More

    ನರೇಗಾ ಕಾರ್ಮಿಕರಿಗೆ ಬಯೋಮೆಟ್ರಿಕ್

    ಬೆಳಗಾವಿ: ನೈಜ ಕಾರ್ಮಿಕರಿಗೆ ಬಲ ತುಂಬಲು, ಕೂಲಿ ಹಣ ದುರ್ಬಳಕೆ ತಡೆಗಟ್ಟುವ ನಿಟ್ಟಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಕಾರ್ಮಿಕರಿಗೆ ಇ-ಹಾಜರಾತಿ (ಬಯೋಮೆಟ್ರಿಕ್) ವ್ಯವಸ್ಥೆ ಜಾರಿಗೆ ಸಿದ್ಧತೆ ನಡೆದಿದೆ.

    ರಾಜ್ಯದ 6,021 ಗ್ರಾಪಂಗಳ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಸುಮಾರು 68,57,345 ಕಾರ್ಮಿಕರು ಜಾಬ್ ಕಾರ್ಡ್ ಹೊಂದಿದ್ದಾರೆ. ಆದರೆ, ನಿಜವಾದ ಕಾರ್ಮಿಕರ ಕೈಗೆ ವರ್ಷಪೂರ್ತಿ ಕೆಲಸ ಸಿಗುತ್ತಿಲ್ಲ. ಅಲ್ಲದೆ, ಗೋವಾ, ಮಹಾರಾಷ್ಟ್ರ, ಬೆಂಗಳೂರು ಸೇರಿ ವಿವಿಧ ಮಹಾನಗರ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರ ಹೆಸರಿನಲ್ಲಿ ನರೇಗಾ ಕೂಲಿ ಹಣ ತೆಗೆಯಲಾಗುತ್ತಿದೆ. ಕೆಲ ಕಡೆ ನರೇಗಾ ಕೆಲಸಕ್ಕೆ ಯಂತ್ರ ಬಳಕೆ ಮಾಡಿ ಕಾರ್ಮಿಕರ ಹೆಸರಿನಲ್ಲಿ ಬಿಲ್ ತೆಗೆಯಲಾಗುತ್ತಿದೆ.

    ನರೇಗಾದಲ್ಲಿ ಪ್ರತಿನಿತ್ಯ ಒಂದೇ ಸ್ಥಳದಲ್ಲಿ 20ಕ್ಕಿಂತ ಹೆಚ್ಚು ಕಾರ್ಮಿಕರು ಕೆಲಸ ಮಾಡುವುದನ್ನು ಖಾತ್ರಿಪಡಿಸಿಕೊಳ್ಳಲು ರಾಷ್ಟ್ರೀಯ ಮೊಬೈಲ್ ನಿರ್ವಹಣೆ ತಂತ್ರಾಂಶ
    (ಎನ್‌ಎಂಎಂಎಸ್) ವ್ಯವಸ್ಥೆ ಮೂಲಕ ಸಾಮೂಹಿಕ ಇ-ಹಾಜರಾತಿ ಕಡ್ಡಾಯಗೊಳಿಸಿತ್ತು. ಆದರೆ, ಬಹುತೇಕ ಗ್ರಾಪಂಗಳು ಕಾಮಗಾರಿ ನಡೆಯುವ ಸ್ಥಳದಲ್ಲಿ 20ಕ್ಕಿಂತ ಹೆಚ್ಚು ಕಾರ್ಮಿಕರನ್ನು ತೋರಿಸುತ್ತಿಲ್ಲ. ಆದರೆ, ಕಾರ್ಮಿಕರ ಕೂಲಿ ಹಣ ಹೆಚ್ಚಿನ ಪ್ರಮಾಣದಲ್ಲಿ ಪಾವತಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ನರೇಗಾದಲ್ಲಿ ಪಾರದರ್ಶಕತೆ ತರಲು ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೊಳಿಸಲು ಯೋಜನೆ ರೂಪಿಸಲಾಗಿದೆ.

    ಈಗಾಗಲೇ ನರೇಗಾ ಯೋಜನೆ ಸಮರ್ಪಕ ನಿರ್ವಹಣೆಗಾಗಿ ತಾಲೂಕು ಮಟ್ಟದ ನರೇಗಾ ಸಂಯೋಜಕರು, ಗ್ರಾಮ ಕಾಯಕ ಮಿತ್ರ ನೇಮಕದಿಂದ ನರೇಗಾ ಯೋಜನೆ ಅಡಿಯಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಪಡೆದುಕೊಳ್ಳುತ್ತಿದ್ದಾರೆ. ವಾರ್ಷಿಕ ಸುಮಾರು 10 ಕೋಟಿ ಮಾನವ ದಿನಗಳ ಸೃಜನೆಯಲ್ಲಿ 5 ಕೋಟಿ ದಿನಗಳಲ್ಲಿ ಮಹಿಳೆಯರೇ ತೊಡಗಿಕೊಂಡಿದ್ದಾರೆ.

    2021ರಲ್ಲಿ ಆರಂಭಿಸಿದ ದುಡಿಯೋಣ ಅಭಿಯಾನದಿಂದಾಗಿ 7.01 ಲಕ್ಷ ಕಾರ್ಮಿಕರು ಹೊಸ ಜಾಬ್ ಕಾರ್ಡ್ ಪಡೆದುಕೊಂಡಿದ್ದಾರೆ. ಇದರಿಂದಾಗಿ 16.68 ಲಕ್ಷ ಜನರು ನರೇಗಾ ಯೋಜನೆಗೆ ಸೇರ್ಪಡೆಯಾಗಿದ್ದಾರೆ. 5 ವರ್ಷದಲ್ಲೇ ಅತಿ ಹೆಚ್ಚು ಅಂದರೆ 29.93 ಲಕ್ಷ ಕುಟುಂಬಗಳ 56.29 ಲಕ್ಷ ಜನರಿಗೆ ಉದ್ಯೋಗ ದೊರೆತಿದೆ. ಇದು ದೇಶದಲ್ಲಿಯೇ ಅತಿ ಹೆಚ್ಚು ಎಂದು ನರೇಗಾ ನೋಡಲ್ ಅಧಿಕಾರಿಗಳು ತಿಳಿಸಿದ್ದಾರೆ.

    ನರೇಗಾ ಯೋಜನೆ ಅಡಿಯಲ್ಲಿ ಎನ್‌ಎಂಎಂಎಸ್ ವ್ಯವಸ್ಥೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಕಾರ್ಮಿಕರಿಗೆ ಪ್ರತಿನಿತ್ಯ ಬಯೋಮೆಟ್ರಿಕ್ ವ್ಯವಸ್ಥೆ ಬೆಳಗಾವಿಯಲ್ಲಿ ಜಾರಿಗೊಂಡಿಲ್ಲ. ನರೇಗಾದಲ್ಲಿ ಪಾರದರ್ಶಕತೆ ಕಾಪಾಡಲು ಕಟ್ಟುನಿಟ್ಟಿನ ವಿವಿಧ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಲ್ಲದೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೂಡ ಕೈಗೊಳ್ಳಲಾಗಿದೆ.
    | ದರ್ಶನ್ ಎಚ್.ವಿ. ಜಿಪಂ ಸಿಇಒ ಬೆಳಗಾವಿ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts