವೇಳೆಗೆ ಮತದಾನ ಬಿರುಸುಗೊಂಡು ಸಂಜೆ 5ಕ್ಕೆ ಮುಕ್ತಾಯಗೊಂಡಿತು.

    ಕಡೇ ಕ್ಷಣದ ಮತಯಾಚನೆ: ನಗರದ ಜೂನಿಯರ್ ಕಾಲೇಜು ಮುಂಭಾಗ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಪಕ್ಷೇತರ ಅಭ್ಯರ್ಥಿಗಳ ಪರ ಆಯಾ ಅಭ್ಯರ್ಥಿಗಳ ಬೆಂಬಲಿಗರು ಪೆಂಡಾಲ್ ಹಾಕಿ ಮತದಾರರಿಗೆ ಅವರ ಕ್ರಮ ಸಂಖ್ಯೆ ಚೀಟಿ ಬರೆಯುವ, ಇತರ ನೆರವು ನೀಡುತ್ತ ಕಡೇ ಕ್ಷಣದ ಮತಯಾಚನೆ ಮಾಡುತ್ತಿದ್ದುದು ಕಂಡುಬಂತು.

    ತಹಸೀಲ್ದಾರ್ ಎಚ್ಚರಿಕೆ: ಒಬ್ಬ ಅಭ್ಯರ್ಥಿ ಪರ ಒಂದು ಪೆಂಡಾಲ್ ಹಾಕಿಕೊಳ್ಳಲು ಅವಕಾಶ ನೀಡಲಾಗಿತ್ತಾದರೂ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ನಿಂದ ತಲಾ 2 ಪೆಂಡಾಲ್ ಹಾಕಲಾಗಿತ್ತು. ತಹಸೀಲ್ದಾರ್ ಸೂಚನೆಯಂತೆ ಒಂದೊಂದು ಪೆಂಡಾಲ್ ತೆಗೆಯುವಂತೆ ಪಿಎಸ್‌ಐ ಅಣ್ಣಯ್ಯ, ಸಿಪಿಐ ರಂಗಶಾಮಯ್ಯ ಸೂಚಿಸಿ ಕೇಸು ದಾಖಲಿಸುವ ಎಚ್ಚರಿಕೆ ನೀಡಿದರು.

    ಇಷ್ಟಾದರೂ ಮೂರೂ ಪಕ್ಷಗಳ ಮುಖಂಡರು ಮೀನಮೇಷ ಎಣಿಸುತ್ತಿದ್ದುದನ್ನು ಗಮನಿಸಿದ ತಹಸೀಲ್ದಾರ್ ಶೋಭಿತಾ ಖಡಕ್ ಎಚ್ಚರಿಕೆ ನೀಡಿದ ನಂತರ ಪೆಂಡಾಲ್‌ಗೆ ಕಟ್ಟಿದ್ದ ಬ್ಯಾನರ್ ತೆರವುಗೊಳಿಸಿದರಲ್ಲದೆ ನೆರಳಿಗಾಗಿ ಪೆಂಡಾಲ್ ಇರಲೆಂದು ಅಧಿಕಾರಿಗಳಲ್ಲಿ ಮನವಿ ಮಾಡಿ ಉಳಿಸಿಕೊಂಡರು.

    ಮಾತಿನ ಚಕಮಕಿ: ಬೆಳಗ್ಗೆ ಮತದಾನ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ನಗರದ ಜೂನಿಯರ್ ಕಾಲೇಜಿನ ಮತಗಟ್ಟೆಗೆ ಬಂದಿದ್ದ ಕಾಂಗ್ರೆಸ್ ಅಭ್ಯರ್ಥಿ ರಮೇಶ್‌ಬಾಬು ಮತಯಾಚನೆ ಮಾಡುತ್ತಿದ್ದರು. ಮತಗಟ್ಟೆಗೆ 100 ಮೀಟರ್ ಅಂತರದಲ್ಲಿ ಮತಯಾಚನೆ ಮಾಡದಂತೆ ಪೊಲೀಸರು ಸೂಚಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಸ್ಥಳಕ್ಕೆ ಚುನಾವಣೆ ಅಧಿಕಾರಿ ಆಗಮಿಸಿದ ನಂತರ ಪರಿಸ್ಥಿತಿ ತಿಳಿಯಾಯಿತು.

    ಪರಸ್ಪರ ಅಂತರ ಮಾಯ: ಮತಗಟ್ಟೆಯ 100 ಮೀಟರ್ ಹೊರಗಡೆ ವಿವಿಧ ಪಕ್ಷಗಳ ಮುಖಂಡರು, ಶಿಕ್ಷಕ, ಉಪನ್ಯಾಸಕರ ಸಂಘಗಳ ಪದಾಧಿಕಾರಿಗಳು, ಮತದಾರರು ನೆರೆದಿದ್ದರಿಂದ ಪರಸ್ಪರ ಅಂತರ ಮಾಯವಾಗಿತ್ತು. ಪೊಲೀಸರು ಧ್ವನಿವರ್ಧಕದಲ್ಲಿ ಎಚ್ಚರಿಸಿ, ಗುಂಪು ಚದುರಿಸಿದರೂ ಕೆಲ ಸಮಯದ ನಂತರ ಯಥಾಪ್ರಕಾರ ಗುಂಪು ನೆರೆಯುತ್ತಿದ್ದುದ್ದರಿಂದ ಕರೊನಾತಂಕ ಇಲ್ಲದೆ ನಿರಾತಂಕವಾಗಿ ಮತದಾನ ಸಾಗಿತ್ತು.

    ಜಿಲ್ಲಾಧಿಕಾರಿ ಭೇಟಿ: ನಗರದ ಜೂನಿಯರ್ ಕಾಲೇಜಿನಲ್ಲಿರುವ 4 ಮತಗಟ್ಟೆಗಳಿಗೆ ಡಿಸಿ ಸಿ.ಸತ್ಯಭಾಮ ಭೇಟಿ ನೀಡಿ ಮತದಾನ ಪ್ರಕ್ರಿಯೆ ಪರಿಶೀಲಿಸಿದರು. ಇದಾದ ನಂತರ ಜಿಲ್ಲೆಯ ವಿವಿಧ ತಾಲೂಕು, ಹೋಬಳಿ ಮತಗಟ್ಟೆಗಳಿಗೆ ಭೇಟಿ ನೀಡಿದ್ದರು. ತಹಸೀಲ್ದಾರ್ ಆರ್.ಶೋಭಿತಾ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

    ಬೂತ್ ಒಳಗೆ ಪಾಲನೆ: ಮತಗಟ್ಟೆ ಸಿಬ್ಬಂದಿ ಕರೊನಾ ಮಾರ್ಗಸೂಚಿಯಂತೆ ಸುರಕ್ಷತಾ ಕ್ರಮಗಳೊಂದಿಗೆ ಕಾರ್ಯನಿರ್ವಹಿಸಿದರೆ ಮತದಾರನಿಗೂ ಎಎನ್‌ಎಂಗಳಿಂದ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್, ಗ್ಲೌಸ್ ನೀಡಿದ ನಂತರವಷ್ಟೇ ಹಕ್ಕು ಚಲಾಯಿಸಲು ಅವಕಾಶ ಕಲ್ಪಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts