More

    ತೋಟ-ಗದ್ದೆ ಸಂಪೂರ್ಣ ಹಾಳು

    ಶಶಿಧರ ಕುಲಕರ್ಣಿ ಮುಂಡಗೋಡ

    ಶುಂಠಿಯಿಂದ ಬಂದ ಲಾಭ ಆನೆ ದಾಳಿಯಲ್ಲಿ ಕೊಚ್ಚಿ ಹೋಗಿದೆ. ಕೈಗೆ ಬಂದ ಅಡಕೆ ಫಸಲು ನೆಲದಲ್ಲಿ ಹುದುಗಿ ಹಾಳಾಗಿದೆ. ಇಲ್ಲಿ ಗೋವಿನಜೋಳ ಬೆಳೆದಿತ್ತೇ ಎನ್ನುವಷ್ಟರ ಮಟ್ಟಿಗೆ ಗದ್ದೆ ಬಟಾಬಯಲು ಆದಂತೆ ಕಂಡುಬರುತ್ತಿದೆ.

    ಹೌದು! ತಾಲೂಕಿನ ಕಾತೂರ ಅರಣ್ಯ ವ್ಯಾಪ್ತಿಯ ಶಿಂಗನಳ್ಳಿ ಗ್ರಾಮದ ರೈತರ ಬದುಕು ಈ ವರ್ಷ ನಲುಗಿ ಹೋಗಿದೆ. ಅತಿವೃಷ್ಟಿ, ಅನಾವೃಷ್ಟಿಯಿಂದ ಹಾನಿ ಅನುಭವಿಸುತ್ತಿದ್ದ ರೈತರು ಈ ವರ್ಷ ಕಾಡಾನೆ ದಾಳಿಯಿಂದ ಬೆಳೆ ಹಾನಿ ಅನುಭವಿಸಿದ್ದಾರೆ.

    ಕಳೆದ ಎರಡು ದಿನಗಳಿಂದ ಶಿಂಗನಳ್ಳಿ ಗ್ರಾಮದ 12 ರೈತರ ಅಡಕೆ, ಬಾಳೆ ತೋಟ ಹಾಗೂ ಗೋವಿನಜೋಳ, ಭತ್ತದ ಗದ್ದೆಗಳು ಗಜಪಡೆಯಿಂದ ನಲುಗಿವೆ. ಸಂಜೆಯಾಗುತ್ತಲೇ ದಾಳಿ ನಡೆಸುವ ಕಾಡಾನೆಗಳು ಸೂರ್ಯೋದಯವಾಗುವ ಮುಂಚೆ ಬೆಳೆಯನ್ನು ನೆಲಸಮ ಮಾಡುತ್ತಿವೆ. ನಿನ್ನೆ ನೋಡಿದ್ದ ಬೆಳೆ ಇವತ್ತು ಇಲ್ಲದಂತಾಗಿರುತ್ತದೆ. ಈ ಭಾಗದ ರೈತರು ಆನೆ ದಾಳಿಯಿಂದ ಹೈರಾಣಾಗಿದ್ದು, ಬೆಳೆ ಉಳಿಸಿಕೊಳ್ಳಲು ಸಾಧ್ಯವಾಗದೇ ತಲೆ ಮೇಲೆ ಕೈ ಹೊತ್ತು ಕುಳಿತುಕೊಂಡಿದ್ದಾರೆ.

    ಶುಂಠಿ ಬೆಳೆಯಲ್ಲಿ ಬಂದಿದ್ದ ಲಾಭವನ್ನು ಬಾಳೆ ಬೆಳೆಗೆ ಖರ್ಚು ಮಾಡಿದ್ದರು. ಇನ್ನೇನು ಫಸಲು ಬಂತು ಎನ್ನುವಾಗಲೇ, ಬೆಳೆಯ ಜತೆಗೆ ನೀರಾವರಿ ಸೌಲಭ್ಯದ ಪೈಪ್​ಗಳನ್ನು ಕಿತ್ತು ಆನೆಗಳು ಹಾನಿ ಮಾಡಿವೆ. ಕೊಳವೆಬಾವಿಯನ್ನು ಕಿತ್ತಿವೆ ಎಂದು ರೈತ ರವಿ ರಾವಳ ಕಣ್ಣೀರಿಟ್ಟರು.

    ಬೆಳೆ ಹಾನಿಯಾದ ರೈತರು: ರವಿ ರಾವಳ ಎಂಬುವರ 3 ಎಕರೆ ಬಾಳೆ, 3 ಎಕರೆ ಮೆಕ್ಕೆಜೋಳ; ಅಕ್ಬರಸಾಬ್ ಹುಲಗೂರ ಅವರ 3 ಎಕರೆ ಗೋವಿನಜೋಳ, 2 ಎಕರೆ ಬಾಳೆ, 1 ಎಕರೆ ಅಡಕೆ; ಪ್ರಭಾಕರ ಮೇಲಿಮನಮನಿ ಎಂಬುವರ 2 ಎಕರೆ ಬಾಳೆ, 1 ಎಕರೆ ಅಡಕೆ, 50 ತೆಂಗಿನ ಮರ; ಪ್ರಭು ಪಾಟೀಲ ಎಂಬುವರ ತಲಾ ಒಂದು ಎಕರೆ ಬಾಳೆ, ಅಡಕೆ ಬೆಳೆ; ಪರಸಪ್ಪ ಮುದ್ದಕ್ಕನವರ ಎಂಬ ರೈತನ 3 ಎಕರೆ ಗೋವಿನಜೋಳ; ಭೀಮಪ್ಪ ಆಡಿನವರ 2 ಎಕರೆ ಬಾಳೆ; ಮಹ್ಮದಹನೀಫ್ ಹುಲಗೂರ ಎಂಬುವರ 3 ಎಕರೆ ಗೋವಿನಜೋಳ; ಅಬ್ದುಲ್ ಖಾದರ ಹುಲಗೂರ ಅವರ 3 ಎಕರೆ ಗೋವಿನಜೋಳ; ಮುನಾಫ ಹುಲಗೂರ 3 ಎಕರೆ ಗೋವಿನಜೋಳ; ಪರುಶುರಾಮ ಆಲಳ್ಳಿ ಅವರ 8 ಎಕರೆ ಗೋವಿನಜೋಳ; ಗಜೇಂದ್ರ ಆಲಳ್ಳಿ ಅವರ ತಲಾ ಒಂದು ಎಕರೆ ಅಡಕೆ ಮತ್ತು ಬಾಳೆ; ಶಿವಣ್ಣ ವಡ್ಡರ ಎಂಬ ರೈತರ 2 ಎಕರೆ ಭತ್ತ ಹಾಗೂ 1 ಎಕರೆ ಗೋವಿನ ಜೋಳ ಬೆಳೆ ಹಾನಿಯಾಗಿದೆ.

    ಶಾಶ್ವತ ಪರಿಹಾರಕ್ಕೆ ಒತ್ತಾಯ: ಪ್ರತಿ ವರ್ಷ ಕಾಡಾನೆಗಳು ಬೆಳೆ ಹಾನಿ ಮಾಡುತ್ತಿವೆ. ರೂಪಾಯಿಯಲ್ಲಿ ನಾಲ್ಕಾಣೆಯೂ ಪರಿಹಾರ ಸಿಗುವುದಿಲ್ಲ. ವರ್ಷದಿಂದ ವರ್ಷಕ್ಕೆ ರೈತ ಸಾಲಗಾರನಾಗುತ್ತಿದ್ದಾನೆ. ಕಾಡಾನೆಗಳಿಂದ ಬೆಳೆ ರಕ್ಷಣೆ ಮಾಡಲು ಅರಣ್ಯ ಇಲಾಖೆ ಶಾಶ್ವತ ಯೋಜನೆ ರೂಪಿಸಬೇಕು. ಪ್ರತಿ ವರ್ಷ ಇಲಾಖೆಯಿಂದ ಭರವಸೆ ಸಿಗುತ್ತಿದೆಯೇ ಹೊರತು ಕಾರ್ಯರೂಪಕ್ಕೆ ಬರುತ್ತಿಲ್ಲ. ವರ್ಷವೂ ರೈತ ತಲೆ ಮೇಲೆ ಕೈ ಹೊತ್ತುಕೊಳ್ಳಬೇಕಾಗಿದೆ ಎಂದು ರೈತ ಅಕ್ಬರಸಾಬ್ ಹುಲಗೂರು ಅಸಹಾಯಕತೆ ವ್ಯಕ್ತಪಡಿಸಿದರು.

    ಆನೆ ಹಾವಳಿಯಿಂದ ಬೇಸತ್ತ ರೈತರು ಕೃಷಿ ಮಾಡುವುದೇ ಬೇಡ ಎಂದು ನಿರ್ಧರಿಸಿ ಪಟ್ಟಣಕ್ಕೆ ಕೂಲಿ ಅರಸಿ ಗುಳೆ ಹೋಗುವ ಪರಿಸ್ಥಿತಿ ನಿರ್ವಣವಾಗಿದೆ. ರೈತರು ಪರಿಹಾರಕ್ಕೆ ಅಲೆದಾಡಿ ಅರ್ಧ ಜೀವನ ಕಳೆಯಬೇಕಾಗಿದೆ. ಇಂತಹ ಕಠಿಣ ಪರಿಸ್ಥಿತಿ ಎದುರಿಸುತ್ತಿರುವ ತಮಗೆ ಸರ್ಕಾರ ಶಾಶ್ವತ ಪರಿಹಾರ ಒದಗಿಸಬೇಕು ಎಂಬುದು ರೈತರ ಒತ್ತಾಯವಾಗಿದೆ.

    15 ವರ್ಷದಿಂದ ಕಾಡಾನೆ ಹಾವಳಿ ನಡೆಯುತ್ತದೆ. ಮೊದಲಿಗೆ ಇಷ್ಟು ಪ್ರಮಾಣದಲ್ಲಿ ಹಾನಿ ಆಗುತ್ತಿರಲಿಲ್ಲ. ಆನೆ ದಾಳಿಗೆ ಹೆದರಿ ಹಲವು ರೈತರು ಹಾರ್ವೆಸ್ಟಿಂಗ್ ಯಂತ್ರದ ಮೂಲಕ ಬೇಗ ರಾಶಿ ಮಾಡಿಸಿಕೊಂಡು ಬೆಳೆ ಒಯ್ಯುತ್ತಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ನೀರಾವರಿ ಬೆಳೆ ಬೆಳೆಯಲು ಆರಂಭಿಸಿದ್ದರಿಂದ ಆನೆಗಳು ಹಾನಿ ಮಾಡುವ ಪ್ರಮಾಣ ಹೆಚ್ಚಾಗುತ್ತ ಹೋಗಿದೆ. ಕೈಗೆ ಬೆಳೆ ಬಂತು ಎಂದು ಸಂತಸಪಡುವಾಗಲೇ ಒಂದೇ ರಾತ್ರಿಯಲ್ಲಿ ಕಾಡಾನೆಗಳು ಬೆಳೆ ತಿಂದು ಹಾಳು ಮಾಡುತ್ತಿವೆ.
    | ರಮೇಶ ಜಿಗಳೇರ ಪ್ರಗತಿಪರ ರೈತ

    ನೀರು ಮತ್ತು ಆಹಾರಕ್ಕಾಗಿ ಅರಸಿ ಕಾಡಾನೆಗಳು ಬರುತ್ತವೆ. ಕಾಡಾನೆಗಳು ರೈತರ ಜಮೀನಿಗೆ ಬರದ ಹಾಗೆ ಆನೆ ನಿರೋಧ ಕಂದಕ ತೋಡುವ ಯೋಜನೆಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳಿಸಲಾಗಿದೆ. ಅದು ಅನುಮೋದನೆಯಾದರೆ ಕಾರ್ಯರೂಪಕ್ಕೆ ತರಲಾಗುವುದು. ಸದ್ಯ ಹಾನಿಯಾದ ರೈತರ ಖಾತೆಗೆ ನೇರವಾಗಿ ಪರಿಹಾರ ಧನ ಜಮಾ ಮಾಡಲಾಗುವುದು.
    | ಗೋಪಾಲಕೃಷ್ಣ ಹೆಗಡೆ ಡಿಎಫ್​ಒ ಯಲ್ಲಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts