More

    ಜೀವಜಲಕ್ಕೆ ಹಾಹಾಕಾರ

    ಶಿವಮೊಗ್ಗ: ಶಿವಮೊಗ್ಗದ ಸರ್ಕಾರಿ ಆಯುರ್ವೆದ ಮಹಾವಿದ್ಯಾಲಯ ಮತ್ತು ಬೋಧನಾ ಆಸ್ಪತ್ರೆ, ಖಾಸಗಿ ಮತ್ತು ಕೆಎಸ್​ಆರ್​ಟಿಸಿ ಬಸ್ ನಿಲ್ದಾಣ ಹಾಗೂ ಗೋಪಾಳದ ಕೆಲವೆಡೆ ಕಳೆದ ಕೆಲ ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.

    ಸರ್ಕಾರಿ ಆಯುರ್ವೆದ ಕಾಲೇಜು ಎದುರು 24*7 ಕಾಮಗಾರಿ ಪೈಪ್​ಲೈನ್ ಒಡೆದಿರುವ ನೆಪದಲ್ಲಿ ಮೂರ್ನಾಲ್ಕು ದಿನಗಳಿಂದ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ. ಪರಿಣಾಮ ಕುಡಿಯಲು ಹಾಗೂ ಶೌಚಗೃಹದಲ್ಲಿ ನೀರಿಲ್ಲದೆ ಒಳರೋಗಿಗಳು ಅಕ್ಷರಶಃ ಪರದಾಡುವಂತಾಗಿದೆ.

    ಆಯುರ್ವೆದ ಕಾಲೇಜಿನಲ್ಲಿ ಗುಣಮಟ್ಟದ ಚಿಕಿತ್ಸೆ ಕೂಡ ಲಭ್ಯವಿದ್ದು ಪ್ರತಿನಿತ್ಯ ನೂರಾರು ರೋಗಿಗಳು ಮತ್ತು ಅವರ ಸಂಬಂಧಿಕರು ವಿವಿಧ ಭಾಗಗಳಿಂದ ಬಂದು ಹೋಗುತ್ತಾರೆ. ಅದರಲ್ಲಿ ಕನಿಷ್ಠ ಒಂದಿಬ್ಬರು ಒಳರೋಗಿಗಳಾಗಿ ದಾಖಲಾಗುತ್ತಿದ್ದಾರೆ. ಆದರೆ ಮೂರ್ನಾಲ್ಕು ದಿನಗಳಿಂದ ನೀರಿನ ಸಮಸ್ಯೆ ಉದ್ಭವಿಸಿದ್ದು ರೋಗಿಗಳ ಚಿಂತೆಗೆ ಕಾರಣವಾಗಿದೆ.

    ಚಿಕಿತ್ಸಾ ವಿಧಾನ, ವೈದ್ಯರು ಸೇರಿ ಸೌಕರ್ಯ ಕೂಡ ಉತ್ತಮವಾಗಿದೆ. ಆದರೆ 4 ದಿನಗಳಿಂದ ನೀರು ಸ್ಥಗಿತಗೊಂಡಿರುವುದರಿಂದ ಒಳರೋಗಿಗಳು ಪರದಾಡುತ್ತಿದ್ದಾರೆ. ಶೌಚಗೃಹದಲ್ಲೂ ನೀರಿಲ್ಲದಂತಾಗಿದೆ. ಆಸ್ಪತ್ರೆಯವರು ಟ್ಯಾಂಕರ್​ನಲ್ಲಿ ನೀರು ತರಿಸುತ್ತಿದ್ದಾರೆ. ಆದರೆ ಅದು ಕುಡಿಯಲೂ ಸಾಕಾಗುತ್ತಿಲ್ಲ ಕೇಳಿದರೆ ಕಾಮಗಾರಿ ವೇಳೆ ಪೈಪ್​ಲೈನ್ ಒಡೆದಿದೆ ಎಂಬ ಸಬೂಬು ನೀಡುತ್ತಾರೆ ಎಂಬುದು ಒಳರೋಗಿ ಗಂಗಾಧರಪ್ಪ ಅವರ ಅಳಲು.

    ಅವರು ಕೇಳಿಲ್ಲ, ಇವರು ಕೊಟ್ಟಿಲ್ಲ: ಕೆಎಸ್​ಆರ್​ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣಕ್ಕೆ ಕಳೆದ 7 ತಿಂಗಳಿಂದ ನೀರಿನ ಸಂಪರ್ಕ ಕಡಿತಗೊಂಡಿದ್ದು ಬೋರ್​ವೆಲ್ ಮತ್ತು ಟ್ಯಾಂಕರ್ ನೀರೇ ಗತಿಯಾಗಿದೆ. ನಿತ್ಯ ಸಾವಿರಾರು ಜನ ಭೇಟಿ ನೀಡುವ ಬಸ್ ನಿಲ್ದಾಣಕ್ಕೆ ಸಮರ್ಪಕ ನೀರು ಪೂರೈಕೆ ಆಗದ ಕಾರಣದಿಂದ ಗುತ್ತಿಗೆದಾರರು ನಿತ್ಯ ಮೂರು ಟ್ಯಾಂಕರ್ ನೀರು ತರಿಸಿಕೊಳ್ಳುತ್ತಿದ್ದಾರೆ. ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿ ಹೋಟೆಲ್, ಟಾಯ್ಲೆಟ್, ಸ್ವಚ್ಛತೆ ಸೇರಿ ನಿತ್ಯ ಸಾವಿರಾರು ಲೀಟರ್ ನೀರಿನ ಅಗತ್ಯವಿದೆ. ಆದರೆ ರಸ್ತೆ ಕಾಮಗಾರಿ ವೇಳೆ ಸಂಪರ್ಕ ಪೈಪ್ ಕಡಿತಗೊಳಿಸಲಾಗಿದೆ. ಮರು ಸಂಪರ್ಕಕ್ಕೆ ಕೆಎಸ್​ಆರ್​ಟಿಸಿ ಕೇಳಿಲ್ಲ, ಇತ್ತ ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯವರು ನೀಡಿಲ್ಲ. ಇವೆರಡರ ನಡುವೆ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ. ಇತ್ತ ಖಾಸಗಿ ಬಸ್ ನಿಲ್ದಾಣದಲ್ಲೂ ಇದೇ ಪರಿಸ್ಥಿತಿ ಮುಂದುವರಿದಿದ್ದು ಬಸ್ ನಿಲ್ದಾಣಕ್ಕೆ ಕಾಪೋರೇಷನ್ ನೀರಿನ ಸಂಪರ್ಕ ಇಲ್ಲದ್ದಕ್ಕೆ ಸಾಕಷ್ಟು ಕುಡಿಯುವ ನೀರಿನ ಸಂಕಷ್ಟ ಎದುರಾಗಿದೆ.

    ಗೋಪಾಳ ಭಾಗದಲ್ಲಿ ಯುಜಿಡಿ ನೀರು: ಗೋಪಾಳ ಭಾಗದ 1 ಮತ್ತು 2ನೇ ಕ್ರಾಸ್​ನಲ್ಲಿ ಕಳೆದ ನಾಲ್ಕು ದಿನಗಳಿಂದ ನೀರು ಕಲುಷಿತ ಆಗುತ್ತಿದ್ದ ಪರಿಣಾಮ ಪೂರೈಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ನೀರಿನ ಪೈಪ್​ಲೈನ್​ಗೆ ಎಲ್ಲೋ ಒಂದು ಕಡೆ ಯುಜಿಡಿ ನೀರು ಸೇರ್ಪಡೆಗೊಳ್ಳುತ್ತಿದೆ. ಆದರೆ ಯುಜಿಡಿ ನೀರು ಸೇರುತ್ತಿರುವ ಜಾಗ ಹುಡುಕುವುದು ಇಂಜಿನಿಯರ್​ಗಳಿಗೆ ಸವಾಲಾಗಿದೆ. ಹಾಗಾಗಿ ಎರಡು ಕ್ರಾಸ್​ಗಳಿಗೆ ದಿನಕ್ಕೊಮ್ಮೆ ತಲಾ ಒಂದೊಂದು ಟ್ಯಾಂಕರ್ ನೀರು ಪೂರೈಸಲಾಗುತ್ತಿದೆ. ಇದರಿಂದ ದಿನನಿತ್ಯದ ಬಳಕೆ ಹಾಗೂ ಕುಡಿಯುವುದಕ್ಕೂ ಸ್ಥಳೀಯರಿಗೆ ಸಾಲುತ್ತಿಲ್ಲ. ಇದರಿಂದ ಕೆಲವರು 700 ರೂ. ಖರ್ಚು ಮಾಡಿ ತಮ್ಮ ಮನೆಗಳಿಗೆ ಟ್ಯಾಂಕರ್ ನೀರು ಹಾಕಿಸಿಕೊಳ್ಳುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts