More

    ನಾಡಿನ ಉಳಿವಿಗೆ ಜೆಡಿಎಸ್ ಗೆಲ್ಲಿಸಿ

    ದೊಡ್ಡಬಳ್ಳಾಪುರ
    ಕರೊನಾ, ಅತಿವೃಷ್ಟಿ, ಅನಾವೃಷ್ಟಿ, ಬೆಳೆ ನಾಶದಂಥ ಸಂಕಷ್ಟ ಸಮಯದಲ್ಲಿ ರಾಜ್ಯಕ್ಕೆ ಬಾರದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿ ಉತ್ತರ ಭಾರತದ ನಾಯಕರು ಚುನಾವಣೆ ವೇಳೆ ತಂಡೋಪತಂಡವಾಗಿ ಆಗಮಿಸಿ ರಾಜ್ಯದ ಮೇಲೆ ಮಮಕಾರ ತೋರಿಸುತ್ತಿದ್ದಾರೆ. ಅವರ ಮಮಕಾರ ಕೇವಲ ಚುನಾವಣೆಗೆ ಸಿಮೀತ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
    ನಗರದ ಹಳೇ ಆಸ್ಪತ್ರೆ ಸರ್ಕಲ್ ಬಳಿ ಭಾನುವಾರ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್‌ನಿಂದಲೂ ಉತ್ತರ ಭಾರತದಿಂದ ಹಲವು ನಾಯಕರು ಬಂದಿದ್ದಾರೆ. ರಾಷ್ಟ್ರೀಯ ಪಕ್ಷಗಳು ಕನ್ನಡಿಗರ ಪರವಾಗಿ ಧ್ವನಿ ಎತ್ತಿಲ್ಲ. 75 ವರ್ಷಗಳ ರಾಜಕೀಯ ಬೇರೆ. ಇನ್ನಾದರೂ ಪ್ರಾದೇಶಿಕ ಸಮಸ್ಯೆಗಳು, ಬಡತನ, ಅಭಿವೃದ್ಧಿಗೆ ಶ್ರಮಿಸುವಂಥ ಪ್ರಾದೇಶಿಕ ಪಕ್ಷಕ್ಕೆ ಜನತೆ ಆಶೀರ್ವಾದ ಮಾಡಬೇಕು ಎಂದರು.
    ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಕಾಂಗ್ರೆಸ್‌ನದ್ದು 85 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಪ್ರಧಾನಿ ಹೇಳಿದರೆ, ಇತ್ತ ಕಾಂಗ್ರೆಸ್ ಬಿಜೆಪಿ 40 ಪರ್ಸೆಂಟ್ ಸರ್ಕಾರ ಎಂದು ಹೇಳುತ್ತಿದ್ದಾರೆ. ಒಟ್ಟಾರೆ ಕಮಿಷನ್ ಸರ್ಕಾರ ತೊಲಗಿಸಲು ಜೆಡಿಎಸ್‌ಗೆ ಶಕ್ತಿ ನೀಡಿ ಎಂದು ಮನವಿ ಮಾಡಿದರು.
    ಪಂಚರತ್ನ ಯೋಜನೆ ಜಾರಿಗೆ ರಾಜ್ಯದ ಮೂಲೆ ಮೂಲೆಗೆ ಪ್ರವಾಸ ಮಾಡಿದ್ದೇನೆ. ಬಡವ ಶ್ರೀಮಂತ, ಜಾತಿ-ಧರ್ಮದ ಬೇಧಭಾವವಿಲ್ಲ, ನನಗೆ ಎಲ್ಲರೂ ಒಂದೇ. ಎಲ್ಲ ಕಸುಬುಗಳಿಗೆ ಆರ್ಥಿಕ ಉತ್ತೇಜನಕ್ಕೆ ಕ್ರಮ ಕೈಕೊಳ್ಳಲಾಗುವುದು. ಮಹಿಳೆಯರಿಗೆ ಸ್ವಾಭಿಮಾನ, ಸ್ವಾವಲಂಬಿ ಬದುಕಿಗೆ ಆರ್ಥಿಕ ಸಹಾಯ ಮಾಡಲಾಗುವುದು ಎಂದರು.
    ಸ್ವಾವಲಂಬಿ ಜೀವನಕ್ಕೆ ದಾರಿ: ಬೃಹತ್ ಕೈಗಾರಿಕೆಗಳಿಗೆ ನೀಡುವ ವಿವಿಧ ಸಬ್ಸಿಡಿಗಳನ್ನು ಕಡಿತ ಮಾಡಿ ವಿದ್ಯಾವಂತ ಯುವಜನತೆಗೆ ಆ ಹಣವನ್ನು ನೀಡಲಾಗುವುದು. ಮಹಿಳೆಯರಿಗೆ 1ಲಕ್ಷ ರೂ.ಸಾಲ ನೀಡಿ 90 ಸಾವಿರ ಸಬ್ಸಿಡಿ ನೀಡುತ್ತೇವೆ. ನೇಕಾರರಿಗೆ ವಸ ಬ್ಯಾಂಕ್ ಸ್ಥಾಪಿಸಿ ಮಾರುಕಟ್ಟೆ ಸೃಷ್ಟಿಸಲಾಗುವುದು ಎಂದರು.
    ಸಿದ್ದರಾಮಯ್ಯಗೆ ಟಾಂಗ್: ಮಿಸ್ಟರ್ ಕುಮಾರಸ್ವಾಮಿ ನೀನು ನೂರು ಪಂಚರತ್ನ ಯೋಜನೆ ಕೊಟ್ಟರೂ ನಿನಗೆ 20-25 ಸ್ಥಾನ ಗಟ್ಟಿ ಎಂದು ಸಿದ್ದರಾಮಯ್ಯ ಲೇವಡಿ ವಿಚಾರಕ್ಕೆ ಎಚ್‌ಡಿಕೆ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ
    ಇಂಥ ದುರಹಂಕಾರದ ಮಾತುಗಳನ್ನು ಬಿಡಬೇಕು. ರಾಜ್ಯದ ಜನತೆ ತಕ್ಕ ಉತ್ತರ ನೀಡಲಿದ್ದಾರೆ. ಆರೋಗ್ಯ ಲೆಕ್ಕಿಸದೆ ರಾಜ್ಯದ ಮೂಲೆ ಮೂಲೆ ಸುತ್ತಿದ್ದೇನೆ. ತಾಲೂಕಿನಲ್ಲಿ ಮುನೇಗೌಡ ಮೂರು ಬಾರಿ ಸೋತು, ನಾಲ್ಕನೆಯ ಬಾರಿಗೆ ಸ್ಪರ್ಧಿಸಿದ್ದಾರೆ. ಎಲ್ಲ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾರೆ. ನಾಲ್ಕನೇ ಬಾರಿಯಾದರೂ ಮೋಕ್ಷ ನೀಡಿ ಎಂದು ಮನವಿ ಮಾಡಿದರು.
    ಅಭ್ಯರ್ಥಿ ಮುನೇಗೌಡ ಮಾತನಾಡಿ, ಈ ಬಾರಿಯ ಚುನಾವಣೆಗೆ ಜನರೇ ಸ್ವಯಂ ಪ್ರೇರಿತರಾಗಿ ಸಿದ್ಧರಾಗಿದ್ದಾರೆ. ಇದಕ್ಕೆ ಕನ್ನಡ ಪಕ್ಷ, ಸಿಪಿಐಎಂ ಬೆಂಬಲ ಸೂಚಿಸಿರುವುದು. ತಾಲೂಕಿನ ಎಲ್ಲ ಹಿರಿಯ, ಕಿರಿಯ ಮುಖಂಡರು ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ರಾಮರಾಜ್ಯ ಆಗಬೇಕಾದರೆ ಪಂಚರತ್ನ ಯೋಜನೆ ಜಾರಿಯಾಗಬೇಕು ಹೀಗಾಗಿ ಬಹುಮತದ ಸರ್ಕಾರ ನೀಡಿ ಎಂದು ಕೋರಿದರು.
    ಮುಖಂಡರಾದ ತ.ನ ಪ್ರಭುದೇವ, ಇ ಕೃಷ್ಣಪ್ಪ, ಲಕ್ಷ್ಮೀಪತಯ್ಯ, ವೆಂಕಟೇಶ್‌ಬಾಬು, ಡಾ.ವಿಜಯ್‌ಕುಮಾರ್, ಹರೀಶ್‌ಗೌಡ, ಹುಸ್ಕೂರು ಆನಂದ್, ವಡ್ಡರಹಳ್ಳಿ ರವಿ, ಕೆಂಪರಾಜು, ಸತ್ಯನಾರಾಯಣ, ಪದ್ಮಾವತಿ ಮುನೇಗೌಡ, ಮಲ್ಲೇಶ್, ಸುನೀಲ್, ಕನ್ನಡ ಪಕ್ಷದ ಸಂಜೀವ್‌ನಾಯಕ್, ಡಿ ವೆಂಕಟೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts