More

    ನೆರೆ ಸಂತ್ರಸ್ತ ಬಡವರಿಗೆ ಅರಣ್ಯ ಇಲಾಖೆ ಬರೆ

    ಯಲ್ಲಾಪುರ: ಇಡೀ ದೇಶದಲ್ಲಿ ಅಧಿಕಾರಿಗಳು ಕರೊನಾ ವೈರಸ್ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದರೆ ತಾಲೂಕಿನ ಇಡಗುಂದಿ ವಲಯದ ಅರಣ್ಯ ಸಿಬ್ಬಂದಿ ಮಾತ್ರ ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ, ನೆರೆ ಸಂತ್ರಸ್ತ ಕುಟುಂಬಗಳ ಅತಿಕ್ರಮಣ ತೆರವುಗೊಳಿಸುವಲ್ಲಿ ನಿರತರಾಗಿದ್ದಾರೆ ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ಎ. ರವೀಂದ್ರನಾಥ ನಾಯ್ಕ ಆಕ್ರೋಶ ವ್ಯಕ್ತಪಡಿಸಿದರು.

    ತಾಲೂಕಿನ ಇಡಗುಂದಿ ಗ್ರಾ.ಪಂ. ವ್ಯಾಪ್ತಿಯ ಗುಳ್ಳಾಪುರದಲ್ಲಿ ಅರಣ್ಯ ಇಲಾಖೆಯಿಂದ ದಬ್ಬಾಳಿಕೆಗೊಳಗಾದ ನೆರೆ ಸಂತ್ರಸ್ತ, ಅತಿಕ್ರಮಣದಾರರ ಮನೆಗೆ ಶನಿವಾರ ಭೇಟಿ ನೀಡಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

    ಕಾರ್ವಿುಕ ಸಚಿವರ ಊರಿನ ಸಮೀಪದಲ್ಲೇ ಈ ಘಟನೆ ನಡೆದಿರುವುದು ವಿಚಿತ್ರ. ಗುಳ್ಳಾಪುರದ ಸ.ನಂ. 3ರ ಅರಣ್ಯ ಪದೇಶದಲ್ಲಿ ಈರಮ್ಮ ದೇವರಾಜ ಆಚಾರಿ ಎಂಬುವರು ಅನಾದಿ ಕಾಲದಿಂದ ಕಬ್ಜಾ ಭೊಗವಟೆ ಮಾಡಿ, ಮನೆ ಕಟ್ಟಿಕೊಂಡು ಸಾಗುವಳಿ ಮಾಡುತ್ತಿದ್ದಾರೆ. ಅತಿಕ್ರಮಣ ಭೂಮಿ ಮಂಜೂರಿಗಾಗಿ ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದಾರೆ. 15 ವರ್ಷಗಳ ಹಿಂದೆ ಈರಮ್ಮ ಅವರ ಗಂಡ ದೇವರಾಜ ನಿಧನರಾಗಿದ್ದು, ಅವರ ಸಮಾಧಿಯೂ ಅಲ್ಲೇ ಇದೆ ಎಂದರು.

    ಅತಿಕ್ರಮಣ ಭೂಮಿ ಮಂಜೂರಿಗಾಗಿ 1980ರಿಂದಲೂ ನಿರಂತರವಾಗಿ ವಿವಿಧ ಕಾನೂನಿನಡಿ ಅರ್ಜಿ ಸಲ್ಲಿಸುತ್ತ ಬಂದಿದ್ದಾರೆ. ಕಳೆದ ಮಳೆಗಾಲದಲ್ಲಿ ಅತಿವೃಷ್ಟಿಯಿಂದ ಮನೆ ಸಂಪೂರ್ಣ ಹಾನಿಗೊಳಗಾಗಿದೆ. ಹೊಸ ಮನೆ ಕಟ್ಟಿಸಿಕೊಳ್ಳಲು ಸರ್ಕಾರ 1 ಲಕ್ಷ ರೂ. ಮಂಜೂರು ಮಾಡಿದೆ. ಮನೆ ನಿರ್ವಣಕ್ಕೆ ಒಟ್ಟು ಐದು ಲಕ್ಷ ರೂ. ಮಂಜೂರಾಗಿರುವ ಘೊಷಣ ಪತ್ರವನ್ನೂ ನೀಡಲಾಗಿದೆ. ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸಬಾರದೆಂಬ ನಿಯಮವಿದೆ. ಆದರೂ, ಕಾನೂನಿಗೆ ವ್ಯತಿರಿಕ್ತವಾಗಿ ಅರಣ್ಯ ಸಿಬ್ಬಂದಿ ಒಕ್ಕಲೆಬ್ಬಿಸಲು ಮುಂದಾಗಿರುವುದು ಸರಿಯಲ್ಲ. ಕ್ಷೇತ್ರದ ಪ್ರಭಾವಿ ಜನಪ್ರತಿನಿಧಿಗಳ ಕಾನೂನು ಬಾಹಿರ ಅರಣ್ಯ ಒತ್ತುವರಿಯನ್ನು ತೆರವುಗೊಳಿಸದ ಇಲಾಖೆ, ಬಡ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸುವಲ್ಲಿ ಮುಂದಾಗಿದೆ. ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣಿ ಎಂಬ ನೀತಿ ಅನುಸರಿಸುತ್ತಿರುವುದು ಖಂಡನೀಯ ಎಂದರು.

    ಅತಿಕ್ರಮಣದಾರ ಕುಟುಂಬದ ಈರಮ್ಮ ದೇವರಾಜ ಆಚಾರಿ, ರವೀಂದ್ರ ಆಚಾರಿ, ರಾಧಾ ಗುನಗಿ, ಗ್ರಾಮಸ್ಥರಾದ ರಾಘವೇಂದ್ರ ನಾಯ್ಕ, ಸುಧಾಕರ ಆಚಾರಿ, ಎಂ.ಡಿ. ಗುನಗಿ, ಮಾರುತಿ ನಾಯ್ಕ, ಶೇಖರ ಇತರರಿದ್ದರು.

    ನ್ಯಾಯಾಂಗ ನಿಂದನೆ ಪ್ರಕರಣ:
    ಅರಣ್ಯ ಅತಿಕ್ರಮಣದಾರರಿಗೆ ಆತಂಕ ಉಂಟು ಮಾಡಬಾರದೆಂದು ಹೋರಾಟಗಾರರ ವೇದಿಕೆ ಉಚ್ಚ ನ್ಯಾಯಾಲಯದಲ್ಲಿ ದಾಖಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮಧ್ಯಂತರ ಆದೇಶವನ್ನು ಅರಣ್ಯ ಇಲಾಖೆ ಸಿಬ್ಬಂದಿ ಉಲ್ಲಂಘಿಸಿದ್ದು, ಅವರ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುವುದು ಎಂದು ಎ. ರವೀಂದ್ರನಾಥ ನಾಯ್ಕ ಎಚ್ಚರಿಗೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts