More

    ದೃಶ್ಯವೈಭೋಗದೊಳಗೆ ಅಬ್ಬರದ ರೋಚಕತೆ…; RRR- ವಿಜಯವಾಣಿ ಸಿನಿಮಾ ವಿಮರ್ಶೆ

    • ಚಿತ್ರ: ಆರ್​ಆರ್​ಆರ್
    • ನಿರ್ದೇಶನ: ಎಸ್.ಎಸ್. ರಾಜಮೌಳಿ
    • ನಿರ್ಮಾಣ: ವಿ.ವಿ. ದಾನಯ್ಯ
    • ತಾರಾಗಣ: ಜೂನಿಯರ್ ಎನ್​ಟಿಆರ್, ರಾಮ್​ಚರಣ್​ ತೇಜ, ಆಲಿಯಾ ಭಟ್, ಅಜಯ್ ದೇವಗನ್ ಮುಂತಾದವರು.

    | ಚೇತನ್ ನಾಡಿಗೇರ್ ಬೆಂಗಳೂರು

    ‘ಆಕೆಯನ್ನು ಕಾಪಾಡೋದಕ್ಕೆ ಒಬ್ಬ ಇದ್ದಾನೆ. ಆ ಹುಡುಗಿಯನ್ನು ಎಲ್ಲಿ ಬಚ್ಚಿಟ್ಟಿದ್ದರೂ ಹುಡುಕಿ, ಅವಳನ್ನು ಕರೆದುಕೊಂಡು ಹೋಗುತ್ತಾನೆ …’ ಎಂಬ ಮಾಹಿತಿ ಬ್ರಿಟಿಷ್ ಅಧಿಕಾರಿಗಳಿಗೆ ಸಿಗುತ್ತದೆ. ಆದರೆ, ಅವನು ದೆಹಲಿಯಲ್ಲಿದ್ದಾನೆ ಎಂಬ ವಿಷಯವನ್ನು ಬಿಟ್ಟರೆ ಮಿಕ್ಕಂತೆ ಆತ ಯಾರು? ಹೇಗಿದ್ದಾನೆ? ಅವನ ಹೆಸರೇನು? ಮುಂತಾದ ಯಾವ ವಿಷಯಗಳೂ ಯಾರಿಗೂ ಗೊತ್ತಿರುವುದಿಲ್ಲ. ಇಷ್ಟಿದ್ದರೂ ಅವನನ್ನು ಹುಡುಕಿ ತೆಗೆಯಬೇಕು. ಹಾಗೆ ಹುಡುಕಿದವರಿಗೆ ವಿಶೇಷ ಬಹುಮಾನವನ್ನು ಘೋಷಿಸಲಾ ಗುತ್ತದೆ. ಅಲ್ಲಿಂದ ಒಂದು ಬೇಟೆ ಶುರುವಾಗುತ್ತದೆ. ‘ಆರ್​ಆರ್​ಆರ್’ ಕಥೆ ಶುರುವಾಗುವುದು ಹೀಗೆ. ಅದು ಹೇಗೆ ಮುಂದುವರಿಯುತ್ತದೆ, ಹೇಗೆ ಮುಕ್ತಾಯವಾಗುತ್ತದೆ, ಇದರಲ್ಲಿ ಗೆಲ್ಲುವವರ್ಯಾರು? ಎಂದು ಹೇಳುವುದು ಕಷ್ಟ. ಕಷ್ಟ ಎನ್ನುವುದಕ್ಕಿಂತ ಅದನ್ನು ತೆರೆಯ ಮೇಲೆ ನೋಡಿಯೇ ಆನಂದಿಸಬೇಕು.

    ಏಕೆಂದರೆ, ‘ಆರ್​ಆರ್​ಆರ್’ ಹೇಳುವ ಅಥವಾ ಕೇಳುವ ಸಿನಿಮಾ ಅಲ್ಲ. ಅದೊಂದು ನೋಡುವಂತಹ ಸಿನಿಮಾ. ಪಕ್ಕಾ ರಾಜಮೌಳಿ ಬ್ರಾಂಡ್​ನ ಒಂದು ಸಿನಿಮಾ. ಇಲ್ಲಿ ಲಾಜಿಕ್ ಮುಖ್ಯವಾಗುವುದಿಲ್ಲ, ಮ್ಯಾಜಿಕ್ ಬಹಳ ಮುಖ್ಯವಾಗುತ್ತದೆ ಮತ್ತು ತೆರೆಯ ಮೇಲೆ ಅಂಥದ್ದೊಂದು ಮ್ಯಾಜಿಕ್ ಸೃಷ್ಟಿಸುವುದಕ್ಕೆ ರಾಜಮೌಳಿ ಅವರಿಂದಲೇ ಸಾಧ್ಯ. ಬಹುಶಃ ಪ್ರೇಕ್ಷಕರು ಇದುವರೆಗೂ ಅಂತಹ ದೃಶ್ಯಗಳನ್ನು ತೆರೆಯ ಮೇಲೆ ನೋಡಿರಲಿಕ್ಕಿಲ್ಲ. ಅಂಥದ್ದೊಂದು ಜಗತ್ತನ್ನು ತೆರೆಯ ಮೇಲೆ ತಂದಿದ್ದಾರೆ ರಾಜಮೌಳಿ. ಕಥೆಯ ಬಗ್ಗೆ ಹೇಳುವುದಾದರೆ, ಚಿತ್ರವನ್ನು ಯಾವುದೋ ಒಂದು ಜಾನರ್​ಗೆ ಸೇರಿಸುವುದು ಕಷ್ಟ. ಇಲ್ಲಿ ದೇಶಭಕ್ತಿ ಇದೆ, ಗೆಳೆತನ ಇದೆ, ಸೆಂಟಿಮೆಂಟ್ ಇದೆ, ಕಾಮಿಡಿಯನ್ನೂ ಸಾಧ್ಯವಾದಲ್ಲಿ ಸೇರಿಸಲಾ ಗಿದೆ, ಎಲ್ಲಕ್ಕಿಂತ ಹೆಚ್ಚಾಗಿ ಆಕ್ಷನ್ ಇದೆ. ಕಥೆ ಬಹಳ ಸರಳವೆನಿಸಬಹುದು. ಆದರೆ, ಅದನ್ನು ತೆರೆಯ ಮೇಲೆ ತಂದ ರೀತಿ ಮೆಚ್ಚಲೇಬೇಕು. ಮೊದಲೇ ಹೇಳಿದ್ದಂತೆ ಇಲ್ಲಿ ಲಾಜಿಕ್ಕಿಗೆ ಅವಕಾಶವಿಲ್ಲ. ಅದನ್ನು ಪಕ್ಕಕ್ಕಿಟ್ಟರೆ ಉಸಿರು ಬಿಗಿಹಿಡಿದು ನೋಡುವಂತಹ ಚಿತ್ರ ಮಾಡಿದ್ದಾರೆ ಅವರು. ಚಿತ್ರದ ಮೊದಲಾರ್ಧ 98 ನಿಮಿಷಗಳಾದರೂ ಹೋಗುವುದೇ ಗೊತ್ತಾಗುವುದಿಲ್ಲ. ಅದರಲ್ಲೂ ಇಂಟರ್​ವೆಲ್​ಗಿಂತ ಮುಂಚಿನ 20 ನಿಮಿಷಗಳು ಕಣ್ಣು ಮಿಟುಕಿಸದಂತೆ ನೋಡುವಂತೆ ಮಾಡಿದ್ದಾರೆ. ದ್ವಿತೀಯಾರ್ಧದಲ್ಲಿ ಚಿತ್ರ ಸ್ವಲ್ಪ ನಿಧಾನವಾದರೂ, ಅಬ್ಬಾ ಎನ್ನುವಂತೆ ಕ್ಲೈಮ್ಯಾಕ್ಸ್ ರೂಪಿಸಿದ್ದಾರೆ. ಈ ಚಿತ್ರಕ್ಕೆ ಬರೀ ರಾಜಮೌಳಿ ಒಬ್ಬರಿಗೆ ಕ್ರೆಡಿಟ್ ಕೊಡುವುದು ತಪ್ಪಾಗುತ್ತದೆ. ಇದೊಂದು ತಂಡದ ಕೆಲಸ. ಕಥೆ ಬರೆದ ವಿಜಯೇಂದ್ರ ಪ್ರಸಾದ್​ರಿಂದ ಹಿಡಿದು, ಅದನ್ನು ಅಂತಿಮವಾಗಿ ನಂಬುವಂತೆ ತೆರೆಯ ಮೇಲೆ ಮೂಡಿಸುವಲ್ಲಿ ನೂರಾರು ಜನ ಶ್ರಮ ಹಾಕಿದ್ದಾರೆ. ಛಾಯಾಗ್ರಹಣ, ಸಂಗೀತ, ಕಲಾ ನಿರ್ದೇಶನ, ಗ್ರಾಫಿಕ್ಸ್ ಯಾವುದರ ಬಗ್ಗೆಯೂ ತಪು್ಪ ಕಂಡುಹಿಡಿಯುವುದು ಕಷ್ಟ. ಆ ನಿಟ್ಟಿನಲ್ಲಿ ಇದೊಂದು ಪಕ್ಕಾ ತಂತ್ರಜ್ಞರ ಚಿತ್ರ.

    ಇಡೀ ಚಿತ್ರ ಎರಡೇ ಪಾತ್ರಗಳ ಸುತ್ತ ಸುತ್ತುತ್ತದೆ ಮತ್ತು ಜೂ ಎನ್​ಟಿಆರ್ ಹಾಗೂ ರಾಮ್​ಚರಣ್​ ತೇಜ ಇಬ್ಬರೂ ಪೈಪೋಟಿ ಅಭಿನಯ ನೀಡಿದ್ದಾರೆ. ಮಿಕ್ಕಂತೆ ಆಲಿಯಾ ಭಟ್, ಅಜಯ್ ದೇವಗನ್ ಮುಂತಾದವರು ಇದ್ದಾರಾದರೂ, ಯಾರಿಗೂ ಹೆಚ್ಚು ಕೆಲಸವಿಲ್ಲ.

    ರಾಮ್​ಗೋಪಾಲ್ ವರ್ಮಾ ಜತೆ ಅಂಡರ್​ವರ್ಲ್ಡ್​​ನಲ್ಲಿ ಉಪೇಂದ್ರ; ಯಾರದು ‘R’?

    ಅಭಿಮಾನಿಗಳಲ್ಲಿ ಕ್ಷಮೆ ಕೋರಿದ್ರು ಜೇಮ್ಸ್ ನಿರ್ಮಾಪಕ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts