More

    ನೀರು ಪೂರೈಕೆಯಲ್ಲಿ ತೊಂದರೆಯಾಗದಿರಲಿ

    ಶ್ರೀರಂಗಪಟ್ಟಣ: ಕ್ಷೇತ್ರದ ಜನರಿಗೆ ನೀರು ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಉಂಟಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಒಂದು ವೇಳೆ ಕೊರತೆ ಉಂಟಾಗಿದ್ದಲ್ಲಿ ತಕ್ಷಣವೇ ನನ್ನ ಗಮನಕ್ಕೆ ತರಬೇಕು ಎಂದು ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಸೂಚಿಸಿದರು.

    ಪಟ್ಟಣದ ಪುರಸಭೆ ಸಂಭಾಗಣದಲ್ಲಿ ಸೋಮವಾರ ತಾಪಂ ಇಒ ವೀಣಾ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ನಡೆಸಿದ ತುರ್ತು ಸಭೆಯಲ್ಲಿ ಮಾತನಾಡಿದ ಅವರು, ಯಾವ ಗ್ರಾಮಗಳಿಗೆ ನೀರು ಪೂರೈಕೆಯಾಗುತ್ತಿಲ್ಲ ಎಂಬುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಶುದ್ಧ ಕುಡಿಯುವ ನೀರು ಪೋಲಾಗದಂತೆ ಜನರಿಗೆ ತಲುಪಬೇಕು. ಜತೆಗೆ ನೀರಿನ ತೊಟ್ಟಿಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.

    ತಾಲೂಕಿನ ಹೊಸಹಳ್ಳಿ ಗ್ರಾಮದ ಕೆಲ ಬಡಾವಣೆಯ ನಿವಾಸಿಗಳಿಗೆ ಟ್ಯಾಂಕರ್‌ನಲ್ಲಿ ನೀರು ಪೂರೈಸಲಾಗುತ್ತಿದ್ದು, ಈ ಸಮಸ್ಯೆಗೆ ತುರ್ತು ಕ್ರಮ ಕೈಗೊಂಡು ತಕ್ಷಣವೇ ಸಮಸ್ಯೆ ನಿವಾರಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಇಂಜಿನಿಯರ್ ರಾಮಕೃಷ್ಣೇಗೌಡ ಹಾಗೂ ಬಹುಗ್ರಾಮಗಳ ಕುಡಿಯುವ ನೀರು ಯೋಜನೆ ಅಧಿಕಾರಿ ಪ್ರಸನ್ನ ಅವರಿಗೆ ಸೂಚನೆ ನೀಡಿದರು.

    ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಿ. ಆದರೆ ನಿಮ್ಮ ಕರ್ತವ್ಯದಲ್ಲಿ ರಾಜಕಾರಣಿಗಳಾಗಬೇಡಿ. ನಾನು ಯಾರಿಗೂ ಕೇಡು ಬಯಸುವುದಿಲ್ಲ, ಆ ಮನಸ್ಥಿತಿಯೂ ನನ್ನಲ್ಲಿಲ್ಲ. ಆದರೆ, ಒಂದಷ್ಟು ಅಧಿಕಾರಿಗಳ ಗುಂಪು ನನ್ನ ವಿರುದ್ಧ ಷಡ್ಯಂತ್ರ ರೂಪಿಸಿ ಪ್ರಚೋದಿಸುವ ಉದ್ದೇಶದಲ್ಲಿದ್ದೀರಿ. ನನ್ನನ್ನು ಕೆಟ್ಟವನನ್ನಾಗಿ ಮಾಡಬೇಡಿ ಎಂದು ಕೆಲ ಪಿಡಿಒಗಳಿಗೆ ಶಾಸಕರು ಎಚ್ಚರಿಕೆ ನೀಡಿದರು.

    ಇದಕ್ಕೂ ಮೊದಲು ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ, ಡಿಎಚ್‌ಒ ಡಾ.ಮೋಹನ್, ಆರ್‌ಸಿಎಚ್ ಡಾ.ಅನಿಲ್, ಟಿಎಚ್‌ಒ ಡಾ.ವೆಂಕಟೇಶ್ ಹಾಗೂ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಮಾರುತಿ ಅವರೊಂದಿಗೆ ಸಭೆ ನಡೆಸಿದರು.

    ಚಿಕಿತ್ಸೆಗಾಗಿ ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಔಷಧಕ್ಕೆ ಹೊರಗಿನ ಅಂಗಡಿಗಳಿಗೆ ಚೀಟಿ ಬರೆಯದೆ ಸರ್ಕಾರದಿಂದ ನೀಡಲಾಗುವ ಔಷಧಗಳನ್ನು ವಿತರಿಸಬೇಕು. ಒಂದು ವೇಳೆ ಲಭ್ಯವಿರದ ಔಷಧ, ಚಿಕತ್ಸೆಗೆ ಬೇಕಿರುವ ಸೌಕರ್ಯ ಮತ್ತು ಸೌಲಭ್ಯಗಳು ಕುರಿತು ಪಟ್ಟಿ ಮಾಡಿ ತಮ್ಮ ಗಮನಕ್ಕೆ ತರಬೇಕು. ನೀವೇ ಪಟ್ಟಿ ಮಾಡಿ ತರಬಹುದಾದ ಔಷಧ ಅಥವಾ ಸಲಕರಣೆಗಳನ್ನು ಆಸ್ಪತ್ರೆಯ ರಕ್ಷ ಸಮಿತಿ ನಿಧಿಯಲ್ಲಿ ಸದಸ್ಯರೊಂದಿಗೆ ಚರ್ಚಿಸಿ ತೀರ್ಮಾನಿಸಿ ಖರೀದಿಸಬೇಕು. ಇದಕ್ಕೆ ಬೇಕಿರುವ ನೆರವಿಗೆ ಕೈಜೋಡಿಸುವುದಾಗಿ ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts