More

    ಜಿಲ್ಲೆಯಲ್ಲಿ ರಂಗೇರಿದ ಅಪ್ಪು ಜಾತ್ರೆ, ಎಲ್ಲೆಲ್ಲೂ ಪುನೀತ್‌ರಾಜ್‌ಕುಮಾರ್ ಗುಣಗಾನ, ಸಾಮಾಜಿಕ ಕಾರ್ಯಗಳ ಮೂಲಕ ನಮನ

    ಬೆಂಗಳೂರು ಗ್ರಾಮಾಂತರ: ಇಡೀ ಜಿಲ್ಲೆ ಗುರುವಾರ ಅಪ್ಪುಮಯವಾಗಿತ್ತು, ಪ್ರತಿ ಗಲ್ಲಿಗಳಲ್ಲೂ ಪುನೀತ್‌ರಾಜ್‌ಕುಮಾರ್ ಕಟೌಟ್‌ಗಳೇ ರಾರಾಜಿಸುತ್ತಿದ್ದವು, ಎಲ್ಲರ ಬಾಯಲ್ಲೂ ಅಪ್ಪುವಿನದ್ದೆ ಸುದ್ದಿ, ಅಪ್ಪು ಅಜರಾಮರ ಎಂಬ ಕಿವಿಗಡಕಿಚ್ಚುವ ೋಷಣೆಗಳು, ಅಪ್ಪು ಹೆಸರಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ, ತಂಗುದಾಣ ಲೋಕಾರ್ಪಣೆ, ರಕ್ತದಾನ, ನೇತ್ರದಾನ, ಅನ್ನದಾಸೋಹ, ಕಂಚಿನ ಪ್ರತಿಮೆಗಳ ಅನಾವರಣ, ಸಿಹಿ ಹಂಚಿಕೆ, ಪಟಾಕಿಗಳ ಅಬ್ಬರ, ಬಿರಿಯಾನಿ ವಿತರಣೆ, ಕ್ಷೀರಾಭೀಷೇಕ, ಲೆಕ್ಕವಿಲ್ಲದಷ್ಟು ಈಡುಗಾಯಿ… ಹೀಗೆ ತರಹೇವಾರಿಯಾಗಿ ನಟನ ಹುಟ್ಟುಹಬ್ಬ ಆಚರಿಸಲಾಯಿತು. ಚಿತ್ರಮಂದಿರಗಳಲ್ಲಿ ಜೇಮ್ಸ್ ಚಿತ್ರವನ್ನು ಕಣ್ತುಂಬಿಕೊಂಡ ಅಪ್ಪು ಅಭಿಮಾನಿಗಳು ಕಣ್ಣಂಚಿನಲ್ಲೇ ನೀರು ತುಂಬಿಕೊಂಡು ಹೊರಬರುತ್ತಿದ್ದ ದೃಶ್ಯ ಕಂಡುಬಂತು. ಅಭಿಮಾನಿಗಳನ್ನು ನಿಯಂತ್ರಿಸಲು ಕೆಲವು ಕಡೆಗಳಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಪ್ರಕರಣಗಳೂ ನಡೆದವು. ಒಟ್ಟಾರೆ ಜಿಲ್ಲೆಯಲ್ಲಿ ಅಪ್ಪು ಜಾತ್ರೆ ದೊಡ್ಡಮಟ್ಟದಲ್ಲೇ ಸದ್ದು ಮಾಡುವ ಮೂಲಕ ನಟ ಡಾ.ಪುನೀತ್‌ರಾಜ್‌ಕುಮಾರ್ ಹುಟ್ಟುಹಬ್ಬ ಆಚರಣೆ ಜತೆಗೆ ನಟನೆಯ ಕಡೇಯ ಜೇಮ್ಸ್ ಚಿತ್ರಕ್ಕೆ ಶುಭಾರಂಭ ಕೋರಲಾಯಿತು.

    ಅಭಿಮಾನಿಯಿಂದ ಸಿನಿಮಾಹಾಲ್ ಬುಕ್: ನೆಲಮಂಗಲ ನಗರದ ರೂಪಾ ಚಿತ್ರಮಂದಿರದಲ್ಲಿ ಜೇಮ್ಸ್ ಬಿಡುಗಡೆಯಾಗಿದ್ದು, ಗುರುವಾರ ಬೆಳಗ್ಗೆ 4 ಗಂಟೆಯಿಂದಲೇ ಸಿನಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಆಗಮಿಸಿದ್ದರು. ನಗರದ ರಾಯನಗರ ನಿವಾಸಿ ಗೋವಿಂದಸ್ವಾಮಿ ಎಂಬ ಅಭಿಮಾನಿ 1003 ಆಸನಗಳ ವ್ಯವಸ್ಥೆಯುಳ್ಳ ರೂಪಾಚಿತ್ರಮಂದಿರವನ್ನು ಮೊದಲೇ ಪ್ರೀಮಿಯರ್ ಶೋಗಾಗಿ 1.9 ಲಕ್ಷ ಹಣ ನೀಡಿ ಬುಕ್ ಮಾಡಿದ್ದರು. ವೀಕ್ಷಕರಿಗೆ ಲಾಡುಹಂಚಿ ಮಟನ್‌ಬಿರಿಯಾನಿ ಭೋಜನ ವಿತರಿಸಿ ಅಪ್ಪು ಅಭಿಮಾನ ಪ್ರದರ್ಶಿಸಿದರು. ಚಿತ್ರಮಂದಿರದ ಬಳಿ ಅಭಿಮಾನಿಗಳು ಪುನೀತ್ ಭಾವಚಿತ್ರ ವಿರುವ ಬೃಹತ್ ಕಟೌಟ್‌ಗೆ ಹೂವಿನ ಹಾರ ಹಾಕಿ ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸಿದರು. ಎಲ್ಲ ಪ್ರದರ್ಶನಗಳು ಹೌಸ್‌ಪುಲ್ ಆಗಿದ್ದು, ಚಿತ್ರ ಪ್ರದರ್ಶನ ಹಾಗೂ ಟಿಕೆಟ್ ತಗೆದುಕೊಳ್ಳುವ ವೇಳೆ ಅಹಿತಕರ ಘಟನೆ ನಡೆಯದಂತೆ ಚಿತ್ರಮಂದಿರ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಚಿತ್ರ ಮಂದಿರ ವ್ಯವಸ್ಥಾಪಕ ನಾರಾಯಣ್ ತಿಳಿಸಿದರು.

    ಭಾವುಕರಾದ ವಿನೋದ್‌ರಾಜ್‌ಕುಮಾರ್: ಪುನೀತ್ ಸದಾ ನಮ್ಮೆಲ್ಲರ ಮನಸ್ಸಿನಲ್ಲಿ ಅಜರಾಮನನಾಗಿದ್ದಾರೆ ಎಂದು ನಟ ವಿನೋದ್‌ರಾಜ್‌ಕುಮಾರ್ ಭಾವುಕರಾದರು. ಯಂಟಗಾನಹಳ್ಳಿ ಗಾಪಂನ ಚಿಕ್ಕಮಾರನಹಳ್ಳಿಯಲ್ಲಿ ಪುನೀತ್ ಹುಟ್ಟುಹಬ್ಬದ ಪ್ರಯುಕ್ತ ಶುದ್ಧ ಕುಡಿವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದರು.

    ಹುಟ್ಟು ಹಬ್ಬದ ಪ್ರಯುಕ್ತ ಗ್ರಾಮೀಣ ಭಾಗದ ಜನರ ಅನುಕೂಲಕ್ಕಾಗಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ಮಾಡುತ್ತಿರುವುದು ಉತ್ತಮ ಸಂದೇಶ ಸಾರಿದಂತಾಗಿದೆ ಎಂದರು. ಪುನೀತ್ ಅದರ್ಶದಂತೆ ಲಕ್ಷಾಂತರ ಮಂದಿ ಅವರು ಮೃತ ಪಟ್ಟ ನಂತರ ಕಣ್ಣು ಮತ್ತು ಅಂಗಾಂಗಗಳನ್ನು ದಾನ ಮಾಡಲು ನಿಂತಿದ್ದಾರೆ. ಪ್ರತಿ ಯುವಕರು ಅಪ್ಪು ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದರು. ಗಾಯಕ ಸಿ.ಎಚ್.ಸಿದ್ಧಯ್ಯ ನೇತೃತ್ವದ ತಂಡ ಗೀತಗಾಯನ ನಡೆಸಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts