More

    ಜಿಲ್ಲಾಸ್ಪತ್ರೆಗೆ ಕೇಂದ್ರ ತಂಡ ಭೇಟಿ ; ಲಸಿಕೆ ಪಡೆದವರಿಂದ ಮಾಹಿತಿ ಸಂಗ್ರಹ ; ಕೋವಿಡ್ 19 ಮೇಲ್ವಿಚಾರಣಾ ಸಮಿತಿ ಪರಿಶೀಲನೆ

    ತುಮಕೂರು: ಜಿಲ್ಲಾಸ್ಪತ್ರೆಯ ಕೋವಿಡ್ ಲಸಿಕಾ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿದ ಕೇಂದ್ರ ಕೋವಿಡ್19 ಮೇಲ್ವಿಚಾರಣಾ ಸಮಿತಿ, ಲಸಿಕೆ ಪಡೆದ ಹಿರಿಯ ನಾಗರಿಕರಿಂದ ಅಭಿಪ್ರಾಯ ಪಡೆಯಿತು.

    ಕರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಕೈಗೊಂಡಿರುವ ಮುಂಜಾಗ್ರತಾ ಕ್ರಮ ಹಾಗೂ ಲಸಿಕೆ ನೀಡುವ ಕಾರ್ಯಕ್ರಮಗಳನ್ನು ಪರಿಶೀಲನೆಗಾಗಿ ಭೇಟಿ ನೀಡಿದ್ದ ತಂಡದಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವಾಲಯದ ಹಣಕಾಸು ಸಲಹೆಗಾರ ನೀಲಾಂಬುಜ್ ಶರಣ್, ಸಫ್ದರ್‌ಜಂಗ್ ಆಸ್ಪತ್ರೆ ಮೂತ್ರರೋಗ ತಜ್ಞ ಡಾ.ರೋಹಿತ್, ಬೆಂಗಳೂರು ನಿಮ್ಹಾನ್ಸ್ ಎಪಿಡೆಮಿಯಾಲಜಿ ವಿಭಾಗದ ಮುಖ್ಯಸ್ಥ ಡಾ.ಗಿರೀಶ್ ಇದ್ದರು.

    ಲಸಿಕೆ ಪಡೆದ ಮೇಲೆ ಆಗಬಹುದಾದ ಪರಿಣಾಮಗಳ ಬಗ್ಗೆ ಫಲಾನುಭವಿಗಳಿಂದಲೇ ಮಾಹಿತಿ ಪಡೆದ ತಂಡ, ಎರಡು ಹಂತದ ಲಸಿಕೆಯನ್ನು ತಪ್ಪದೇ ಪಡೆಯಬೇಕು. ಆರೋಗ್ಯದಲ್ಲಿ ಏರುಪೇರಾದಲ್ಲಿ ತಕ್ಷಣವೇ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಬೇಕೆಂದು ಮನವಿ ಮಾಡಿತು. ಕರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷದಿಂದ ಈವರೆಗೂ ಜಿಲ್ಲೆಯಲ್ಲಿ ಕೈಗೊಂಡ ಕ್ರಮಗಳ ಕುರಿತು ಡಿಎಚ್‌ಇ ಡಾ.ನಾಗೇಂದ್ರಪ್ಪ ಮಾಹಿತಿ ನೀಡಿದರು. ನಂತರ ನಗರದ ಸಿದ್ಧಾರ್ಥ ವೈದ್ಯಕೀಯ ಕಾಲೇಜು, ಕುರಿಪಾಳ್ಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ತಂಡ ಪರಿಶೀಲನೆ ನಡೆಸಿತು.

    ಕುರಿಪಾಳ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಗ್ರಾಮೀಣ ಕ್ರಿಯಾತ್ಮಕ ರಂಗತಂಡದ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಆರೋಗ್ಯ ಅಭಿಯಾನ-2021ರ ಸ್ವಚ್ಛತೆ ಮತ್ತು ಕರೊನಾ ಮುಂಜಾಗ್ರತೆ ಕುರಿತು ಬೀದಿ ನಾಟಕವನ್ನು ವೀಕ್ಷಿಸಿತು. ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಪಂ ಸಿಇಒ ಜಿ.ಎಂ.ಗಂಗಾಧರಸ್ವಾಮಿ, ಆರ್‌ಸಿಎಚ್ ಅಧಿಕಾರಿ ಡಾ.ಕೇಶವರಾಜ್ ಇದ್ದರು.

    207 ಮಂದಿಗೆ ಲಸಿಕೆ: ಮಂಗಳವಾರ 60 ವರ್ಷ ಮೇಲ್ಪಟ್ಟ 180 ಹಿರಿಯರು ಹಾಗೂ ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ 45 ವರ್ಷ ಮೇಲ್ಪಟ್ಟ 27 ಒಟ್ಟು 207 ಜನರಿಗೆ ಲಸಿಕೆ ಹಾಕಲಾಯಿತು. ಸೋಮವಾರ 59 ಜನರಿಗೆ ಹಾಕಲಾಗಿತ್ತು. ಜಿಲ್ಲೆಯಲ್ಲಿ ಮಂಗಳವಾರ 16 ಜನರಿಗೆ ಕರೊನಾ ಸೋಂಕು ದೃಢವಾಗಿದ್ದು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 8 ಜನರು ಚೇತರಿಸಿಕೊಂಡು ಮನೆಗೆ ವಾಪಸಾದರು. ಗುಬ್ಬಿ 1, ತಿಪಟೂರು, ತುರುವೇಕೆರೆ ತಲಾ 4, ತುಮಕೂರು ತಾಲೂಕಿನಲ್ಲಿ 7 ಜನರಿಗೆ ಸೋಂಕು ತಗುಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts