ಕೋಲಾರ: ಇಬ್ಬರ ನಡುವೆ ಶುರುವಾದ ಜಗಳದಲ್ಲಿ ಮೂರನೇ ವ್ಯಕ್ತಿಯ ಕೊಲೆಯಾಗಿದೆ. ರಾಮಸಂದ್ರದ ಅಂಬರೀಶ್ ಕೊಲೆಯಾದವ.
ಘಟನೆ ವಿವರ: ತಾಲೂಕಿನ ರಾಮಸಂದ್ರದ ಪ್ರವೀಣ್ ಗುರುವಾರ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದಾಗ ಖಾಸಗಿ ಕಂಪನಿ ವಾಹನವು ಪಕ್ಕದಲ್ಲೇ ಹಾದುಹೋಗಿದ್ದನ್ನು ಪ್ರಶ್ನಿಸಿ ಸರಿಯಾಗಿ ನೋಡಿಕೊಂಡು ಚಾಲನೆ ಮಾಡೋಕೆ ಆಗಲ್ವ, ಜೀವ ಹೋದರೆ ಏನು ಗತಿ ಎಂದು ಚಾಲಕನನ್ನು ಪ್ರಶ್ನಿಸಿದ್ದಾನೆ.
ಈ ವೇಳೆ ಅದೇ ಗ್ರಾಮದ ಚಂದ್ರ ಮತ್ತು ಸಹಚರರು ಕಂಪನಿ ವಾಹನ ಚಾಲಕನ ಪರವಾಗಿ ಪ್ರವೀಣ್ ವಿರುದ್ಧ ಗಲಾಟೆ ಮಾಡಿದ್ದಾರೆ. ಈ ವೇಳೆ ಪ್ರವೀಣ್ ಮನೆಗೆ ಹೋಗಿದ್ದಾನೆ. ಈ ಬೆನ್ನಲ್ಲೇ ಚಂದ್ರು ಮತ್ತು ಆತನ ಬೆಂಬಲಿಗರು ಹಿಂಬಾಲಿಸಿಕೊAಡು ಹೋಗಿ ಪ್ರವೀಣ್ ಮನೆಯ ಬಳಿಯೇ ಲಾಂಗು, ಮಚ್ಚಿನಿಂದ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಇದನ್ನು ತಡೆಯಲು ಬಂದ ಮುನಿರಾಜು ಎಂಬುವರ ಮೇಲೂ ಹಲ್ಲೆ ಮಾಡಲಾಗಿದೆ. ಘಟನೆ ಸಂದರ್ಭ ಸ್ಥಳಕ್ಕೆ ಬಂದ ರಾಮಸಂದ್ರ ಅಂಬರೀಶ್ ಗಲಾಟೆ ಬಗ್ಗೆ ಪ್ರಶ್ನಿಸಿದ್ದಕ್ಕೆ ಕೋಪಗೊಂಡ ಚಂದ್ರ ಹಾಗೂ ಆತನ ತಂಡ ಏಕಾಏಕಿ ಅಂಬರೀಶ್ ಮೇಲೆ ಮಾರಕಾಸ್ತçಗಳಿಂದ ಹಲ್ಲೆಗೆ ಮುಂದಾಗಿದ್ದಾರೆ. ಅಂಬರೀಶ್ ತಪ್ಪಿಸಿಕೊಂಡು ಹೋದರೂ ಅಟ್ಟಾಡಿಸಿಕೊಂಡು ಹೋಗಿ ಗ್ರಾಮದ ಸಮೀಪ ನಿರ್ಜನ ಪ್ರದೇಶದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಘಟನೆ ಸ್ಥಳಕ್ಕೆ ಎಫ್‌ಎಸ್‌ಐಎಲ್ ಹಾಗೂ ಪೊಲೀಸ್ ಶ್ವಾನ ದಳದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ತಾಲೂಕಿನ ವೇಮಗಲ್ ಠಾಣೆಯಲ್ಲಿ ದೂರು ದಾಖಲಾಗಿದೆ.
- ಗ್ರಾಮಸ್ಥರ ಆರೋಪ:
ಗ್ರಾಮದಲ್ಲಿ ಚಂದ್ರ, ಶ್ರೀನಿವಾಸ್, ಮಲ್ಲೇಶ್, ಮಂಜುನಾಥ್ ಗ್ಯಾಂಗ್ ಕಟ್ಟಿಕೊಂಡು ಗ್ರಾಮದಲ್ಲಿ ಆಗಾಗ ಗಲಾಟೆ ಮಾಡುತ್ತಾರೆ. ಅಲ್ಲದೆ ಖಾಸಗಿ ಕಂಪನಿ ಬಳಿ ಅಕ್ರಮವಾಗಿ ಗಾಂಜಾ, ಮದ್ಯ ಮಾರಾಟ ಮಾಡುತ್ತಾರೆ. ಇದನ್ನು ಪ್ರಶ್ನಿಸಿದರೆ ಗ್ಯಾಂಗ್ ಕಟ್ಟಿಕೊಂಡು ಬಂದು ಹಲ್ಲೆ ಮಾಡುತ್ತಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಗಲಾಟೆ ನಡೆಯುವ ವೇಳೆ ಪ್ರಶ್ನೆ ಮಾಡಿದ್ದ ಅಂಬರೀಶ್‌ನನ್ನು ಹತ್ಯೆ ಮಾಡಿದ್ದಾರೆ. ಕೊಲೆಯಾದವನೂ ರೌಡಿಶೀಟರ್ ಆಗಿದ್ದು, ಬೆಂಗಳೂರಿನ ವಿವಿಧ ಠಾಣೆ ವ್ಯಾಪ್ತಿಗಳಲ್ಲಿ ಪ್ರಕರಣ ದಾಖಲಾಗಿದೆ. ಅಂಬರೀಶ್‌ಗೂ ಅಲ್ಲಿ ನಡೆದ ಗಲಾಟೆಗೂ ಸಂಬಂಧವಿರಲಿಲ್ಲ. ಆದರೆ ಚಂದ್ರ ಹಾಗೂ ಅಂಬರೀಶ್ ನಡುವೆ ಹಳೆಯ ದ್ವೇಷವಿತ್ತು. ಹಾಗಾಗಿಯೇ ಕೊಲೆ ಮಾಡಲಾಗಿದೆ ಎನ್ನಲಾಗಿದೆ.