More

    ಜಿಲ್ಲಾದ್ಯಂತ ಗಣರಾಜ್ಯೋತ್ಸವ ಸಡಗರ

    ಗದಗ: ಪ್ರವಾಹಕ್ಕೆ ಒಳಗಾಗಿದ್ದ ನರಗುಂದ, ರೋಣ ತಾಲೂಕಿನ ಸಂತ್ರಸ್ತ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿಗಾಗಿ ಮಂಜೂರಾದ 660 ಕಾಮಗಾರಿಗಳ ಪೈಕಿ ಈಗಾಗಲೇ 303 ಕಾಮಗಾರಿಗಳು ಮುಕ್ತಾಯಗೊಂಡಿವೆ. 22 ಕೋಟಿ ರೂ. ವೆಚ್ಚದ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು.

    ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ‘ನೆರೆಹಾವಳಿಯಲ್ಲಿ ಹಾನಿಗೊಳಗಾದ ‘ಎ’ ಕೆಟಗರಿಯಲ್ಲಿ 404, ‘ಬಿ’ ಕೆಟಗರಿಯಲ್ಲಿ 880 ಮತ್ತು ‘ಸಿ’ ಕೆಟಗರಿಯಲ್ಲಿ 1603 ಮನೆಗಳ ನಿರ್ಮಾಣ ಮತ್ತು ದುರಸ್ತಿಗಾಗಿ ಈಗಾಗಲೇ ಸಂತ್ರಸ್ತರ ಖಾತೆಗೆ ನೇರವಾಗಿ ರಾಜೀವ ಗಾಂಧಿ ವಸತಿ ನಿಗಮದಿಂದ 20 ಕೋಟಿ ರೂ. ಜಮಾ ಮಾಡಲಾಗಿದೆ’ ಎಂದರು.

    ಜಿಲ್ಲೆಯ ಒಟ್ಟು 281 ಶಾಲೆಗಳ 770 ಕೊಠಡಿಗಳ ನಿರ್ಮಾಣ ಮತ್ತು ದುರಸ್ತಿಗಾಗಿ 16.57 ಕೋಟಿ ರೂ. ಬಿಡುಗಡೆಯಾಗಿದ್ದು, ದುರಸ್ತಿ ಕಾರ್ಯ ನಡೆಯುತ್ತಿದೆ. ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಥಮ ಬ್ಯಾಚ್​ನ ವಿದ್ಯಾರ್ಥಿಗಳು ಅಂತಿಮ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ನೀಡಿದ್ದು ಜಿಲ್ಲೆಗೆ ಗೌರವ ತರುವ ವಿಷಯವಾಗಿದೆ. ಅಲ್ಲದೆ, ಜಿಲ್ಲಾಸ್ಪತ್ರೆಯಲ್ಲಿ ಉಚಿತ ಎಂಆರ್​ಐ ಸ್ಕ್ಯಾನ್ ಸೇವೆ ಆರಂಭಿಸಿ ಬಡಜನರಿಗೆ ಆರೋಗ್ಯ ಸೌಲಭ್ಯ ಒದಗಿಸಲಾಗಿದೆ ಎಂದರು.

    ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಡಿ ಜಿಲ್ಲಾದ್ಯಂತ ಒಟ್ಟು 15,752 ಫಲಾನುಭವಿಗಳಿಗೆ 6.16 ಕೋಟಿ ರೂ. ಪರಿಹಾರ ನೀಡಲಾಗಿದೆ. ಭಾಗ್ಯಲಕ್ಷ್ಮಿ ಯೋಜನೆಯಡಿ 2006ರಿಂದ ಡಿಸೆಂಬರ್ 2019 ಅಂತ್ಯದವರೆಗೆ 69,701 ಫಲಾನುಭವಿಗಳಿಗೆ ಮಂಜೂರಾತಿ ನೀಡಿದ್ದು, ಇದರಲ್ಲಿ 67,025 ಫಲಾನುಭವಿಗಳಿಗೆ ಬಾಂಡ್​ಗಳನ್ನು ವಿತರಿಸಲಾಗಿದೆ ಎಂದರು.

    ಜಿಲ್ಲೆಯಲ್ಲಿ 2018-19ನೇ ಸಾಲಿನ ಮುಂಗಾರು ಹಾಗೂ ಹಿಂಗಾರು ಹಂಗಾಮುಗಳಲ್ಲಿ ಬೆಳೆ ವಿಮೆ ನೋಂದಾಯಿಸಿದ ಸುಮಾರು 88,676 ರೈತರಿಗೆ ಮುಂಗಾರಿನಲ್ಲಿ 224 ಕೋಟಿ ರೂ. ಹಾಗೂ ಹಿಂಗಾರಿನಲ್ಲಿ 323.00 ಕೋಟಿ ರೂ. ಬೆಳೆ ವಿಮೆ ಮಂಜೂರಾಗಿದ್ದು, ಗದಗ ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ ಎಂದರು.

    ಸಾಂಸ್ಕೃತಿಕ ಕಾರ್ಯಕ್ರಮಗಳು: ಬೆಟಗೇರಿಯ ಮಂಜು ಪ್ರೌಢಶಾಲೆ, ಎಚ್​ಸಿಇಎಸ್ ಪ್ರೌಢಶಾಲೆ, ಲೋಯಲಾ ಪ್ರೌಢಶಾಲೆ, ಗದಗನ ಎಸ್​ಎಂಕೆ ನಗರದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳ ನೃತ್ಯ ರೂಪಕಗಳನ್ನು ಪ್ರಸ್ತುತಪಡಿಸಿದರು. ಪೊಲೀಸ್ ಪಡೆಯಿಂದ ನಟರಂಗ ಸಂಘದ ಸಹಯೋಗದಲ್ಲಿ ಮುಂಬೈ ಮೇಲೆ ಉಗ್ರರ ದಾಳಿ ಸಂದರ್ಭದಲ್ಲಿ ಹುತಾತ್ಮರಾದ ತುಕಾರಾಮ ಅವರ ಬಲಿದಾನ ಕುರಿತ ರೂಪಕವು ಹೃದಯರ್ಸ³ಯಾಗಿತ್ತು.

    ಶಾಸಕ ಎಚ್.ಕೆ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಅಧ್ಯಕ್ಷ ಸಿದ್ದಲಿಂಗೇಶ್ವರ ಪಾಟೀಲ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಜಿಪಂ ಉಪಾಧ್ಯಕ್ಷೆ ಮಲ್ಲವ್ವ ಬಿಚ್ಚೂರ, ತಾಪಂ ಅಧ್ಯಕ್ಷ ಎಸ್.ಎಸ್. ಪಾಟೀಲ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ ಜೋಷಿ, ಜಿಪಂ ಸಿಇಒ ಡಾ. ಆನಂದ ಕೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ, ಮುಖಂಡರಾದ ಅನಿಲ ಮೆಣಸಿನಕಾಯಿ, ಸಂಗಮೇಶ ದಂದೂರ, ರಾಜು ಕುರಡಗಿ, ಕಾಂತಿಲಾಲ ಬನ್ಸಾಲಿ, ಎಂ.ಎಂ. ಹಿರೇಮಠ ಇತರರಿದ್ದರು. ದತ್ತಪ್ರಸನ್ನ ಪಾಟೀಲ ಹಾಗೂ ಡಾ.ಲಕ್ಷ್ಮಿದೇವಿ ಗವಾಯಿ ನಿರ್ವಹಿಸಿದರು.

    ಸವೋತ್ತಮ ಪ್ರಶಸ್ತಿ ಪುರಸ್ಕೃತರು: ಸರ್ಕಾರಿ ನೌಕರರಿಗಾಗಿ ನೀಡುವ ಸವೋತ್ತಮ ಪ್ರಶಸ್ತಿಗೆ ಭಾಜನರಾದ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಖಾಜಾ ಹುಸೇನ್ ಮುಧೋಳ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಸುಜಾತಾ ಪಾಟೀಲ, ಲಕ್ಕುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಾಯಕ ವೈದ್ಯಾಧಿಕಾರಿ ಡಾ. ರಾಜೇಶ್ವರಿ ಹೊಂಗಲ, ಮುಳಗುಂದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಂ.ಎಸ್. ಬೆಂತೂರ, ಜಿಲ್ಲಾ ಸಂಖ್ಯಾ ಸಂಗ್ರಹಣ ಇಲಾಖೆಯ ಸಹಾಯಕ ಸಾಂಖ್ಯಿಕ ಅಧಿಕಾರ ಸಿ.ಎಸ್. ನೀಲಗುಂದ, ರಡ್ಡೇರನಾಗನೂರ ಪಿಡಿಒ ಈಶ್ವರಗೌಡ ಪಾಟೀಲ, ಅಬ್ಬಿಗೇರಿ ಪಿಡಿಒ ಶಿವನಗೌಡ ಮೆಣಸಗಿ, ಗದಗ ತಹಸೀಲ್ದಾರ್ ಕಚೇರಿ ಶಿರಸ್ತೇದಾರ್ ವಿಲಾಸ ರೇವಣಕರ, ಎಫ್​ಡಿಸಿ ಶಿವಯ್ಯ ಸಾವಳಗಿಮಠ, ಕೋಟುಮಚಗಿ ಗ್ರಾಮಲೆಕ್ಕಾಧಿಕಾರಿ ಬಿ.ಎಸ್. ಮಾಡಳ್ಳಿ ಅವರನ್ನು ಸಚಿವ ಸಿ.ಸಿ. ಪಾಟೀಲ ಸನ್ಮಾನಿಸಿದರು.

    ಜಿಲ್ಲಾ ಅಂಗವಿಕಲ ಹಾಗೂ ನಾಗರಿಕ ಸಬಲೀಕರಣ ಇಲಾಖೆಯಿಂದ ಆರು ಫಲಾನುಭವಿಗಳಿಗೆ ಯಂತ್ರಚಾಲಿತ ದ್ವಿಚಕ್ರ ವಾಹನ, 144 ಫಲಾನುಭವಿಗಳಲ್ಲಿ ಸಾಂಕೇತಿಕವಾಗಿ 18 ಜನ ಫಲಾನುಭವಿಗಳಿಗೆ ಗಾಲಿ ಕುರ್ಚಿ, ವಾಕರ್, ಶ್ರವಣ ಸಾಧನ, ಸೈಕಲ್​ಗಳನ್ನು ವಿತರಿಸಲಾಯಿತು.

    ಮುಖ್ಯಮಂತ್ರಿ ನಿರ್ಧಾರವೇ ಅಂತಿಮ

    ಗದಗ: ಸಚಿವ ಸಂಪುಟ ವಿಸ್ತರಣೆ ಹಾಗೂ ಸಚಿವರ ಬದಲಾವಣೆ ವಿಚಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಿರ್ಧಾರವೇ ಅಂತಿಮ. ಅವರ ನಿರ್ಧಾರಕ್ಕೆ ನಾವೆಲ್ಲರೂ ಬದ್ಧ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು. ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯಾರು ಸಂಪುಟದಲ್ಲಿರಬೇಕು, ಯಾರನ್ನು ಸೇರಿಸಿಕೊಳ್ಳಬೇಕು ಮತ್ತು ಬಿಡಬೇಕು ಎನ್ನುವುದು ಸಿಎಂ ಅವರ ವಿವೇಚನೆಗೆ ಬಿಟ್ಟದ್ದು’ ಎಂದರು.

    ಬಿಜೆಪಿಯವರ ಜೀನ್ಸ್ ಪಾಕಿಸ್ತಾನದಲ್ಲಿದೆ ಎಂದು ಹೇಳಿಕೆ ನೀಡಿದ ಮಾಜಿ ಸಿಎಂ ಕುಮಾರಸ್ವಾಮಿ ಅವರ ಓಲೈಕೆ ರಾಜಕಾರಣ, ತುಷ್ಟೀಕರಣ ನೀತಿ ಗಮನಿಸಿದರೆ ಅವರ ಜೀನ್ಸ್ ಎಲ್ಲಿಯದು ಎಂಬುದು ಗೊತ್ತಾಗುತ್ತದೆ. ನಾವು ಅಷ್ಟೊಂದು ಕೆಳಮಟ್ಟಕ್ಕೆ ಇಳಿದು ಟೀಕೆ ಮಾಡುವವರಲ್ಲ ಎಂದು ತಿರುಗೇಟು ನೀಡಿದರು.

    ಮಹನೀಯರ ಸ್ಮರಣೆಗೆ ಗಣತಂತ್ರ ದಿನ ಆಚರಿಸಿ

    ನರಗುಂದ: ದೇಶದ ಹಿರಿಮೆ-ಗರಿಮೆ ಎತ್ತಿಹಿಡಿಯುವ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹನೀಯರನ್ನು ನೆನಪಿಸುವ ದಿನವನ್ನಾಗಿ ಗಣರಾಜ್ಯೋತ್ಸವವನ್ನು ಆಚರಿಸಬೇಕು ಎಂದು ತಹಸೀಲ್ದಾರ್ ಎ.ಎಚ್. ಮಹೇಂದ್ರ ಹೇಳಿದರು.

    ತಾಲೂಕು ಕ್ರೀಡಾಂಗಣದಲ್ಲಿ ಭಾನುವಾರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಶಿಕ್ಷಣ ಮತ್ತು ತಾಂತ್ರಿಕತೆಯಲ್ಲಿ ಮತ್ತಷ್ಟು ಅಭಿವೃದ್ಧಿ ಸಾಧಿಸಬೇಕಿದೆ. ಮಹಿಳಾ ಸಬಲಿಕರಣ ಹಾಗೂ ದೇಶದ ಬಲಿಷ್ಟತೆಗೆ ನಾವೆಲ್ಲ ಶ್ರಮಿಸಬೇಕಿದೆ ಎಂದರು.

    ಜಿಪಂ ಸದಸ್ಯ ರಾಜುಗೌಡ ಕೆಂಚನಗೌಡ್ರ, ತಾಪಂ ಅಧ್ಯಕ್ಷ ವಿಠಲ ತಿಮ್ಮರಡ್ಡಿ ಮಾತನಾಡಿದರು. ಧ್ವಜಾರೋಹಣ ಪರೇಡ್​ನಲ್ಲಿ ಎಚ್​ಪಿಎಸ್ ನಂ. 3 ಶಾಲೆ (ಪ್ರಥಮ) ಹಾಗೂ ಎಚ್​ಪಿಎಸ್ ನಂ. 2 ಶಾಲೆ (ದ್ವಿತೀಯ), ಎಚ್​ಪಿಎಸ್ ನಂ. 5 ಶಾಲೆ ತೃತೀಯ ಸ್ಥಾನ ಪಡೆಯಿತು. ಇತ್ತೀಚೆಗೆ ದೆಹಲಿಯಲ್ಲಿ ಆಯೋಜಿಸಿದ್ದ ಪರೇಡ್​ದಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾಲೇಜು ವಿದ್ಯಾರ್ಥಿ ಈರಣ್ಣ ಪಂಚನ್ನವರನನ್ನು ಸತ್ಕರಿಸಲಾಯಿತು.

    ಟಿಎಪಿಎಸ್​ಎಂಎಸ್ ಅಧ್ಯಕ್ಷ ಎ.ಎಂ. ಹುಡೇದ, ಡಿವೈಎಸ್​ಪಿ ಶಿವಾನಂದ ಕಟಗಿ, ಬಿ.ಬಿ. ಐನಾಪೂರ, ಯಲ್ಲಪ್ಪಗೌಡ ನಾಯ್ಕರ್, ಸ್ವಾತಂತ್ರ ಹೋರಾಟಗಾರ ಭೀಮಪ್ಪ ಹಡಪದ, ಮಹೇಶ ಬೋಳಶೆಟ್ಟಿ, ಚಂದ್ರು ದಂಡಿನ, ಜಿಪಂ ಸದಸ್ಯೆ ರೇಣುಕಾ ಅವರಾದಿ, ಪ್ರಭುಲಿಂಗಪ್ಪ ಯಲಿಗಾರ, ಹನುಮಂತ ಹವಾಲ್ದಾರ, ಗುರುಪಾದಪ್ಪ ಆದೆಪ್ಪನವರ, ಎನ್.ವಿ. ಮೇಟಿ, ಚನ್ನಪ್ಪ ಅಂಗಡಿ, ದೀಪಾ ನಾಗನೂರ, ಪ್ರಶಾಂತ ಜೋಶಿ, ಚಂದ್ರಗೌಡ ಪಾಟೀಲ ಪವಾಡೆಪ್ಪ ವಡ್ಡಿಗೇರಿ, ರಾಚನಗೌಡ ಪಾಟೀಲ, ಸಿದ್ದಪ್ಪ ಯಲಿಗಾರ, ಸಿ.ಆರ್. ಕುರ್ತಕೋಟಿ. ಎಂ.ಬಿ. ಕಾತ್ರಾಳ, ಶಿವಾನಂದ ಸಾತಿಹಾಳ ಇತರರು ಉಪಸ್ಥಿತರಿದ್ದರು.

    ಎಚ್.ಎಸ್. ದಾಸರ, ಸಂಪನ್ಮೂಲ ಅಧಿಕಾರಿ ಬಸವರಾಜ ಮಜ್ಜಗಿ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts