More

    ತೈಲಬೆಲೆ ಏರಿಕೆಗೆ ವಿರೋಧ ; ಕಾಂಗ್ರೆಸ್ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಸೈಕಲ್ ಜಾಥಾ

    ತುಮಕೂರು : ತೈಲಬೆಲೆ ಏರಿಕೆ ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರು ಹಾಗೂ ಮಹಿಳಾ ಘಟಕದ ನೇತೃತ್ವದಲ್ಲಿ ಬಿ.ಎಚ್.ರಸ್ತೆಯ ಕಾಂಗ್ರೆಸ್ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಗುರುವಾರ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿತ್ತು.

    ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ, ಮಹಿಳಾ ಘಟಕ, ಕಾರ್ಮಿಕ ಘಟಕ, ಎಸ್ಸಿ ಘಟಕ, ಕಿಸಾನ್ ಘಟಕ ಸೇರಿ ವಿವಿಧ ಮಂಚೂಣಿ ಘಟಕಗಳೊಂದಿಗೆ ಕೆಲಹೊತ್ತು ಪ್ರತಿಭಟನೆ ನಡೆಸಿ ತೈಲಬೆಲೆ ಏರಿಕೆಯಿಂದ ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾನಿರತರು ಆಕ್ರೋಶ ಹೊರಹಾಕಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯದರ್ಶಿ ಶಫೀವುಲ್ಲಾ, 70 ವರ್ಷಗಳಿಂದ ಕಾಂಗ್ರೆಸ್ ಕಟ್ಟಿದ ಭಾರತವನ್ನು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಏಳೇ ವರ್ಷಗಳಲ್ಲಿ ಮಾರಾಟ ಮಾಡಿದೆ. ಸಾರ್ವಜನಿಕ ಸ್ವಾಮ್ಯದ ಕೈಗಾರಿಕೆಗಳ ಖಾಸಗೀಕರಣ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರು ಹೈರಾಣಾಗಿದ್ದಾರೆ ಎಂದು ಹರಿಹಾಯ್ದರು.

    ಅಗತ್ಯವಸ್ತುಗಳ ನಿರಂತರ ಬೆಲೆ ಏರಿಕೆಯಿಂದ ಜನಸಾಮಾನ್ಯರ ಕೊಳ್ಳುವ ಶಕ್ತಿಯನ್ನು ಕಿತ್ತುಕೊಂಡಂತಾಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿದ್ದ ತೆರಿಗೆಯನ್ನು ದುಪ್ಪಟ್ಟು ಮಾಡುವ ಮೂಲಕ ಜನರ ಜೇಬಿಗೆ ಕತ್ತರಿ ಹಾಕಲಾಗಿದೆ. ಜನವಿರೋಧಿ ಧೋರಣೆ ಹೊಂದಿರುವ ಕೇಂದ್ರ ಸರ್ಕಾರ ಬೆಲೆ ಏರಿಕೆಗೆ ನಿಯಂತ್ರಣ ಹಾಕದೇ ಇದ್ದರೆ ಜನರ ಆಕ್ರೋಶಕ್ಕೆ ತುತ್ತಾಗಲಿದೆ ಎಂದು ಎಚ್ಚರಿಸಿದರು.

    ಬ್ಯಾಂಕ್‌ಗಳ ವಿಲೀನ, ವಿಮಾನ ನಿಲ್ದಾಣಗಳ ಮಾರಾಟ, ಕೈಗಾರಿಗಳ ಖಾಸಗೀಕರಣ ಒಟ್ಟಿನಲ್ಲಿ ದೇಶವನ್ನು ಮಾರಾಟಕ್ಕೆ ಮಾಡಲಿಕ್ಕೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಂತಿದೆ ಎಂದು ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್ ಲೇವಡಿ ಮಾಡಿದರು.

    ಯುಪಿಎ ಸರ್ಕಾರದ ಅವಧಿಯಲ್ಲಿ ತೊಗರಿ ಬೇಳೆ ಬೆಲೆ 70ರೂ., ಆಗಿದ್ದಕ್ಕೆ ಬೀದಿಗೆ ಇಳಿದಿದ್ದ ಬಿಜೆಪಿ ಮುಖಂಡರು, ಈಗ ಕೆಜಿಗೆ 170 ರೂ. ಆದರೂ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ. ಕರೊನಾ ಸಂದರ್ಭದಲ್ಲಿ ಜನ ಸಾಮಾನ್ಯರು ಜೀವನ ನಡೆಸುವುದಕ್ಕೆ ಕಷ್ಟಪಡುತ್ತಿದ್ದರೂ, ಅಗತ್ಯ ವಸ್ತುಗಳ ಬೆಲೆಯನ್ನು ಏರಿಕೆ ಮಾಡುವ ಮೂಲಕ ಲೂಟಿ ಮಾಡಲಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.
    ಪ್ರತಿಭಟನೆಯಲ್ಲಿ ಗುಬ್ಬಿ ಶ್ರೀನಿವಾಸ್, ವೀರಣ್ಣಗೌಡ, ಶಬ್ಬು, ಭರತ್, ದಾದಾಪೀರ್, ಥಾಮ್ಸನ್, ಸಂಜೀವ್‌ಕುಮಾರ್, ಗುರುಪ್ರಸಾದ್, ಶಿವಾಜಿ, ಸಿದ್ಧಲಿಂಗೇಗೌಡ, ಪ್ರಕಾಶ್, ನಿಂಗರಾಜು, ಷಾಬಾಬು, ಅನಿಲ್, ಜಿ.ಎನ್.ಗೌಡ, ಹರೀಶ್, ಶಿವಪ್ರಸಾದ್, ಕೃಷ್ಣ, ಡಾ.ಅರುಂಧತಿ, ಡಾ.ಲಕ್ಷ್ಮೀದೇವಿ, ಗೀತಾ ನಾಗೇಶ್, ನಾಗಮಣಿ, ಯಶೋದಾ, ಮುಬೀನಾ, ಲಕ್ಷ್ಮೀ ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts