More

    ಧರ್ಮ ಮಾರ್ಗದಲ್ಲಿ ನಡೆದರೆ ನೆಮ್ಮದಿಯ ಬದುಕು: ಡಾ. ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ

    ಹೊಳೆಹೊನ್ನೂರು: ಪ್ರತಿಯೊಬ್ಬರು ಅಂತರಂಗದ ಧ್ವನಿಗೆ ಓಗೊಟ್ಟು ಧರ್ಮ ಮಾರ್ಗದಲ್ಲಿ ನಡೆದರೆ ನೆಮ್ಮದಿಯ ಬದುಕು ಸಾಗಿಸಬಹುದು ಎಂದು ತರಳಬಾಳು ಜಗದ್ಗುರು ಡಾ. ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
    ಭದ್ರಾವತಿ ತಾಲೂಕಿನ ಅರಕೆರೆಯಲ್ಲಿ ಗುರುವಾರ ಶ್ರೀ ಬಸವೇಶ್ವರ ಸ್ವಾಮಿಯ ವಿಗ್ರಹ ಪ್ರತಿಷ್ಠಾಪನೆ ಹಾಗೂ ನೂತನ ಆಲಯ ಪ್ರವೇಶ ಪ್ರಯುಕ್ತ ಹಮ್ಮಿಕೊಂಡಿದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.
    ವ್ಯಕ್ತಿಯ ಶ್ರೀಮಂತಿಕೆಯನ್ನು ಹಣದಿಂದ ಅಳೆಯುವುದಲ್ಲ. ದ್ರವ್ಯ ಶ್ರೀಮಂತಿಕೆ ಹೊಂದುವುದನ್ನು ಸಿರಿತನ ಎಂದು ಭಾವಿಸುವುದು ತಪ್ಪು, ಭಗವಂತನ ಮೇಲೆ ಅತೀವ ಭಕ್ತಿ ಹೊಂದಿದವರು ಶ್ರೀಮಂತರು. ಧರ್ಮವೆಂದರೆ ಬಾಯಿ ಮಾತಿನ ಉಪದೇಶದ ಆಡಂಬರತನವಲ್ಲ. ಧರ್ಮಪ್ರಜ್ಞೆ ಇರುವವರು ಪಾಪ ಕೃತ್ಯ ಮಾಡುವುದಿಲ್ಲ ಎನ್ನಲಾಗದು.
    ಧರ್ಮ, ಅಧರ್ಮ ಪ್ರಜ್ಞೆಗಳಿಗೆ ಮಹಾಭಾರತದಲ್ಲಿಯೇ ಉತ್ತರಗಳಿವೆ. ವ್ಯವಹಾರಗಳಲ್ಲಿ ಧರ್ಮ ನೆಲೆ ಕಳೆದುಕೊಂಡು ಅಧರ್ಮ ತಾಂಡವವಾಡುತ್ತಿದೆ. ಪ್ರತಿಯೊಬ್ಬರು ಅವರವರ ಪರಿಶುದ್ಧ ಆತ್ಮ ಧ್ವನಿಗೆ ಓಗೊಡಬೇಕು. ಎಲ್ಲ ಸಮಯದಲ್ಲಿ ಸತ್ಯವನ್ನೇ ನುಡಿದು ಧರ್ಮ ಮಾರ್ಗದಲ್ಲಿ ನಡೆಯಬೇಕು. ನಮ್ಮಲಿರುವ ವಿವಿಧ ಮತ, ಧರ್ಮಗಳು ಧರ್ಮವನ್ನೇ ಭೋದಿಸುತ್ತವೆ ಎಂದರು.
    ವ್ಯಾವಹಾರಿಕ ಪ್ರಜ್ಞೆಯಲ್ಲಿ ಧರ್ಮಪ್ರಜ್ಞೆ ಸಂಪೂರ್ಣವಾಗಿ ಮೂಲೆ ಗುಂಪಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಪರಿಶುದ್ಧ ಸ್ಥಿರತೆಯ ಪ್ರೀತಿ ಭಕ್ತಿಯ ಸೆಳೆತವನ್ನು ಪ್ರದರ್ಶಿಸುತ್ತದೆ. ಪಾರಮಾರ್ಥಿಕ ಜೀವನದಲ್ಲಿ ಭಕ್ತಿಯೆಂಬ ಸೆಲೆಗೆ ಸಿಲುಕಿದ ಯಾರೊಬ್ಬರು ಒಬ್ಬಂಟಿಗಳಲ್ಲ. ಉಪದೇಶ ನೀಡುವಾಗ ಎಲ್ಲರೂ ಒಳ್ಳೆಯವರೆ. ಬೇರೊಬ್ಬರ ಜಗಳದಲ್ಲಿ ನ್ಯಾಯ ತೀರ್ಮಾನ ಮಾಡಿ ರಾಜಿ ಪಂಚಾಯಿತಿ ನಡೆಸುವ ನ್ಯಾಯಮೂರ್ತಿಗಳು ಅವರ ಮನೆಯಲ್ಲಿ ನಡೆಯುವ ಕಲಹಗಳ ಪಂಚಾಯಿತಿ ತೀರ್ಮಾನಗಳಿಗೆ ಮಾತ್ರ ಸುತಾರಾಂ ಒಪ್ಪುವುದಿಲ್ಲ. ಮನುಷ್ಯನಿಗೆ ಹಣ ಮೇಲಿನ ವ್ಯಾಮೋಹ ಕಡಿಮೆಯಾಗಬೇಕು. ಗಳಿಸಿದ ಸಂಪತ್ತು ಧರ್ಮ ಕಾರ್ಯಗಳಿಗೆ ಸದ್ಬಳಕೆ ಮಾಡಿಕೊಳುವ ವಿವೇಚನೆ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts