More

    ಜೀವನದಲ್ಲಿ ಪರೋಪಕಾರಿ ಗುಣ ಅಳವಡಿಸಿಕೊಳ್ಳಿ

    ಜೇವರ್ಗಿ: ಮಾನವ ಜನ್ಮ ಶ್ರೇಷ್ಠವಾದುದ್ದು, ಪರೋಪಕಾರಿ ಗುಣ ಅಳವಡಿಸಿಕೊಂಡು ಬದುಕು ನಡೆಸಬೇಕು. ಅಂದಾಗಲೇ ಜನ್ಮ ಸಾರ್ಥಕವಾಗುತ್ತದೆ ಎಂದು ಕಾಶಿ ಜಗದ್ಗುರು ಶ್ರೀ ಡಾ.ಚಂದ್ರಶೇಖರ ಶಿವಾಚಾರ್ಯರು ನುಡಿದರು.

    ಶಖಾಪುರ (ಎಸ್‌ಎ) ಗ್ರಾಮದಲ್ಲಿ ಸಿದ್ಧಕುಲ ಚಕ್ರವರ್ತಿ ಶ್ರೀ ಸದ್ಗುರು ವಿಶ್ವಾರಾಧ್ಯರು ಮತ್ತು ಮಾತೋಶ್ರೀ ಬಸವಾಂಬೆ ಅವರ ೭೩ನೇ ಜಾತ್ರೋತ್ಸವ ನಿಮಿತ್ತ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಧರ್ಮಸಭೆಯನ್ನು ಉದ್ಘಾಟಿಸಿ ಮಾತನಾಡಿ, ಧರ್ಮವು ಸಕಲ ಪುರುಷಾರ್ಥಗಳ ಮೂಲವಾಗಿದೆ. ಧರ್ಮದಿಂದಲೇ ಅರ್ಥ, ಕಾಮ, ಮೋಕ್ಷಗಳು ಪ್ರಾಪ್ತವಾಗುತ್ತವೆ. ಇಹದಲ್ಲಿ ಸುಖವನ್ನು ಕೊಟ್ಟು, ಪರದಲ್ಲಿ ಸದ್ಗತಿ ಕೊಡುವ ಉತ್ತಮ ಆಚರಣೆಯೇ ಧರ್ಮ ಎಂದರು.

    ಸಿದ್ಧಾಂತ ಶಿಖಾಮಣಿಯಲ್ಲಿ ಅಹಿಂಸಾ, ಸತ್ಯ, ಅಸ್ತೇಮ, ಬ್ರಹ್ಮಚರ್ಮ, ದಯಾ, ಕ್ಷಮಾ, ಪೂಜೆ, ಜಪ, ಧ್ಯಾನಗಳನ್ನು ಧರ್ಮಾಚರಣೆಯ ಮಾರ್ಗಗಳಾಗಿ ಹೇಳಲಾಗಿದೆ. ಇವುಗಳನ್ನು ಪ್ರತಿಯೊಬ್ಬರೂ ಆಚರಿಸಬೇಕು. ಧರ್ಮವನ್ನು ಜೀವನದ ಅಡಿಪಾಯವನ್ನಾಗಿ ಮಾಡಿಕೊಂಡರೆ ಬದುಕು ಸಾರ್ಥಕವಾಗುತ್ತದೆ. ಸರ್ವರು ಧರ್ಮದಿಂದ ನಡೆಯಬೇಕೆಂದು ಎಂದು ಹೇಳಿದರು.

    ಶಖಾಪೂರದ ಶ್ರೀ ಡಾ.ಸಿದ್ಧರಾಮ ಶಿವಾಚಾರ್ಯರು ಮಾತನಾಡಿ, ಭಕ್ತರ ಸಹಕಾರದಿಂದಲೇ ಪ್ರಸಕ್ತ ವರ್ಷ ಸದ್ಗುರು ವಿಶ್ವಾರಾಧ್ಯರು ಹಾಗೂ ಮಾತೋಶ್ರೀ ಬಸವಾಂಬೆ ಅವರ ಜೋಡು ರಥೋತ್ಸವ ಅದ್ದೂರಿಯಿಂದ ನಡೆದಿದೆ. ಕಾಶಿ ಜಗದ್ಗುರುಗಳು ಧರ್ಮಸಭೆಯಲ್ಲಿ ಸಾನ್ನಿಧ್ಯ ವಹಿಸಿರುವುದು ಉತ್ಸವಕ್ಕೆ ಇನ್ನಷ್ಟು ಮೆರಗು ಬಂದಂತಾಗಿದೆ ಎಂದರು.

    ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯರಿಗೆ ವಿಶ್ವ ಬಸವಾಂಬೆ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು.

    ಪಾಳಾದ ಶ್ರೀ ಡಾ.ಗುರುಮೂರ್ತಿ ಶಿವಾಚಾರ್ಯರು, ಬೆಳಗುಂಪಾದ ಶ್ರೀ ಅಭಿನವ ಪರ್ವತೇಶ್ವರ ಶಿವಾಚಾರ್ಯರು, ಹನ್ನೂರಿನ ಶ್ರೀ ಶರಣಪ್ಪ ದೇವರು, ಇಂಗಳಗಿಯ ಶ್ರೀ ಚಂದ್ರಶೇಖರ ಶರಣರು, ಹರಸೂರಿನ ಶ್ರೀ ಕರಿಸಿದ್ಧ ಶಿವಾಚಾರ್ಯರು, ಓಂಕಾರ ಬೇನೂರಿನ ಶ್ರೀ ಸಿದ್ಧರೇಣುಕಾ ಶಿವಾಚಾರ್ಯರು, ಸವಳಹಳ್ಳದ ಶ್ರೀ ಶರಣಬಸಪ್ಪ ಅಪ್ಪ, ಕುಳೇಕುಮಟಗಿಯ ಶ್ರೀ ಗುರುಸ್ವಾಮಿ ಶರಣರು, ಗಂಜಿಹಾಳಾದ ಶ್ರೀ ನಿಂಗಯ್ಯ ಸ್ವಾಮಿಗಳು ಸಮ್ಮುಖ ವಹಿಸಿದ್ದರು.

    ಪ್ರಮುಖರಾದ ರಾಜಶೇಖರ ಸೀರಿ, ಕಾಶೀರಾಯಗೌಡ ಯಲಗೌಡ, ಮಲ್ಲಣ್ಣಗೌಡ ಮಾಲಿಪಾಟೀಲ್, ಚನ್ನಮಲ್ಲಯ್ಯ ಹಿರೇಮಠ, ಡಾ.ಪಿ.ಎಂ.ಮಠ, ಐ.ಎಸ್.ಹಿರೇಮಠ, ಅಂಬರೀಶ ಶಖಾಪುರ, ಶಂಕರಗೌಡ ಹಾಲಗಡ್ಲಾ ಇತರರಿದ್ದರು.

    ಶ್ರೀ ಡಾ.ಸಿದ್ಧರಾಮ ಶಿವಾಚಾರ್ಯರು ಧರ್ಮ ಕಾರ್ಯದ ಜತೆಗೆ ಸಮಾಜವನ್ನು ಉದ್ಧರಿಸುವ ಕೆಲಸ ಮಾಡುತ್ತಿದ್ದಾರೆ. ಪ್ರತಿ ಬಾರಿ ಜಾತ್ರೋತ್ಸವ ನಿಮಿತ್ತ ಸಾಧಕ ಶ್ರೀಗಳನ್ನು ಗುರುತಿಸಿ, ಪ್ರಶಸ್ತಿ ನೀಡಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ. ಶಖಾಪುರ ಶ್ರೀಗಳು ಪಂಚಪೀಠಗಳನ್ನು ತಮ್ಮ ಪ್ರಾಣದಷ್ಟು ಪ್ರೀತಿಸುತ್ತಾ ಹಾಗೂ ಗೌರವಿಸುತ್ತಾ ಬಂದಿದ್ದಾರೆ. ಇಂತಹ ಗುರುಗಳು ಸಿಕ್ಕಿರುವುದು ಭಕ್ತರ ಪುಣ್ಯವೇ ಸರಿ.
    | ಜಗದ್ಗುರು ಶ್ರೀ ಡಾ.ಚಂದ್ರಶೇಖರ ಶಿವಾಚಾರ್ಯರು, ಕಾಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts