More

    ರೊಣದಲ್ಲೀಗ ರೋಗ ಭೀತಿ

    ಸೋಮು ಲದ್ದಿಮಠ ರೋಣ

    ಭಾರಿ ಮಳೆಯಿಂದಾಗಿ ಪಟ್ಟಣದ ಜನತೆ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಈಗ ಮಳೆಯ ಅಬ್ಬರವೇನೋ ಕಡಿಮೆಯಾಗಿದೆ ಆದರೆ, ತಗ್ಗು ಪ್ರದೇಶ ಸೇರಿದಂತೆ ಚರಂಡಿಗಳಲ್ಲಿ ಕೊಳಚೆ ನೀರು ಸಂಗ್ರಹವಾಗಿ ಊರಲ್ಲಿ ದುರ್ನಾತ ಬೀರುತ್ತಿದೆ. ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು ಸಾಂಕ್ರಾಮಿಕ ರೋಗಗಳು ಕೂಡ ಉಲ್ಬಣವಾಗುತ್ತಿವೆ. ಇದರಿಂದ ಪಟ್ಟಣದ ನಿವಾಸಿಗಳು ರೋಸಿ ಹೋಗಿದ್ದಾರೆ.

    ಪಟ್ಟಣದ ಕಟಗರ ಓಣಿ, ಅಂಬೇಡ್ಕರ್ ನಗರ, ಪೌಜರ್ ಪ್ಲಾಟ್ ಹತ್ತಿರ, ಮುಗಳಿ ರಸ್ತೆಯಲ್ಲಿರುವ ಶರಣ ಬಸವೇಶ್ವರ ಪ್ರೌಢ ಶಾಲೆಯ ಹತ್ತಿರ, ನೀರಾವರಿ ವಸತಿ ನಿಲಯದಲ್ಲಿ, ವಿವಿಧೆಡೆ ಹರಿದ ರಾಜಕಾಲುವೆಯ ತಗ್ಗು ಪ್ರದೇಶದಲ್ಲಿ ನೀರು ನಿಂತು ದುರ್ನಾತ ಬೀರುತ್ತಿದೆ.

    ಪಟ್ಟಣದಲ್ಲಿ ಒಂದು ತಿಂಗಳಿನಿಂದ ಸೊಳ್ಳೆಗಳ ಕಾಟ ಮಿತಿ ಮೀರಿದರೂ ಅದರ ನಿಯಂತ್ರಣಕ್ಕೆ ಪುರಸಭೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ನಿಯಮಿತವಾಗಿ ಚರಂಡಿಗಳನ್ನು ಸ್ವಚ್ಛಗೊಳಿಸದ ಕಾರಣ ರಸ್ತೆ ಮೇಲೆ ಗಲೀಜು ಹರಿಯುತ್ತಿದೆ. ಹಂದಿಗಳ ಹಾವಳಿ ಕೂಡ ಹೆಚ್ಚಾಗಿದ್ದು ಅನೈರ್ಮಲ್ಯ ತಾಂಡವವಾಡುತ್ತಿದೆ. ಸ್ಥಳೀಯರು ಮೂಗು ಮುಚ್ಚಿಕೊಂಡು ಓಡಾಡುವಂತಹ ಸ್ಥಿತಿ ನಿರ್ವಣವಾಗಿದೆ. ವಾಣಿಜ್ಯ ವಹಿವಾಟು ಸೇರಿದಂತೆ ವಿವಿಧ ಕೆಲಸಗಳಿಗಾಗಿ ನಿತ್ಯವೂ ಸಾವಿರಾರು ಜನರು ಪಟ್ಟಣಕ್ಕೆ ಬಂದು ಹೋಗುತ್ತಾರೆ. ಸಾವಿರಾರು ಮಕ್ಕಳು ಇಲ್ಲಿನ ಶಾಲಾ-ಕಾಲೇಜ್​ಗಳಿಗೆ ಬರುತ್ತಾರೆ. ಇಲ್ಲಿನ ದುಃಸ್ಥಿತಿ ಕಂಡು ಸ್ಥಳೀಯಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.

    ತಾಂತ್ರಿಕ ಸಮಸ್ಯೆಗಳಿಂದ ಪಟ್ಟಣದಲ್ಲಿ ಪದೇಪದೆ ವಿದ್ಯುತ್ ವ್ಯತ್ಯಯವಾಗುತ್ತಿದೆ. ಹೀಗಾಗಿ ಸೊಳ್ಳೆ ನಿರೋಧಕ ಮತ್ತು ಫ್ಯಾನ್ ಬಳಕೆ ಸಾಧ್ಯವಾಗುತ್ತಿಲ್ಲ. ಪರಿಣಾಮ ರಾತ್ರಿ ನೆಮ್ಮದಿಯಿಂದ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ. ಸಂಜೆಯಾಗುತ್ತಲೆ ದೀಪದ ಹುಳಗಳ ಕಾಟ ಹೆಚ್ಚಾಗುತ್ತದೆ. ಪುರಸಭೆ ಅಧಿಕಾರಿಗಳು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮುಖ್ಯವಾಗಿ ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸಕಾಲಕ್ಕೆ ಚರಂಡಿಗಳನ್ನು ಸ್ವಚ್ಛಗೊಳಿಸಿ ತ್ಯಾಜ್ಯ ವಿಲೇವಾರಿ ಮಾಡಬೇಕು. ಫಾಗಿಂಗ್ ಮಾಡುವ ಮೂಲಕ ಸೊಳ್ಳೆಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಂಡು ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಬೇಕು ಎನ್ನುತ್ತಾರೆ ಸ್ಥಳೀಯ ನಿವಾಸಿ ಬಸನಗೌಡ ಬಿರಾದಾರ, ಅಜ್ಜು ಬೇಪಾರಿ.

    ಅಧಿಕಾರಿಗಳ ಸಮನ್ವಯ ಕೊರತೆ: ಒಂದೆಡೆ ಫಾಗಿಂಗ್ ಮಾಡಲು ಆರೋಗ್ಯ ಇಲಾಖೆ ಸಾಕಷ್ಟು ಪ್ರಮಾಣದಲ್ಲಿ ಆಯಿಲ್ ಪೂರೈಸುತ್ತಿದೆ ಎಂದು ಆರೋಗ್ಯ ಅಧಿಕಾರಿಗಳು ಹೇಳುತ್ತಾರೆ. ಮತ್ತೊಂದೆಡೆ ಫಾಗಿಂಗ್ ಮಾಡಲು ನಮಗೆ ಆರೋಗ್ಯ ಇಲಾಖೆ ಆಯಿಲ್ ನೀಡುತ್ತಿಲ್ಲ ಎಂದು ಪುರಸಭೆ ಮುಖ್ಯಾಧಿಕಾರಿ ಕೃಷ್ಣಾ ನಾಯಕ ದೂರುತ್ತಿದ್ದಾರೆ. ಅಲ್ಲದೆ, ಫಾಗಿಂಗ್ ಮಾಡಿದರೆ ಜನರ ಆರೋಗ್ಯ ಮೇಲೆ ದುಷ್ಟರಿಣಾಮ ಬೀರುತ್ತದೆ ಎಂದು ಕೂಡ ಕೃಷ್ಣಾ ನಾಯಕ ಹೇಳುತ್ತಿದ್ದಾರೆ. ಹಾಗಾದರೆ ಸರ್ಕಾರದ ಫಾಗಿಂಗ್ ಪದ್ಧತಿ ತಪ್ಪೇ? ಅಥವಾ ಇದು ಮುಖ್ಯಾಧಿಕಾರಿಯ ಬೇಜವಾಬ್ದಾರಿಯ ವರ್ತನೆಯೇ..? ಎನ್ನುವ ಪ್ರಶ್ನೆ ಮೂಡಿದೆ. ಒಟ್ಟಾರೆ ಆರೋಗ್ಯ ಇಲಾಖೆ ಹಾಗೂ ಪುರಸಭೆಯವರ ನಡುವೆ ಸಮನ್ವಯದ ಕೊರತೆಯಿಂದಾಗಿ ಸಾರ್ವಜನಿಕರು ಸಾಂಕ್ರಾಮಿಕ ರೋಗಗಳಿಂದ ಪರದಾಡುವಂತಾಗಿದೆ.

    ರೋಣ ಪಟ್ಟಣದಲ್ಲಿ ಈಗಾಗಲೇ ಲಾರ್ವಾ ಸಮೀಕ್ಷೆ ಮಾಡಲಾಗಿದೆ. ಇತ್ತೀಚೆಗೆ 3 ಶಂಕಿತ ಡೆಂಘೆ ಹಾಗೂ 9 ಟೈಫಾಯಿಡ್ ಪ್ರಕರಣಗಳು ಪತ್ತೆಯಾಗಿವೆ. ಸೊಳ್ಳೆಗಳ ನಿಯಂತ್ರಣಕ್ಕೆ ಕೈಗೊಳ್ಳಬಹುದಾದ ಎಚ್ಚರಿಕೆ ಕ್ರಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಜಾಥಾ ಮಾಡಲಾಗಿದೆ. ಫಾಗಿಂಗ್ ಮಾಡುವಂತೆ ಪುರಸಭೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
    | ಕೆ.ಎ. ಹಾದಿಮನಿ, ಸರ್ಕಾರಿ ಆಸ್ಪತ್ರೆಯ ಆರೋಗ್ಯ ಶಿಕ್ಷಣಾಧಿಕಾರಿ

    ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಹಾಗೂ ಪೌಡರ್ ಸಿಂಪಡಣೆ ಮಾಡುವಂತೆ ಪುರಸಭೆಗೆ ಹಲವಾರು ಸಲ ಮನವಿ ಮಾಡಿದ್ದೇವೆ. ಆದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ರೋಗ ಹರಡುವ ಭೀತಿ ಕಾಡುತ್ತಿದೆ.
    | ಸಂತೋಷ ಕಡಿವಾಲ, ಪುರಸಭೆ 16ನೇ ವಾರ್ಡ್ ಸದಸ್ಯ

    ಸಾಂಕ್ರಾಮಿಕ ರೋಗ ತಡೆಗಟ್ಟಲು ನಿಂತ ಮಲಿನ ನೀರು ತೆರವುಗೊಳಿಸುವುದೊಂದೇ ಮಾರ್ಗ. ನಿಂತ ನೀರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲಾರ್ವಾ ಉತ್ಪತ್ತಿಯಾಗಿ ಡೆಂಘೆ, ಟೈಫಾಯಿಡ್, ಚಿಕೂನ್​ಗುನ್ಯಾ ಸೇರಿದಂತೆ ವಿವಿಧ ಸಾಂಕ್ರಾಮೀಕ ರೋಗಗಳು ಹರಡುತ್ತವೆ. ಎಲ್ಲೆಂದರಲ್ಲಿ ಮಲಿನ ನೀರು ನಿಲ್ಲದ್ದಂತೆ ಸೂಕ್ತ ಕ್ರಮ ಕೈಗೊಳ್ಳುವುದು ಪುರಸಭೆಯ ಜವಾಬ್ದಾರಿ. ಫಾಗಿಂಗ್ ಮಾಡಲು ಬಳಸುವ ಆಯಿಲ್ ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹವಿದ್ದು, ಪುರಸಭೆಯವರು ಅದನ್ನು ತಗೆದುಕೊಂಡು ಪೌರ ಕಾರ್ವಿುಕರ ಮೂಲಕ ಫಾಗಿಂಗ್ ಮಾಡಿಸಬೇಕು.
    ಡಾ. ಬಿ.ಎಸ್. ಭಜಂತ್ರಿ, ತಾಲೂಕು ಆರೋಗ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts