More

    ನಾಡಿಗೆ ಗೋ ಸಂಪತ್ತಿನ ಕೊಡುಗೆ ನೀಡಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕರೆ ಸಸಿ ನೆಡು ಸಪ್ತಾಹದಲ್ಲಿ ಭಾಗಿ

    ದೊಡ್ಡಬಳ್ಳಾಪುರ: ಭೂಮಿ ಮತ್ತು ದೇಶೀಯ ಗೋವುಗಳ ನಡುವೆ ಅವಿನಾಭಾವ ಸಂಬಂಧವಿದೆ, ರೈತರು ದೇಸಿ ತಳಿಗಳ ಗೋವು ಆಧಾರಿತ ಕೃಷಿ ಮೂಲಕ ಗೋವು ಸಂಪತ್ತನ್ನು ರಕ್ಷಿಸಿ ನಾಡಿಗೆ ಕೊಡುಗೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದರು.

    ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿರುವ ರಾಷ್ಟ್ರೋತ್ಥಾನ ಪರಿಷತ್ ಗೋಶಾಲೆಯಲ್ಲಿ 7 ದಿನದ ಬೃಂದಾವನ ಕೃಷಿ ಅರಣ್ಯ ಯೋಜನೆಯ ಸಸಿ ನೆಡು ಸಪ್ತಾಹದ 5ನೇ ದಿನವಾದ ಶುಕ್ರವಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಇಲ್ಲಿನ 115 ಎಕರೆ ಭೂ ಪ್ರದೇಶದಲ್ಲಿ ಕೃಷಿ ಪದ್ಧತಿ, ಪ್ರಕೃತಿ, ಪರಿಸರ, ಅರಣ್ಯ ಕೃಷಿ ಸೇರಿ ಗುಡ್ಡ ಪ್ರದೇಶಗಳನ್ನು ಕೃಷಿ ಯೋಗ್ಯ ಭೂಮಿಯಾಗಿ ಪರಿವರ್ತನೆ ಮಾಡಬಹುದು ಎಂಬ ಪ್ರಾತ್ಯಕ್ಷಿಕೆಯಾಗಿ ರೂಪುಗೊಂಡಿರುವ ರಾಷ್ಟ್ರೋತ್ಥಾನ ಗೋ ಶಾಲೆಯ ಕಾರ್ಯ ರೈತರಿಗೆ ಪ್ರೇರಣೆಯಾಗಲಿದೆ ಎಂದರು.

    ಅರಣ್ಯ ನಿರ್ಮಾಣಕ್ಕೆ ಸಂಕಲ್ಪ ಮಾಡಿ: ಪ್ರಕೃತಿ ನಾಶದಿಂದ ಭೂಮಿಯ ತಾಪಮಾನ ಏರಿಕೆಯಾಗುತ್ತಿದೆ. ಪರಿಣಾಮ ಸ್ಫೋಟ, ಭೂ ಕುಸಿತ, ಪ್ರವಾಹ, ಅಕಾಲಿಕ ಮಳೆಯಂಥ ಅಪಸವ್ಯಗಳು ನಡೆಯುತ್ತಿವೆ. ಮಾನವ ಕುಲವನ್ನೇ ನಾಶ ಮಾಡುವ ಹಂತದಲ್ಲಿ ಮಾರಕ ವೈರಸ್‌ಗಳು ದಾಳಿ ಮಾಡುತ್ತಿವೆ ಎಂದು ರಾಷ್ಟ್ರೋತ್ಥಾನ ಪರಿಷತ್ ಅಧ್ಯಕ್ಷ ರವಿಕುಮಾರ್ ತಿಳಿಸಿದರು.

    ಪಕೃತಿಯನ್ನೇ ಅವಲಂಬಿಸಿರುವ ಪ್ರಾಣಿ, ಪಕ್ಷಿ, ಮನುಕುಲ ವಿನಾಶದ ಅಂಚಿಗೆ ತಲುಪಿವೆ. ಇನ್ನಾದರೂ ಮಾಡಿರುವ ತಪ್ಪನ್ನು ಅರಿತು ದೇಶೀಯ ಸಾಂಪ್ರದಾಯಿಕ ಕೃಷಿ ಪದ್ಧತಿ ಮೂಲಕ ಪ್ರಕೃತಿ ಉಳಿಸುವ ಹಂತದಲ್ಲಿ ಪರ್ಯಾಯ ಅರಣ್ಯಗಳ ನಿರ್ಮಾಣ ಮಾಡಲು ಸಂಕಲ್ಪ ಮಾಡಬೇಕಿದೆ ಎಂದರು.

    ಈ ಹಂತದಲ್ಲಿ ಸಣ್ಣ ಪ್ರಯತ್ನಕ್ಕೆ ಕೈ ಹಾಕಿರುವ ರಾಷ್ಟ್ರೋತ್ಥಾನ ಪರಿಷತ್ ಆಗ್ರೋ ಫಾರೆಸ್ಟ್ ಅಭಿವೃದ್ಧಿ, ಸಾವಯವ ಕೃಷಿ, ದೇಶೀಯ ಗೋ ಸಂಪತ್ತು ಬೆಳೆಸುವುದರೊಂದಿಗೆ ಇಂಥ ಉತ್ಪನ್ನಗಳಿಗೆ ಮಾರುಕಟ್ಟೆ ನಿರ್ಮಿಸುವ ಪ್ರಯೋಗಗಳಾಗಬೇಕೆಂಬ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದೆ. ಈ ಪರಿಸರ ಅಭಿಯಾನಕ್ಕೆ ಪ್ರತಿಯೊಬ್ಬರ ಸಹಕಾರ ಸಿಕ್ಕರೆ ದೊಡ್ಡಮಟ್ಟದಲ್ಲಿ ನಾವೆಲ್ಲ ಕೆಲಸ ಮಾಡಬಹುದು ಎಂದರು.

    ಗೋವುಗಳ ಜತೆ ಬಿಎಸ್‌ವೈ ಸಾಂಗತ್ಯ:
    ಕಾರ್ಯಕ್ರಮಕ್ಕೂ ಮುನ್ನ ಬಿ.ಎಸ್.ಯಡಿಯೂರಪ್ಪ ಗೋ ಶಾಲೆಯಲ್ಲಿ ಗೋವುಗಳಿಗೆ ಹುಲ್ಲು ತಿನಿಸುವುದರೊಂದಿಗೆ ಸ್ವಲ್ಪ ಸಮಯ ಕಳೆದರು. ಕಳೆದ ಬಾರಿ ಭೇಟಿ ನೀಡಿದ್ದ ಸಂದರ್ಭದಲ್ಲಿ ನೆಟ್ಟ ಸಸಿ ವೃಕ್ಷವಾಗಿರುವುದನ್ನು ಕಂಡು ಸಂತಸ ವ್ಯಕ್ತಪಡಿಸಿದರು. ನಂತರ ಗೋ ಪೂಜೆ ನೆರವೇರಿಸಿ ಸಸಿ ನೆಟ್ಟರು. ಕಾರ್ಯಕ್ರಮ ಮುಗಿದ ನಂತರವೂ ಅರ್ಧ ಗಂಟೆ ಕಾಲ ಗೋಶಾಲೆಯಲ್ಲಿ ವಿಶ್ರಮಿಸಿ ವಿಷಯ ವಿನಿಮಯ ಮಾಡಿಕೊಂಡರು.

    ರಾಷ್ಟ್ರೋತ್ಥಾನ ಪರಿಷತ್ ಪ್ರಧಾನ ಕಾರ್ಯದರ್ಶಿ ದಿನೇಶ್ ಹೆಗಡೆ, ಶಾಸಕ ಎಸ್.ಆರ್.ವಿಶ್ವನಾಥ್, ಬಿಎಸ್‌ವೈ ಪುತ್ರ ವಿಜಯೇಂದ್ರ, ದೊಡ್ಡಬಳ್ಳಾಪುರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿಬ್ಬೂರು ಜಯಣ್ಣ ಮತ್ತಿತರರು ಇದ್ದರು.

    ದೇವರ ದರ್ಶನ ಪಡೆದ ಬಿಎಸ್‌ವೈ: ರಾಷ್ಟ್ರೋತ್ಥಾನ ಗೋ ಶಾಲೆಯ ಕಾರ್ಯಕ್ರಮದ ವೇಳೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಮತ್ತಿತರರು ಘಾಟಿ ಸುಬ್ರಹ್ಮಣ್ಯ ದೇಗುಲದಲ್ಲಿ ದೇವರ ದರ್ಶನ ಪಡೆದು ಮರಳಿದರು. ಕರೊನಾ ಹಿನ್ನೆಲೆಯಲ್ಲಿ ದೇಗುಲಗಳ ಪ್ರವೇಶಕ್ಕೆ ನಿರ್ಬಂಧ ಹೇರಿದ್ದರೂ ಬಿಎಸ್‌ವೈ ಅವರಿಗೆ ಅವಕಾಶ ಮಾಡಿಕೊಡಲಾಗಿತ್ತು.

    ನಾಗರ ಪಂಚಮಿ ಹಿನ್ನೆಲೆ ದೇವಸ್ಥಾನದ ಬಾಗಿಲು ಬಂದ್ ಮಾಡಿರುವ ಬಗ್ಗೆ ಭಕ್ತರಿಗೆ ಮಾಹಿತಿ ಸಿಗದ ಹಿನ್ನೆಲೆ ಕ್ಷೇತ್ರಕ್ಕೆ ಶುಕ್ರವಾರ ಭಕ್ತರು ಆಗಮಿಸಿದ್ದರು. ಜಿಲ್ಲಾಧಿಕಾರಿಗಳಿಂದ ಮೌಖಿಕ ಅನುಮತಿ ಪಡೆದು ಈ ದಿನ ಮಾತ್ರ ಭಕ್ತರಿಗೆ ಅವಕಾಶ ನೀಡಲಾಗಿದೆ. ದೇವಸ್ಥಾನದಲ್ಲಿ ಯಾವುದೇ ಉತ್ಸವ, ಮೆರವಣಿಗೆ ಮತ್ತು ಸೇವಾ ಕಾರ್ಯಗಳು ನಡೆಯುತ್ತಿಲ್ಲ.
    ಕೃಷ್ಣಪ್ಪ, ಘಾಟಿ ಸುಬ್ರಮಣ್ಯ ದೇವಸ್ಥಾನದ ಆಡಳಿತ ಕಾರ್ಯ ನಿರ್ವಾಹಕ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts