More

    ತನಿಖೆಗೆ ಒಪ್ಪದಿದ್ದರೆ ಭ್ರಷ್ಟಾಚಾರ ಮಾಡಿದಂತೆ

    ಹುಬ್ಬಳ್ಳಿ: ಕರೊನಾ ಚಿಕಿತ್ಸೆಗೆ ಸಂಬಂಧಿಸಿದಂತೆ ಉಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿರುವ ಕುರಿತು ರಾಜ್ಯ ಸರ್ಕಾರ ನ್ಯಾಯಾಂಗ ತನಿಖೆಗೆ ಒಪ್ಪದಿದ್ದರೆ ಭ್ರಷ್ಟಾಚಾರ ಮಾಡಿರುವುದು ಒಪ್ಪಿಕೊಂಡಂತೆ ಆಗುತ್ತದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಆರೋಪಿಸಿದರು.

    ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ನಡೆದಿರುವ ಕುರಿತು ಆರೋಪ ಮಾಡಿದ ವಿರೋಧ ಪಕ್ಷದ ನಾಯಕರಿಗೆ ಲೀಗಲ್ ನೋಟಿಸ್ ನೀಡಿರುವುದು ದೇಶದ ಇತಿಹಾಸದಲ್ಲಿಯೇ ಮೊದಲು. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿರುವ ಅವಮಾನ ಎಂದು ಹೇಳಿದರು.

    ಉಚ್ಚ ನ್ಯಾಯಾಲಯದ ನ್ಯಾಯಾಧೀಶರಿಂದ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ. ಪಕ್ಷದ ನಾಯಕರು ತನಿಖೆಗೆ ಆಗ್ರಹಿಸಿರುವುದರಲ್ಲಿ ತಪ್ಪೇನಿದೆ? ಆರೋಪದಿಂದ ಮುಕ್ತರಾದರೆ ನಿಮಗೆ (ರಾಜ್ಯ ಸರ್ಕಾರ) ಒಳ್ಳೆಯದಲ್ಲವೇ? ತನಿಖೆಗೆ ಆಗ್ರಹಿಸಿದ್ದಕ್ಕೆ ನೋಟಿಸ್ ನೀಡುವುದೆಂದರೆ ನಿಜ ಸಂಗತಿಯನ್ನು ಹತ್ತಿಕ್ಕುವ ಪ್ರಯತ್ನವೆಂದೇ ಭಾವಿಸಬೇಕಾಗುತ್ತದೆ ಎಂದರು.

    ಸಂಪೂರ್ಣ ವಿಫಲ: ರಾಜ್ಯದಲ್ಲಿ ಕರೊನಾ ಸೋಂಕು ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ದಿನೇ ದಿನೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದರೂ ಸರ್ಕಾರ ಇನ್ನೂ ಗಂಭೀರವಾಗಿಲ್ಲ. ತೀವ್ರ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿದರು.

    3 ತಿಂಗಳು ಲಾಕ್​ಡೌನ್ ಇದ್ದರೂ ಆರೋಗ್ಯ ಮೂಲಸೌಕರ್ಯ ಹೆಚ್ಚಿಸಲು ರಾಜ್ಯ ಸರ್ಕಾರ ಕ್ರಮ ಜರುಗಿಸಿಲ್ಲ. ಕಳಪೆ ಪಿಪಿಇ ಕಿಟ್ ಬಳಕೆಯಿಂದ ಕರೊನಾ ಸೇನಾನಿ ಸೋಂಕಿಗೆ ಒಳಗಾದರೂ ರಾಜ್ಯ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ಆರೋಪಿಸಿದರು.

    ಕಾಂಗ್ರೆಸ್ ಶಾಸಕರು ಬಿಜೆಪಿ ಸರ್ಕಾರಕ್ಕೆ ಬೆಂಬಲವಾಗಿದ್ದಾರೆ ಎಂಬುದು ಸುಳ್ಳು. ಯಾರೂ ಆ ಕೆಲಸ ಮಾಡುತ್ತಿಲ್ಲ. ಈಗಾಗಲೇ ಬಹುಮತ ಇರುವುದರಿಂದ ಸರ್ಕಾರಕ್ಕೆ ಅದರ ಅವಶ್ಯಕತೆ ಇಲ್ಲ. ರಾಜ್ಯ ಸರ್ಕಾರ ಜಾರಿಗೆ ತಂದ ಹೊಸ ಕೈಗಾರಿಕಾ ನೀತಿಯಲ್ಲಿ ಕೆಲವು ಒಳ್ಳೆಯ ಅಂಶಗಳಿವೆ. ವಿವರವಾಗಿ ನೋಡಿಲ್ಲ. ಕೈಗಾರಿಕೆಗಳ ಬೇಡಿಕೆಗೆ ಅನುಗುಣವಾಗಿ ಭೂಸ್ವಾಧೀನ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.

    ಸುದ್ದಿಗೋಷ್ಠಿಯಲ್ಲಿ ಎಂಎಲ್​ಸಿ ಶ್ರೀನಿವಾಸ ಮಾನೆ, ಶಾಸಕಿ ಕುಸುಮಾವತಿ ಶಿವಳ್ಳಿ, ಮಾಜಿ ಎಂಎಲ್​ಸಿ ನಾಗರಾಜ ಛಬ್ಬಿ, ವೀರಕುಮಾರ ಪಾಟೀಲ, ಅಲ್ತಾಫ್ ಹಳ್ಳೂರು, ಅನಿಲಕುಮಾರ ಪಾಟೀಲ, ನಾಗರಾಜ ಗೌರಿ, ರವಿಕುಮಾರ ಬಡ್ನಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts