More

  ಬರ ಪರಿಹಾರಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ

  ಶ್ರೀರಂಗಪಟ್ಟಣ: ಕನ್ನಂಬಾಡಿ ಅಣೆಕಟ್ಟೆಯಲ್ಲಿ ನೀರಿದ್ದರೂ ನಾಡಿನ ಕೃಷಿಗೆ ನೀರು ಕೊಡದೆ ಕೃತಕ ಬರ ಸೃಷ್ಟಿಸಿದ ರಾಜ್ಯ ಕಾಂಗ್ರೆಸ್ ಸರ್ಕಾರ ನಷ್ಟ ಅನುಭವಿಸಿದ ಪ್ರತಿ ರೈತರ ಖಾತೆಗೆ 10 ಸಾವಿರ ರೂ. ಬರ ಪರಿಹಾರ ವಿತರಿಸಬೇಕು ಎಂದು ಸರ್ವೋದಯ ಕರ್ನಾಟಕ ಪಕ್ಷದ ರಾಜ್ಯ ಕಾರ್ಯದರ್ಶಿ ಪ್ರಸನ್ನಗೌಡ ಆಗ್ರಹಿಸಿದರು.

  ಪಟ್ಟಣದ ತಾಲೂಕು ಕಚೇರಿಯ ಮುಂಭಾಗ ಸೋಮವಾರ ರಾಜ್ಯ ರೈತ ಸಂಘ, ದಸಂಸ ಹಾಗೂ ಕರವೇ ಕಾರ್ಯಕರ್ತರ ಪ್ರತಿಭಟನೆಯಲ್ಲಿ ಮಾತನಾಡಿದರು.

  ರಾಜ್ಯದಲ್ಲಿ ಸರಿಯಾದ ಮಳೆ ಇಲ್ಲದೆ ಈ ಬಾರಿ ನೀರಾವರಿ ಪ್ರದೇಶಗಳ ರೈತರು ಕೃಷಿ ಮಾಡದೆ ಸಾಕಷ್ಟು ನಷ್ಟಕ್ಕೆ ಒಳಗಾಗಿದ್ದಾರೆ. ಕನ್ನಂಬಾಡಿ ಅಣೆಕಟ್ಟೆಯಲ್ಲಿ 80 ಅಡಿ ನೀರಿದ್ದರೂ ಕಾವೇರಿ ಅಚ್ಚಕಟ್ಟು ಪ್ರದೇಶದ ರೈತರ ಕೃಷಿಗೆ ಹರಿಸದ ಸರ್ಕಾರ ಕೃತಕ ಬರಗಾಲ ಸೃಷ್ಟಿಸಿ, ತಮ್ಮ ರಾಜಕೀಯ ಲಾಭಕ್ಕಾಗಿ ತಮಿಳುನಾಡಿಗೆ ನಿರಂತರವಾಗಿ ಹರಿಸಿದೆ. ಈ ಬಾರಿ ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರೇ ಹೆಚ್ಚು ಸಮಸ್ಯೆಗೆ ಸಿಲುಕಿರುವುದು ವಿಪರ್ಯಾಸ. ಜಮೀನಿನಲ್ಲಿದ್ದ ಬೆಳೆಗೆ ನೀರು ಇಲ್ಲದೆ ಇತ್ತ ಖರ್ಚು ಮಾಡಿದ ಬೆಳೆಯೂ ಇಲ್ಲದೆ ಸಾವಿರಾರು ರೂ. ಸಾಲ ಮಾಡಿಕೊಂಡಿದ್ದಾರೆ ಎಂದು ದೂರಿದರು.

  ರಾಜ್ಯ ರೈತಸಂಘದ ತಾಲೂಕು ಅಧ್ಯಕ್ಷ ಮರಳಗಾಲ ಕೃಷ್ಣೇಗೌಡ ಹಾಗೂ ಮುಖಂಡ ಪಾಂಡು ಮಾತನಾಡಿ, ರಾಜ್ಯದಲ್ಲಿ 16 ರಿಂದ 17 ಸಾವಿರ ರೈತರು ಪರಿಸರ ಅಸಮತೋಲನ ಹಾಗೂ ರಾಜ್ಯ ಸರ್ಕಾರದ ಸ್ವಾರ್ಥದಿಂದ ಉಂಟಾದ ಕೃತಕ ಬರಗಾಲಕ್ಕೆ ಬಲಿಯಾಗಿದ್ದಾರೆ. ಆದರೆ ಇವರಲ್ಲಿ 409 ರೈತರಿಗೆ ಮಾತ್ರ ಸರ್ಕಾರ ಕೃಷಿ ಇಲಾಖೆಯಿಂದ ಅಲ್ಪ ಪರಿಹಾರ ಘೋಷಣೆ ಮಾಡಿದೆ. ಈಗ ನಷ್ಟಕ್ಕೆ ಸಿಲುಕಿರುವ ರೈತರಿಗೆ ಪ್ರತಿ ಎಕರೆಗೆ 10 ಸಾವಿರ ರೂ. ಪರಿಹಾರ ಘೋಷಿಸಬೇಕು. ಇಲ್ಲವಾದಲ್ಲಿ ರೈತರು ಎದುರಿಸುವ ಪ್ರತಿ ಕಷ್ಟಗಳಿಗೂ ಕೃಷಿ ಇಲಾಖೆ ಹಾಗೂ ಸರ್ಕಾರವೇ ನೇರ ಹೊಣೆಯಾಗಲಿದ್ದು, ಇದರ ವಿರುದ್ಧ ವಿವಿಧ ಸಂಘಟನೆಗಳ ಒಡಗೂಡಿ ರೈತಸಂಘ ಬೃಹತ್ ಹೋರಾಟ ಹಮ್ಮಿಕೊಳ್ಳಲಿದೆ ಎಂದು ಎಚ್ಚರಿಸಿದರು.

  ಪ್ರತಿಭಟನಾನಿರತ ಸ್ಥಳಕ್ಕೆ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಆಗಮಿಸಿ, ಸಮಸ್ಯೆ ಆಲಿಸಿ, ಬೇಡಿಕೆಗಳಿರುವ ಮನವಿ ಪತ್ರವನ್ನು ಸರ್ಕಾರಕ್ಕೆ ರವಾನಿಸುವ ಭರವಸೆ ನೀಡಿದರು.

  ರೈತ ಸಂಘದ ಕಾರ್ಯದರ್ಶಿ ಶಂಕರೇಗೌಡ, ಮುಖಂಡರಾದ ದೊಡ್ಡಪಾಳ್ಯ ಜಯರಾಮು, ಡಿ.ಎಂ.ಕೃಷ್ಣೇಗೌಡ, ಅಶ್ವತ್ಥನಾರಾಯಣ್, ಎಂ.ಶೆಟ್ಟಹಳ್ಳಿ ಪುರುಷೋತ್ತಮ್, ಬಿ.ಆರ್.ರಮೇಶ್, ಕಿರಂಗೂರು ಫಿಲಿಪ್ಸ್, ಕೂಡಲಕುಪ್ಪೆ ಶಶಿಧರ್, ದಸಂಸ ಮುಖಂಡರಾದ ಗಂಜಾಂ ರವಿಚಂದ್ರು, ಕುಬೇರ, ಕರವೇ ಮುಖಂಡ ಚಂದಗಾಲು ಶಂಕರ್, ಕಾಳೇನಹಳ್ಳಿ ಮಹೇಶ್ ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts