More

    ನಿವೇಶನ ಹಂಚಿಕೆಗೆ ಹೊಸ ತಂತ್ರಾಂಶ

    ಬೆಳಗಾವಿ: ಕಣಬರ್ಗಿ ಬಡಾವಣೆ (ಸ್ಕೀಂ ನಂ 61) ನಿರ್ಮಾಣ ಯೋಜನೆ ಅಂತಿಮ ಹಂತ ತಲುಪಿದ್ದು, ನಿವೇಶನಗಳ ಹಂಚಿಕೆಯಲ್ಲಿ ಪರಾದರ್ಶಕತೆಗಾಗಿ ಬೆಳಗಾವಿ ಅಭಿವೃದ್ಧಿ ಪ್ರಾಧಿಕಾರ (ಬುಡಾ) ಹೊಸದಾಗಿ ತಂತ್ರಾಂಶ ಅಭಿವೃದ್ಧಿಪಡಿಸಲು ಮುಂದಾಗಿದೆ! ಹೌದು. ಭೂ ಸ್ವಾಧೀನಕ್ಕೆ ವಿರೋಧ ಸೇರಿದಂತೆ ವಿವಿಧ ಅಡ್ಡಿ ಆತಂಕಗಳಿಂದ ಒಂದೂವರೆ ದಶಕದಿಂದ ನನೆಗುದಿಗೆ ಬಿದ್ದಿದ ಕಣಬರ್ಗಿ ವಸತಿ ಬಡಾವಣೆ ನಿರ್ಮಾಣ ಯೋಜನೆಗೆ ಎಲ್ಲ ಸಮಸ್ಯೆಗಳನ್ನು ಪರಿಹರಿಸಿಕೊಂಡು ಮೇಲೆದ್ದಿರುವ ಬುಡಾ, ಕಾಮಗಾರಿ ಆರಂಭಿಸಲು ಸಿದ್ಧತೆ ನಡೆಸಿದೆ. ಅಲ್ಲದೆ, ಬಡಾವಣೆ ನಿರ್ಮಾಣ, ನಿವೇಶನ ಹಂಚಿಕೆಯಲ್ಲಿ ಲೋಪಗಳಾಗದಂತೆ ನೋಡಿಕೊಳ್ಳಲು ಹೊಸ ಸಾಫ್ಟ್‌ವೇರ್ ಅಭಿವೃದ್ಧಿ ಪಡಿಸುತ್ತಿದೆ.

    ಕಣಬರ್ಗಿ ವಸತಿ ಬಡಾವಣೆ ಒಟ್ಟು 159 ಎಕರೆ ಪ್ರದೇಶದಲ್ಲಿ ಮೊದಲ ಹಂತದಲ್ಲಿ 105 ಎಕರೆಯಲ್ಲಿ 1,247 ನಿವೇಶನ ನಿರ್ಮಾಣಗೊಳ್ಳಲಿವೆ. ಎರಡನೇ ಹಂತದಲ್ಲಿ ಜಿ+3 ಮಾದರಿಯಲ್ಲಿ ಬಹುಮಹಡಿ ಕಟ್ಟಡಗಳು ತಲೆ ಎತ್ತಲಿವೆ. ಜತೆಗೆ ರಸ್ತೆ, ಉದ್ಯಾನ ಅಭಿವೃದ್ಧಿ ಪಡಿಸಲಾಗುತ್ತಿದೆ. ವರ್ಷಾಂತ್ಯದೊಳಗೆ ಬಡಾವಣೆ ಕಾಮಗಾರಿ ಪೂರ್ಣಗೊಳ್ಳಲಿದೆ. ಜತೆಗೆ ನಿವೇಶನ ಹಂಚಿಕೆಗೆ ಅರ್ಜಿ ಆಹ್ವಾನಿಸಲಾಗುವುದು. ಆದರೆ, ಬಡಾವಣೆ ಅಭಿವೃದ್ಧಿ ಟೆಂಡರ್ ಕರೆಯಲು ಸರ್ಕಾರದಿಂದ ತಾಂತ್ರಿಕ ಒಪ್ಪಿಗೆ ಸಿಗುತ್ತಿಲ್ಲ. ಹಾಗಾಗಿ ವಿಳಂಬವಾಗುತ್ತಿದೆ.

    ಶೇ. 3ರಷ್ಟು ವಾಣಿಜ್ಯ ಉದ್ದೇಶ ಮೀಸಲು: ಕಣಬರ್ಗಿ ಹೊಸ ಬಡಾವಣೆಯಲ್ಲಿ ಒಳಚರಂಡಿ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ಸ್ಥಾಪನೆ, ಮಳೆ ನೀರು ಕೊಯ್ಲು ಅಳವಡಿಕೆ, ವಿದ್ಯುತ್ ಕೇಬಲ್, ಗ್ಯಾಸ್ ಪೈಪ್‌ಲೈನ್ ಸೇರಿ ಇತರೆ ಸಂಪರ್ಕ ಅಂಡರ್‌ಗ್ರೌಂಡ್ ಮಾರ್ಗಗಳ ವ್ಯವಸ್ಥೆ ಅಳವಡಿಸಲಾಗುತ್ತಿದೆ. 159 ಎಕರೆ ಒಟ್ಟು ವಿಸ್ತೀರ್ಣದ ಬಡಾವಣೆಯಲ್ಲಿ ಶೇ. 3ರಷ್ಟು ವಾಣಿಜ್ಯ ಉದ್ದೇಶಕ್ಕೆ ಮೀಸಲಿಡಲಾಗುತ್ತಿದೆ. ವಾಣಿಜ್ಯ ಮಳಿಗೆ ಒಳಗೊಂಡಿರುವ ಕಟ್ಟಡಗಳನ್ನು ನಿರ್ಮಾಣವಾಗಲಿವೆ. ಒಟ್ಟಿನಲ್ಲಿ ಕಣಬರ್ಗಿ ವಸತಿ ಬಡಾವಣೆ ಹೈಟೆಕ್ ಸೌಲಭ್ಯ ಒಳಗೊಳ್ಳಲಿದೆ. ಬಡವರು, ಕಾರ್ಮಿಕರು ಸೇರಿ ಸಾಮಾನ್ಯ ವರ್ಗದ ನಾಗರಿಕರಿಗೆ ಕೈಗೆಟಕುವ ದರದಲ್ಲಿ ಹೈಟೆಕ್ ಸೌಕರ್ಯ ಒಳಗೊಂಡಿರುವ ನಿವೇಶನಗಳು ಸಿಗಲಿವೆ. ಭೂಮಿಯನ್ನು ಸ್ಥಳೀಯರಿಂದ ಖರೀದಿಸಿರುವುದರಿಂದ ಒಪ್ಪಂದ ಪ್ರಕಾರ ನಿರ್ಮಾಣಗೊಳ್ಳಲಿರುವ ನಿವೇಶನಗಳಲ್ಲಿ ಶೇ. 50:50 ಆಧಾರದ ಮೇಲೆ ನಿವೇಶನ ಹಂಚಿಕೆಯಾಗಲಿವೆ. ಇನ್ನುಳಿದ ನಿವೇಶನಗಳನ್ನು ಬುಡಾ ಮೂಲಕ ಅರ್ಜಿದಾರರಿಗೆ ಹಂಚಿಕೆ ಮಾಡಲಾಗುವುದು ಎಂದು ಬುಡಾ ಅಧಿಕಾರಿಗಳು ತಿಳಿಸಿದ್ದಾರೆ.

    ಆನ್‌ಲೈನ್ ಮೂಲಕ ಹಂಚಿಕೆ

    ಬುಡಾ ವತಿಯಿಂದ ಕಣಬರ್ಗಿ ಹೊಸ ಬಡಾವಣೆಯಲ್ಲಿ ಎಲ್ಲ ವರ್ಗದ ಜನರಿಗೆ ನಿವೇಶನ ಸಿಗಬೇಕೆಂಬ ಉದ್ದೇಶದಿಂದ 20/30, 30/40, 30/50 ಹೀಗೆ ವಿವಿಧ ಮಾದರಿಯ ನಿವೇಶನ ನಿರ್ಮಿಸಲಾಗುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಅರ್ಜಿ ಸಲ್ಲಿಕೆಯಾಗುವ ಸಾಧ್ಯತೆಯಿದೆ. ಎಲ್ಲವೂ ಆನ್‌ಲೈನ್ ಮೂಲಕ ನಡೆಯಲಿದೆ. ನಿವೇಶನಗಳಿಗಿಂತ ಹೆಚ್ಚಾಗಿ ಅರ್ಜಿ ಬಂದರೆ ಲಾಟರಿ ಮೂಲಕ ಹಂಚಲಾಗುವುದು. ಆರ್ಥಿಕವಾಗಿ ಹಿಂದುಳಿದವರಿಗೆ, ವಸತಿ ರಹಿತರಿಗೆ, ಕಾರ್ಮಿಕರಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ಬುಡಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

    ನೂತನ ಬಡಾವಣೆ ಅಭಿವೃದ್ಧಿಗೆ ಟೆಂಡರ್ ಕರೆಯುವ ಮುನ್ನ ತಾಂತ್ರಿಕ ಒಪ್ಪಿಗೆ ಪಡೆದುಕೊಳ್ಳುವ ಸಲುವಾಗಿ ಸರ್ಕಾರಕ್ಕೆ ದಾಖಲೆಗಳನ್ನು ಸಲ್ಲಿಸಲಾಗಿದೆ. ಇದಕ್ಕಾಗಿ ಒಬ್ಬರು ಇಂಜಿನಿಯರ್ ಬೆಂಗಳೂರಿನಲ್ಲಿಯೇ ಇದ್ದಾರೆ. 15 ದಿನಗಳಲ್ಲಿ ಒಪ್ಪಿಗೆ ಸಿಗುವ ಸಾಧ್ಯತೆಯಿದೆ. ಈ ಬಡಾವಣೆಗಾಗಿಯೇ ಹೊಸ ಸ್ಟಾವೇರ್ ಅಭಿವೃದ್ಧಿ ಪಡಿಸಲಾಗುತ್ತಿದೆ.
    | ಪ್ರೀತಂ ನಸ್ಲಾಪುರೆ ಬುಡಾ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts