More

    ನಾಗೇಂದ್ರಗಡದಲ್ಲಿ ದನದ ದೊಡ್ಡಿಗೆ ನುಗ್ಗಿ ಹಸು ಬಲಿ ಪಡೆದ ಚಿರತೆ

    ಗಜೇಂದ್ರಗಡ: ತಾಲೂಕಿನ ನಾಗೇಂದ್ರಗಡ ಗ್ರಾಮದ ಜಮೀನಿನಲ್ಲಿ ಕಟ್ಟಿದ್ದ ಹಸುಗಳ ಮೇಲೆ ಚಿರತೆ ದಾಳಿ ಮಾಡಿದ ಪರಿಣಾಮ 2 ಹಸುಗಳು ಸಾವನ್ನಪ್ಪಿದ ಘಟನೆ ಶುಕ್ರವಾರ ನಡೆದಿದೆ.

    ರೈತ ಶರಣಪ್ಪ ಪಾಟೀಲ ಎಂಬುವರ ಜಮೀನಿನಲ್ಲಿನ ದನದ ದೊಡ್ಡಿಗೆ ನುಗ್ಗಿದ ಚಿರತೆ ಹಸುವಿನ ಮೇಲೆ ದಾಳಿ ನಡೆಸಿ, ಅರ್ಧಂಬರ್ಧ ತಿಂದು ಬಿಸಾಡಿದೆ. ಎಂದಿನಂತೆ ಬೆಳಗ್ಗೆ ಜಮೀನಿನಲ್ಲಿನ ದನದ ದೊಡ್ಡಿಗೆ ತೆರಳಿದ ರೈತ ಶರಣಪ್ಪ ಪಾಟೀಲ ಅವರು ಸತ್ತು ಬಿದ್ದಿದ್ದ ಹಸು ಕಂಡು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

    ತಾಲೂಕಿನಲ್ಲಿ ಚಿರತೆ ದಾಳಿ ನಡೆಸಿದ ವರದಿಗಳು ಕೆಲ ತಿಂಗಳಿನಿಂದ ಕೇಳಿ ಬರುತ್ತಿವೆ. ಪಟ್ಟಣ ಸೇರಿ ಸುತ್ತಲಿನ ಗುಡ್ಡಗಾಡು ಪ್ರದೇಶದಲ್ಲಿ ಚಿರತೆ ವಾಸವಾಗಿದೆ ಎನ್ನುವ ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ನಾಗೇಂದ್ರಗಡ, ಪ್ಯಾಟಿ, ಕಾಲಕಾಲೇಶ್ವರ ಸೇರಿ ಇತರ ಗುಡ್ಡಗಾಡು ಪ್ರದೇಶದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು. ಆದರೆ, ಪ್ಯಾಟಿ ಗ್ರಾಮದ ಧರ್ಮರ ಮಠದ ಕುದುರೆಗಳನ್ನು ಚಿರತೆಯೇ ಕೊಂದಿದೆ ಎಂಬುದು ಚಿರತೆಯ ಹೆಜ್ಜೆ ಗುರುತುಗಳಿಂದ ಪತ್ತೆಯಾದರೂ ಇಲಾಖೆಯ ಅಧಿಕಾರಿಗಳು ಚಿರತೆಯನ್ನು ಸೆರೆ ಹಿಡಿಯಲು ವಿಫಲರಾಗಿದ್ದರು. ಈಗ ಮತ್ತೆ ಅಂತದ್ದೆ ಘಟನೆ ನಡೆದಿರುವುದು ಅರಣ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.

    ಅಧಿಕಾರಿಗಳ ವಿರುದ್ಧ ಆಕ್ರೋಶ: ಪದೇ ಪದೆ ತಾಲೂಕಿನ ನಾನಾ ಗ್ರಾಮಗಳಲ್ಲಿ ಚಿರತೆ ಹಾವಳಿ ಕಂಡು ಬರುತ್ತಿದೆ. ಯಾವುದಾದರೂ ಪ್ರಾಣಿ ಸಂಕುಲ ಸತ್ತರೆ ಮಾತ್ರ ಈ ಘಟನೆಯನ್ನು ತಲೆಕೆಡಿಸಿಕೊಳ್ಳುವ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಚಿರತೆಯ ಭಯಕ್ಕೆ ಕಳೆದ 2 ವರ್ಷದಿಂದ ಹೊಲದಲ್ಲಿ ಸರಿಯಾಗಿ ಬೇಸಾಯ ಮಾಡಲಾಗದೆ ಕೆಲಸಕ್ಕಾಗಿ ಗೋವಾ, ಮಂಗಳೂರಿಗೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ. ಚಿರತೆಯನ್ನು ಸೆರೆ ಹಿಡಿದು ಸುತ್ತಮುತ್ತಲಿನ ಗ್ರಾಮಸ್ಥರು ನೆಮ್ಮದಿ ಜೀವನ ಸಾಗಿಸಲು ಅರಣ್ಯ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

    ಅಧಿಕಾರಿಗಳ ಭೇಟಿ: ತಹಸೀಲ್ದಾರ್ ಹಸೇನಸಾಬ ಎಂ.ಟಿ., ಕಂದಾಯ ಇಲಾಖೆ ಅಧಿಕಾರಿ ಗೌರಮ್ಮ ಆನಂದಪ್ಪನವರ ಭೇಟಿ ನೀಡಿ, ಘಟನೆ ಬಗ್ಗೆ ಮಾಹಿತಿ ಕಲೆ ಹಾಕಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts