More

    ನೀರು ಹರಿಸುವ ವಿಚಾರಕ್ಕೆ ರೈತನ ಹತ್ಯೆ

    ಹೊಳೆಹೊನ್ನೂರು: ಭದ್ರಾವತಿ ತಾಲೂಕಿನ ಭದ್ರಾಪುರ ಗ್ರಾಮದಲ್ಲಿ ಗುರುವಾರ ರಾತ್ರಿ ಜಮೀನಿಗೆ ನೀರು ಹರಿಸುವ ಕಾಲುವೆ ವಿಚಾರದಲ್ಲಿ ನಡೆದ ಜಗಳ ವಿಕೋಪಕ್ಕೆ ತಿರುಗಿ ವ್ಯಕ್ತಿಯ ಕೊಲೆಯಲ್ಲಿ ಅಂತ್ಯವಾಗಿದೆ. ಜತೆಗೆ ಐವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.

    ಕರಿಯಪ್ಪ (55) ಮೃತರು. ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಜಮೀನಿಗೆ ನೀರುಣಿಸಲು ಹೋದಾಗ ಗಲಾಟೆ ಸಂಭವಿಸಿದೆ. ಕರಿಯಪ್ಪನ ಮಕ್ಕಳಾದ ಮನೋಹರ್ (30), ನಾಗರಾಜ್(28), ಕರಿಯಪ್ಪನ ಸಹೋದರ ಬೀರಪ್ಪ (50), ಬೀರಪ್ಪನ ಮಗ ನಾಗರಾಜ್ (33) ಹಾಗೂ ಕರಿಯಪ್ಪನ ಮತ್ತೊಬ್ಬ ಸಹೋದರನ ಮಗ ಅರುಣ್ (26) ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ತೀವ್ರ ಗಾಯವಾಗಿದ್ದ ಬೀರಪ್ಪ ಶಿವಮೊಗ್ಗದ ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದ ನಾಲ್ಕು ಜನ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಳೆಹೊನ್ನೂರು ಪೊಲೀಸರು ಪರಮೇಶಪ್ಪ, ರಮೇಶ್, ಜಗದೀಶ್, ಮಂಜಪ್ಪ, ಸಂಜಯ್, ಗೌತಮ್ ಅಭಿಷೇಕ್, ಶರತ್, ವಿಕ್ರಮ್ ಕೃತಿಕಾ ಸೇರಿ 10 ಜನರನ್ನು ಬಂಧಿಸಿದ್ದಾರೆ.

    ಭದ್ರಾಪುರದ ಸರ್ವೆ ನಂಬರ್ 196ರಲ್ಲಿ 13 ಎಕರೆ 27 ಗುಂಟೆ ಜಮೀನು ಮೃತ ಕರಿಯಪ್ಪನ ತಂದೆಯ 3 ಜನ ಸಹೋದರಾದ ಮಾದಾಳಪ್ಪ, ಹಾಲಪ್ಪ, ನಾಗಪ್ಪ ಮಧ್ಯೆ 4.30 ಗುಂಟೆಯಂತೆ ಸಮನಾಗಿ ಹಂಚಿಕೆಯಾಗಿತ್ತು. ಮಾದಾಳಪ್ಪ ಅವರ ಜಮೀನು ಮಕ್ಕಳಾದ ಕರಿಯಪ್ಪ, ಸಹೋದರ ಪಾಲಿಗೆ ಬಂದಿತ್ತು. ಹಾಲಪ್ಪ ಅವರಿಗೆ ಸೇರಿದ ಜಮೀನು ಬಡ್ಡಿ ಪರಮೇಶಪ್ಪನ ಕುಟುಂಬಸ್ಥರಿಗೆ ಸೇರಿತ್ತು. ಎರಡು ಕುಟುಂಬಸ್ಥರ ನಡುವೆ ಜಮೀನಿಗೆ ನೀರು ಹರಿಸುವ ಕಾಲುವೆಯ ವಿಚಾರದಲ್ಲಿ ಪದೇಪದೆ ಗಲಾಟೆಗಳಾಗುತ್ತಿದ್ದವು. ಕಳೆದೆರಡು ದಿನಗಳ ಹಿಂದೆ ಗ್ರಾಮಸ್ಥರು ನೀರುಗಾಲುವೆ ವಿಚಾರವನ್ನು ರಾಜಿ ಪಂಚಾಯಿತಿ ಮಾಡಿ ಬಗೆಹರಿಸಲು ತೀರ್ವನಿಸಿ ಕುಟುಂಬಸ್ಥರನ್ನು ಪಂಚಾಯಿತಿಗೆ ಕರೆದರೂ ಹಾಲಪ್ಪನವರ ಕುಟುಂಬ ಪಂಚಾಯಿತಿಗೆ ಬರಲು ನಿರಾಕರಿಸಿದರಿಂದ ಪಂಚಾಯಿತಿ ನಡೆಯಲಿಲ್ಲ.

    ಗುರುವಾರ ರಾತ್ರಿ ಕರಿಯಪ್ಪ ಒಬ್ಬರೇ ಜಮೀನಿಗೆ ನೀರುಣಿಸಲು ಹೋಗುವಾಗ ಹಾಲಪ್ಪನ ಕುಟುಂಬದ ಬಡ್ಡಿ ಪರಮೇಶ್ವರಪ್ಪ , ತನ್ನ 9 ಜನ ಸಹಚರರೊಂದಿಗೆ ಬಂದು ಜಗಳ ತೆಗೆದಿದ್ದಾನೆ. ಕರಿಯಪ್ಪನ ಜತೆ ಹಾಲಪ್ಪನ ಕುಟುಂಬದವರು ಗಲಾಟೆ ಮಾಡುತ್ತಿರುವುದನ್ನು ತಿಳಿದು ಕರಿಯಪ್ಪನ ಕಡೆಯವರು ಸ್ಥಳಕ್ಕೆ ಬಂದಿದ್ದಾರೆ. ಎರಡು ಗುಂಪಿನ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಕರಿಯಪ್ಪ ಆತನ ಮಕ್ಕಳ ಮೇಲೆ ಹಲ್ಲೆಯಾಗುವುದನ್ನು ತಪ್ಪಿಸಲು ಹೋದಾಗ ಕರಿಯಪ್ಪನ ಮೇಲೆ ಮಾರಣಾಂತಿಕ ಹಲ್ಲೆಯಾಗಿ ರಕ್ತಸ್ರಾವವಾಗಿ ಸ್ಥಳದಲ್ಲಿಯೆ ಸಾವನ್ನಪ್ಪಿದ್ದಾನೆ. ಕರಿಯಪ್ಪನಿಗೆ ಪತ್ನಿ, ಒಂದು ಹೆಣ್ಣು, ಇಬ್ಬರು ಗಂಡು ಮಕ್ಕಳಿದ್ದಾರೆ. ಹೆಣ್ಣು ಮಗಳಿಗೆ ಮದುವೆ ಮಾಡಿ ಕೊಟ್ಟಿದ್ದಾರೆ.

    ಗ್ರಾಮಕ್ಕೆ ಡಿವೈಎಸ್ಪಿ ಸುಧಾಕರ ನಾಯಕ್, ಎಎಸ್ಪಿ ಎಚ್.ಟಿ.ಶೇಖರ್, ಸಿಪಿಐ ಮಂಜುನಾಥ್, ಪಿಎಸ್​ಐ ಸುರೇಶ್ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ 50ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಸೂಕ್ತ ಬಂದೊಬಸ್ತ್ ಮಾಡಲಾಗಿದೆ. ಕರಿಯಪ್ಪನ ಕಳೆದುಕೊಂಡ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

    ಅರ್ಧಕ್ಕೆ ನಿಂತ ಮನೆ, ಮದುವೆ: ಕರಿಯಪ್ಪನ ಮೊದಲ ಮಗ ಮನೋಹರನ ಮದುವೆ ಮುಂದಿನ ತಿಂಗಳು ಚನ್ನಗಿರಿ ಮೂಲದ ಯುವತಿಯೊಂದಿಗೆ ನಿಶ್ಚಯವಾಗಿ ನಿಶ್ಚಿತಾರ್ಥ ಸಮಾರಂಭ ಮಾಡಿದ್ದರು. ವಾಸವಿರುವ ಮನೆ ಹಳೆಯದಾಗಿದ್ದು ಮನೆಯ ಹಿಂಭಾಗ ಹೊಸ ಮನೆ ನಿರ್ವಿುಸಲು ಆರಂಭಿಸಿದ್ದರು. ಕಟ್ಟಡ ಗಿಲಾವಿನ ಹಂತಕ್ಕೆ ತಲುಪಿದೆ. ಕುಟುಂಬದೊಂದಿಗೆ ಸಂತೋಷವಾಗಿ ಇರಬೇಕೆಂದು ಕಸನು ಕಂಡಿದ್ದ ಕರಿಯಪ್ಪನ ಕೊಲೆ ಪ್ರಕರಣ ಮನೆ, ಮದುವೆ ಅರ್ಧದಲ್ಲಿಯೆ ನಿಲ್ಲುವಂತೆ ಮಾಡಿದೆ.

    ಹಿಂದೆಯೂ ಕೊಲೆ ಮಾಡಿದ್ದರು! ಕರಿಯಪ್ಪನ ಕುಟುಂಬದ ಮೇಲೆ ಹಲ್ಲೆ ನಡೆಸಿ ಕರಿಯಪ್ಪನನ್ನು ಕೊಲೆ ಮಾಡಿರುವ ಪರಮೇಶ್ವರಪ್ಪ ಹಾಗೂ ಸಹೋದರರು ಕಳೆದ 22 ವರ್ಷಗಳ ಹಿಂದೆ ಇದೇ ಗ್ರಾಮದ ಸಂಬಂಧಿ ಉಚ್ಚಂಗಪ್ಪನನ್ನು ಜಮೀನು ವಿಚಾರದಲ್ಲಿ ಕೊಲೆ ಮಾಡಿ 10 ವರ್ಷ ಕಾರಾಗೃಹ ಶಿಕ್ಷೆ ಅನುಭವಿಸಿ ಬಂದಿದ್ದರು. ಕಳೆದ ಆರು ವರ್ಷಗಳ ಹಿಂದೆ ಇದೇ ಗ್ರಾಮದಲ್ಲಿ ಜಮೀನಿಗೆ ಹೋಗುವ ದಾರಿ ವಿಚಾರವಾಗಿ ಪ್ರಕಾಶ್, ರಮೇಶ್ ಹಾಗೂ ಚಂದ್ರು ಅವರನ್ನು ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಕೊಲೆ ಪ್ರಕರಣ ಮಾಸುವ ಮುನ್ನವೇ ಈ ಘಟನೆ ನಡೆದಿದ್ದು ಗ್ರಾಮಸ್ಥರು ಆತಂಕಕೊಳಗಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts