More

    ಡಬಲ್‌ ಎಂಜಿನ್‌ ಸರ್ಕಾರದ ಭರವಸೆ ಹುಸಿ

    ಬಾಗಲಕೋಟೆ: ಬಿಜೆಪಿ ಡಬಲ್‌ ಎಂಜಿನ್‌ ಸರ್ಕಾರದ ಭರವಸೆಗಳು ಹುಸಿಯಾಗಿವೆ. ಕೇಂದ್ರ ಮತ್ತು ರಾಜ್ಯ ಎರಡೂ ಕಡೆ ಬಿಜೆಪಿ ಸರ್ಕಾರ ಇದ್ದರೆ ರಾಜ್ಯಕ್ಕೆ ಹೆಚ್ಚು ಅನುದಾನ ತರಲು ಸಾಧ್ಯ ಎಂದು ಬಿಜೆಪಿ ಮುಖಂಡರು ಭರವಸೆ ನೀಡಿದ್ದರು. ಆದರೆ ಎರಡೂ ಕಡೆ ಅಧಿಕಾರ ಹಿಡಿದರೂ ಯುಕೆಪಿ ಸಂತ್ರಸ್ತರ ಸಮಸ್ಯೆ ಪರಿಹರಿಸಲು ಸಾಧ್ಯವಾಗಲಿಲ್ಲ ಎಂದು ಕಾಂಗ್ರೆಸ್‌ ಅಭ್ಯರ್ಥಿ ಸಂಯುಕ್ತ ಪಾಟೀಲ ಟೀಕಿಸಿದರು.

    ಮುಚಖಂಡಿ ತಾಂಡಾದಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು,ತಾವು ಆಶೀರ್ವಾದ ಮಾಡಿದರೆ ಯುಕೆಪಿ ಸಂತ್ರಸ್ತರ ಸಮಸ್ಯೆ ಪರಿಹಾರಕ್ಕೆ ಮೊದಲ ಆದ್ಯತೆ ನೀಡುತ್ತೇನೆ ಎಂದು ಭರವಸೆ ನೀಡಿದರು.

    ಬಾಗಲಕೋಟೆ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಕನಸನ್ನು ಹೊಂದಿದ್ದೇನೆ. ಉದ್ಯೋಗ ಸೃಷ್ಟಿಗೆ ಹೊಸ ಹೊಸ ಕೈಗಾರಿಕೆಗಳ ಸ್ಥಾಪನೆ, ಜವಳಿ ಪಾರ್ಕ್‌ ನಿರ್ಮಾಣ,  ನೇಕಾರರ ಸಮಸ್ಯೆ ಪರಿಹಾರ ಸೇರಿದಂತೆ ಹಲವಾರು ಕನಸುಗಳನ್ನು ಹೊಂದಿದ್ದೇನೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ವಿಶೇಷ ಅನುದಾನ ತಂದು ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಹೇಳಿದರು.

    ಕೇಂದ್ರ ಸರ್ಕಾರ ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿಗಳಿಗೆ ಬಜೆಟ್‌ನಲ್ಲಿ 5,400 ಕೋಟಿ ರೂ.ಗಳನ್ನು ಘೋಷಣೆ ಮಾಡಿತ್ತು. ಆದರೆ ಈ ಅನುದಾನವನ್ನು ಬಿಡುಗಡೆ ಮಾಡಲೇ ಇಲ್ಲ. ಕೇಂದ್ರ ಸರ್ಕಾರ ಕೊಟ್ಟಿದ್ದ ಭರವಸೆಗಳೆಲ್ಲವೂ ಹುಸಿಯಾಗಿವೆ ಎಂದರು.

    ವಾಸಿಸುವವರಿಗೆ ಮನೆಯ ಹಕ್ಕು ಪತ್ರವನ್ನು ನೀಡಿದ ಹೆಗ್ಗಳಿಕೆಯ ಮೊದಲ ಪ್ರಕರಣ ಜಾಲಿಹಾಳ ತಾಂಡದ್ದು. ಇದು ಕರ್ನಾಟಕದಲ್ಲೇ ಮೊದಲು. ಬಂಜಾರ ಸಮಾಜ ಬದುಕು ಕಟ್ಟಿಕೊಳ್ಳಲು ಗುಳೇ ಹೋಗುವುದು ಸಾಮಾನ್ಯವಾಗಿದೆ. ಅವರಿಗೆ ಜಿಲ್ಲೆಯಲ್ಲೇ ಉದ್ಯೋಗ ಒದಗಿಸಿದರೆ ಗುಳೆ ಹೋಗುವ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಹೇಳಿದರು.

    ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಲಂಬಾಣಿ ಸಮಾಜಕ್ಕೆ‌ ನೀಡಿರುವ ಕೊಡುಗೆಗಳ ಬಗ್ಗೆ ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ವಿವರಿಸಿದರು.

    ಜಿಪಂ ಉಪಾಧ್ಯಕ್ಷೆ ಬಾಯಕ್ಕ ಮೇಟಿ ಮಾತನಾಡಿ, ಲೋಕಸಭೆಯಲ್ಲಿ ಜಿಲ್ಲೆಯ ಪರವಾಗಿ ‍ಧ್ವನಿ ಎತ್ತಲು ಸಂಯುಕ್ತ ಪಾಟೀಲ ಅವರನ್ನು ಬಹುಮತದಿಂದ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

    ಲಂಬಾಣಿ ಸಮಾಜ ಕಾಂಗ್ರೆಸ್‌ ಪಕ್ಷಕ್ಕೆ ನಿಷ್ಠೆ ಹೊಂದಿದ್ದು, ನಿಮ್ಮನ್ನು ಅತ್ಯಧಿಕ ಮತಗಳ ಅಂತರದಿಂದ ಆಯ್ಕೆ ಮಾಡುತ್ತೇವೆ. ಸಂಸದರಾಗಿ ಆಯ್ಕೆಯಾದ ನಂತರ ತಾಂಡಾಗಳ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಬೇಕು ಎಂದು ಸಮಾಜದ ಮುಖಂಡರು ಮನವಿ ಮಾಡಿದರು.

    ಮುಚಕಿಂಡಿ ತಾಂಡಾ ಪ್ರಚಾರ ಸಭೆಗೂ ಮುನ್ನ ಬಾಗಲಕೋಟೆಯ ವಿದ್ಯಾಗಿರಿಯಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು. ಕೆಪಿಸಿಸಿ ಉಪಾಧ್ಯಕ್ಷ ಅಜಯಕುಮಾರ ಸರನಾಯಕ, ಕೌಶಲಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯ್ಕ್‌, ಮುತ್ತು ಜೋಳದ, ಶ್ರೀಶೈಲ ಕರಿಶಂಕರ, ಮಲ್ಲಿಕಾರ್ಜುನ ಚರಂತಿಮಠ, ಶಂಕರ ತಪಶೆಟ್ಟಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts