More

    ಪಡಿತರ ವಿತರಣೆಯಲ್ಲಿ ಭಾರಿ ಅವ್ಯವಹಾರ

    ಬ್ಯಾಡಗಿ: ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಾರ್ಯಾಲಯದ ಪಡಿತರ ವಿತರಣೆಯಲ್ಲಿ ಭಾರಿ ಅವ್ಯವಹಾರಗಳು ನಡೆದಿದ್ದು, ಸಮರ್ಪಕವಾಗಿ ಆಹಾರ ಪೂರೈಕೆ ಮಾಡುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಈ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ತಾ.ಪಂ. ಅಧ್ಯಕ್ಷೆ ಸವಿತಾ ಸುತ್ತಕೋಟಿ ಆಗ್ರಹಿಸಿದರು.

    ಪಟ್ಟಣದ ಸುವರ್ಣ ಸೌಧದಲ್ಲಿ ಗುರುವಾರ ಏರ್ಪಡಿಸಿದ್ದ ತಾ.ಪಂ. ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ದಾಖಲೆ ತಿದ್ದುಪಡಿ, ನಿಯಮ ಉಲ್ಲಂಘನೆ, ಪ್ರತ್ಯೇಕ ವಾಹನದಲ್ಲಿ ಪಡಿತರ ಸಾಗಣೆ ಸೇರಿದಂತೆ ಹಲವು ಆರೋಪಗಳು ಕೇಳಿ ಬಂದಿವೆ. ಮೇಲಧಿಕಾರಿಗಳು ಕೂಡಲೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

    ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಮಲಿಂಗಪ್ಪ ಅರಳಗುಪ್ಪಿ, ಎರಡು ತಿಂಗಳು ಕರೊನಾ ಸಮಸ್ಯೆಯಿಂದ ಪೂರೈಕೆಯಲ್ಲಿ ವ್ಯತ್ಯಾಸವಾಗಿದೆ. ಈ ಹಿಂದೆ ಕೆಲವೊಂದು ಘಟನೆಗಳು ನಡೆದಿದ್ದು, ಇನ್ನುಮುಂದೆ ಸರಿಪಡಿಸಲಾಗುವುದು ಎಂದರು.

    ಸ್ಥಾಯಿ ಸಮಿತಿ ಚೇರ್ಮನ್ ಯಲ್ಲನಗೌಡ್ರ ಕರೆಗೌಡ್ರ ಮಾತನಾಡಿ, ತೋಟಗಾರಿಕೆ ಇಲಾಖೆಯಲ್ಲಿ ರೈತರಿಗಾಗಿ ಹಲವು ಯೋಜನೆಗಳಿದ್ದರೂ ಪ್ರಗತಿ ಪತ್ರದಲ್ಲಿ ನಮೂದಿಸದೆ, ಜನಪ್ರತಿನಿಧಿಗಳನ್ನು ದಿಕ್ಕು ತಪ್ಪಿಸುತ್ತಿದ್ದೀರಿ. ಫಲಾನುಭವಿಗಳು, ಖರ್ಚಾದ ಅನುದಾನ, ಬಾಕಿ ಉಳಿದ ಮೊತ್ತ, ವಾರ್ಷಿಕ ಗುರಿಗಳ ದಾಖಲೆಗಳನ್ನು ತೋರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಹಾಯಕ ನಿರ್ದೇಶಕ ಅಶೋಕ ಕುರುಬರ ಸಮರ್ಪಕವಾಗಿ ಉತ್ತರಿಸದೆ ತಡಕಾಡಿದರು. ಮುಂದಿನ ಸಭೆಯಲ್ಲಿ ಎಲ್ಲ ದಾಖಲೆ ಒದಗಿಸುವೆ ಎಂದರು.

    ತಾ.ಪಂ. ಉಪಾಧ್ಯಕ್ಷೆ ಶಾಂತವ್ವ ದೇಸಾಯಿ ಮಾತನಾಡಿ, ಕಳೆದ ನಾಲ್ಕು ದಿನಗಳಿಂದ ತಾಲೂಕಿನಾದ್ಯಂತ ಸಿ.ಡಿ., ರಸ್ತೆ ಹಾಗೂ ಅಲ್ಲಲ್ಲಿ ಮನೆಗಳ ಕುಸಿತ, ಬೆಳೆಗಳು ನೆಲಕ್ಕುರುಳಿವೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು.

    ತಾ.ಪಂ. ಇಒ ಎ.ಟಿ. ಜಯಕುಮಾರ ಉತ್ತರಿಸಿ, 21 ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಪ್ರತಿದಿನ ಸಂಜೆ 5 ಗಂಟೆಯೊಳಗೆ ಹಾನಿ, ಸಮಸ್ಯೆ ಕುರಿತು ವರದಿ ನೀಡಲು ತಿಳಿಸಲಾಗಿದೆ. ತಹಸೀಲ್ದಾರರಿಗೆ ವರದಿ ನೀಡಲಾಗುವುದು ಎಂದರು.

    ಹಂತಹಂತವಾಗಿ ಯೂರಿಯಾ ಪೂರೈಕೆ

    ತಾ.ಪಂ. ಅಧ್ಯಕ್ಷೆ ಮಾತನಾಡಿ, ತಾಲೂಕಿನಾದ್ಯಂತ ಗೋವಿನಜೋಳ, ಹತ್ತಿ, ಶೇಂಗಾ ಇತರೆ ಬೆಳೆಗಳು ಎರಡು ತಿಂಗಳಾಗುತ್ತ ಬಂದಿದ್ದು, ಯೂರಿಯಾ ಬೇಡಿಕೆ ಹೆಚ್ಚಿದ್ದು, ರೈತರಿಗೆ ಗೊಬ್ಬರ ಸಮಸ್ಯೆ ಉಂಟಾಗದಂತೆ ಕ್ರಮ ವಹಿಸಲು ಸೂಚಿಸಿದರು.

    ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಮರಗಣ್ಣನವರ ಮಾತನಾಡಿ, 4845 ಮೆಟ್ರಿಕ್ ಟನ್ ಯೂರಿಯಾ ಬೇಡಿಕೆಯಿತ್ತು. ಈವರೆಗೆ 4500 ಟನ್ ಪೂರೈಕೆಯಾಗಿದೆ. ರೈಲ್ವೆ ವ್ಯಾಗೀನ್​ನಿಂದ ಸರಬರಾಜು ವೇಳೆ ಮೂರ್ನಾಲ್ಕು ದಿನ ವಿಳಂಬವಾಗುತ್ತಿದ್ದು, ಹಂತಹಂತವಾಗಿ ಪೂರೈಕೆಯಾಗುತ್ತಿದೆ ಎಂದು ತಿಳಿಸಿದರು.

    ತಾಲೂಕು ಪಶುವೈದ್ಯಾಧಿಕಾರಿ ಎಂ. ಗೋಪಿನಾಥ, ಗ್ರಾಮೀಣ ನೀರು ಪೂರೈಕೆ ಇಂಜಿನಿಯರ್ ಆರ್.ಎಂ. ಸೊಪ್ಪಿನಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಕೆ. ರುದ್ರಮನಿ, ತಾ.ಪಂ. ವ್ಯವಸ್ಥಾಪಕ ಪ್ರಕಾಶ ಹಿರೇಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts