More

    ನವ ದೊಡ್ಡಬಳ್ಳಾಪುರ ನಿರ್ಮಾಣವೇ ಗುರಿ


    ದೊಡ್ಡಬಳ್ಳಾಪುರ
    ಈ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ, ಈ ನಿಟ್ಟಿನಲ್ಲಿ ನವ ದೊಡ್ಡಬಳ್ಳಾಪುರ ನಿರ್ಮಾಣದ ಕನಸನ್ನು ನನಸು ಮಾಡುವುದೇ ನನ್ನ ಗುರಿಯಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜು ಹೇಳಿದರು.1
    ದೊಡ್ಡಬಳ್ಳಾಪುರ ನಗರದ ವಿವಿಧ ವಾರ್ಡ್‌ಗಳು ಸೇರಿ ಮಜರಾಹೊಸಹಳ್ಳಿ, ಜಿಂಕೆಬಚ್ಚಹಳ್ಳಿ ಭಾಗಗಳಲ್ಲಿ ಪ್ರಚಾರ ನಡೆಸಿ ಮಾತನಾಡಿದರು.
    ಎಲ್ಲರೊಂದಿಗೆ ಎಲ್ಲರ ವಿಕಾಸ, ಎಲ್ಲರ ವಿಶ್ವಾಸ ಎಂಬುದು ಪ್ರಧಾನಿ ಮೋದಿ ಅವರು ನೀಡುವ ಸಂಕಲ್ಪ ವಾಕ್ಯವಾಗಿದೆ. ಸರ್ವಜನರ ಹಿತ ಕಾಯಲು ಬಿಜೆಪಿ ಬದ್ಧವಾಗಿದೆ ಎಂದರು.
    ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಜನತೆ ಈ ಬಾರಿ ಬದಲಾವಣೆ ಬಯಸಿದ್ದು, ಅಭಿವೃದ್ಧಿ ಹಾಗೂ ಭವಿಷ್ಯದ ಯೋಜನೆಗಳ ಪರ ಮತ ಚಲಾಯಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ತಾಲೂಕಿನಲ್ಲಿ ಬಿಜೆಪಿ ಪರ ವಾತಾವರಣ ಸೃಷ್ಟಿಯಾಗಿದೆ ಎಂದರು.
    ಕಾಂಗ್ರೆಸ್, ಜೆಡಿಎಸ್‌ನಿಂದ ತಪ್ಪು ಸಂದೇಶ: ಕ್ಯೂಆರ್ ಕೋಡ್ ಹೊಂದಿರುವ ಕೂಪನ್ ವಿತರಣೆ ಪಕ್ಷದ ಕಾರ್ಯಕರ್ತರು ನಡೆಸಿದ್ದು, ಜನತೆಗೆ ಪಕ್ಷದ ಪ್ರಣಾಳಿಕೆ ಹಾಗೂ ಕರಪತ್ರಗಳನ್ನು ವ್ಯವಸ್ಥಿತವಾಗಿ ತಲುಪಿಸಲು ತಂತ್ರಜ್ಞಾನ ಬಳಸಿಕೊಂಡು ರೂಪಿಸಿರುವ ವ್ಯವಸ್ಥೆಯಾಗಿದೆ. ಅದರ ಸುತ್ತ ಕಲ್ಪಿತ ಆರೋಪ ಮಾಡುವ ಮೂಲಕ ಕಾಂಗ್ರೆಸ್, ಜೆಡಿಎಸ್ ಜನರಿಗೆ ತಪ್ಪು ಸಂದೇಶ ನೀಡುತ್ತಿವೆ. ಪಕ್ಷದಿಂದ ಹೊರಗಿನ ಕಾರ‌್ಯಕರ್ತರು ಕೂಡ ಕ್ಷೇತ್ರದಲ್ಲಿ ವ್ಯವಸ್ಥಿತ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ. ಇದರಲ್ಲಿ ತಪ್ಪೇನೂ ಇಲ್ಲ. ಕಾಂಗ್ರೆಸ್-ಜೆಡಿಎಸ್‌ಗೆ ಜನರ ಬಳಿ ಹೇಳಿಕೊಳ್ಳುವ ಯಾವುದೇ ಧನಾತ್ಮಕ ವಿಚಾರಗಳಿಲ್ಲದ ಕಾರಣ ಈ ಪ್ರಕರಣವನ್ನು ಮುಂದಿಟ್ಟಿದ್ದಾರೆ. ಕ್ಯೂಆರ್ ಕೋಡ್ ಮತ್ತಾವುದೇ ಉದ್ದೇಶಗಳಿಗೂ ಬಳಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಈ ಬಗ್ಗೆ ಪೊಲೀಸರು ಬೇಕಿದ್ದರೆ ತನಿಖೆ ನಡೆಸಲಿ ಎಂದು ಸ್ಪಷ್ಟಪಡಿಸಿದರು.
    ಅಭಿವೃದ್ಧಿ ಕಳಪೆಯಾಗಿದೆ: ಕೇವಲ ರಸ್ತೆ, ಚರಂಡಿ ನಿರ್ಮಾಣ ಮಾಡಿದರೆ ಮಾತ್ರ ಅಭಿವೃದ್ಧಿಯಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಕ್ಷೇತ್ರದಲ್ಲಿ ಶಿಕ್ಷಣ, ಉದ್ಯೋಗ, ಉತ್ತಮ ಆರೋಗ್ಯ ವ್ಯವಸ್ಥೆ ತೀರ ಕಳಪೆಯಾಗಿದೆ ಎಂದು ಧೀರಜ್ ಹೇಳಿದರು.
    ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ ಉತ್ತಮ ಸಮಾಜ ನಿರ್ಮಾಣ. ಭ್ರಷ್ಟಾಚಾರರಹಿತ ಆಡಳಿತ, ನೇಕಾರರ ಸೀರೆಗಳಿಗೆ ಬ್ರ್ಯಾಂಡ್, ವಾಣಿಜ್ಯ ಸಂಕೀರ್ಣ ನಿರ್ಮಾಣ ಸೇರಿ ಕೆರೆಗಳ ಅಭಿವೃದ್ಧಿಯೊಂದಿಗೆ ನಗರಕ್ಕೆ ಅತ್ಯಗತ್ಯವಾಗಿರುವ ಟ್ರಾಫಿಕ್ ಪೊಲೀಸ್ ಠಾಣೆ ತರಲು ಶ್ರಮಿಸಿ ದೊಡ್ಡಬಳ್ಳಾಪುರವನ್ನು ಮತ್ತಷ್ಟು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts