More

    ಧಾರ್ಮಿಕ ಭಾವನೆಗೆ ಧಕ್ಕೆ ಆಗದಂತೆ ನಡೆದುಕೊಳ್ಳಿ: ಗಣೇಶ ಸಮಿತಿಗೆ ಜಿಲ್ಲಾಧಿಕಾರಿ ಸೂಚನೆ

    ಭದ್ರಾವತಿ: ಈ ಬಾರಿಯ ಗಣಪತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆಗೆ ಷರತ್ತು ಬದ್ಧ ಅನುಮತಿ ನೀಡಲಾಗುವುದು ಎಂದು ಡಿಸಿ ಡಾ. ಆರ್.ಸೆಲ್ವಮಣಿ ಹೇಳಿದರು.
    ಗಣಪತಿ ಹಬ್ಬದ ಅಂಗವಾಗಿ ಪೊಲೀಸ್ ಇಲಾಖೆ ನ್ಯೂಟೌನ್ ರೋಟರಿ ಕ್ಲಬ್‌ನಲ್ಲಿ ಸೋಮವಾರ ಆಯೋಜಿದ್ದ ಶಾಂತಿ ಸಮಿತಿ ಸಭೆಯ ಆಧ್ಯಕ್ಷತೆ ವಹಿಸಿ ಮಾತನಾಡಿ, ಗಣಪತಿ ಹಬ್ಬ ಆಚರಿಸಲು ಅಗತ್ಯ ಅನುಮತಿಯನ್ನು ನೀಡಲು ಏಕಗವಾಕ್ಷಿ ವ್ಯವಸ್ಥೆ ಜಾರಿ ಮಾಡಲಾಗಿದೆ. ಆ ಮೂಲಕ ಸಂಬಂಧಿತ ಸಮಿತಿಗಳವರು ಸೂಕ್ತ ಅಗತ್ಯ ದಾಖಲಾತಿ ನೀಡಿ ಅನುಮತಿ ಪಡೆಯಬಹುದು. ಮೂರ್ತಿ ಪ್ರತಿಷ್ಠಾಪನೆ, ಪೂಜೆ, ವಿಸರ್ಜನೆಯ ಸಮಯದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
    ಸಮಿತಿಯ ಹಿರಿಯರು ತಮ್ಮ ಸಮುದಾಯದ ಯುವಕರಿಗೆ ಅಶಾಂತಿಯಿಂದ ವರ್ತಿಸದೆ, ಘರ್ಷಣೆಗೆ ಅವಕಾಶ ಮಾಡಿಕೊಡದೆ ಸೌಹಾರ್ದತಯುತವಾಗಿ ವರ್ತಿಸುವಂತೆ ತಿಳಿ ಹೇಳಬೇಕು. ಗಣಪತಿ ಪೆಂಡಾಲ್‌ಗಳಿಗೆ ವಿದ್ಯುತ್ ಅಲಂಕಾರ ಮಾಡುವಾಗ ಜಾಗ್ರತೆ ವಹಿಸಬೇಕು. ಯಾವುದೇ ಅನಾಹುತ ಆಗದಂತೆ ಮುನ್ನೆಚ್ಚರಿಕೆ ಇರಲಿ ಎಂದರು.
    ಪ್ರತಿಷ್ಠಾಪನೆ ಸ್ಥಳ ಸೇರಿದಂತೆ ಮೆರವಣಿಗೆ ಸಾಗುವ ದಾರಿಯಲ್ಲಿ ಡಿಜೆ ಧ್ವನಿವರ್ಧಕವನ್ನು ಬಳಸಲು ಅನುಮತಿ ಇರುವುದಿಲ್ಲ. ಕಡಿಮೆ ಡೆಸಿಬಲ್ ಇರುವ ಧ್ವನಿವರ್ಧಕವನ್ನು ಬಳಸಬಹುದು. ಮೆರವಣಿಗೆ ಸಾಗುವ ಮಾರ್ಗ ಮತ್ತು ವೇಳೆಯ ವಿವರಗಳನ್ನು ಸಂಬಂಧಿಸಿದ ಇಲಾಖೆಗೆ ಮುಂಚಿತವಾಗಿ ತಿಳಿಸಿ ಅನುಮತಿ ಪಡೆದು ಅದೇ ರೀತಿಯಲ್ಲಿ ನಡೆದುಕೊಳ್ಳಬೇಕು ಎಂದರು.
    ಹಬ್ಬದ ಸಮಯದಲ್ಲಿ ಎಲ್ಲ ರೀತಿಯ ಮುಂಜಾಗ್ರತೆ ವಹಿಸುವುದರೊಂದಿಗೆ ಸಮಿತಿಯವರು ಪೊಲೀಸರ ಜತೆ ಸಹಕರಿಸಬೇಕು. ಪೆಂಡಾಲ್ ರಕ್ಷಣೆ ಸೇರಿದಂತೆ ಇತರ ಸಂಗತಿಗಳ ಬಗ್ಗೆ ಸಮಿತಿಯ ಸದಸ್ಯರನ್ನು ನೇಮಿಸಿಕೊಂಡು ಅವರ ಸಂಪೂರ್ಣ ವಿವರಗಳನ್ನು ಪೊಲೀಸ್ ಇಲಾಖೆಗೆ ಕೊಡಬೇಕು. ಗಣಪತಿ ವಿಸರ್ಜಿಸುವ ಸಮಯದಲ್ಲಿ ಈಜು ತಿಳಿದವರು ಮಾತ್ರ ನೀರಿಗೆ ಇಳಿಯಬೇಕು ಎಂದು ಎಸ್ಪಿ ಬಿ.ಎಂ.ಲಕ್ಷ್ಮೀಪ್ರಸಾದ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts