More

    ರೈತರ ಆದಾಯ ದುಪ್ಪಟ್ಟು ಆಗಲೇ ಇಲ್ಲ: ಸಿಎಂ ಸಿದ್ದರಾಮಯ್ಯ

    ವಿಜಯವಾಣಿ ಸುದ್ದಿಜಾಲ ಗದಗ

    ರೈತರ ಆದಾಯವನ್ನು 2022 ರವರೆಗೆ ದುಪ್ಪಟ್ಟು ಮಾಡುತ್ತೇನೆ ಎಂದು ಕೇಂದ್ರ ಸರ್ಕಾರ ಭರವಸೆ ನೀಡಿತ್ತು. ರೈತರ ಆದಾಯ ದುಪ್ಪಟ್ಟು ಆಗಲೇ ಇಲ್ಲ. ಇದು ರೈತರಿಗೆ ಮಾಡಿದ ಅನ್ಯಾಯ ಆಗಲಿಲ್ಲವೇ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.

    ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್. ಗಡ್ಡದೇವರಮಠ ಅವರ ಪರ ಪ್ರಚಾರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದ ಬರಗಾಲ ಸ್ಥಿತಿಗೆ ಕೇಂದ್ರದ ಬಿಜೆಪಿ ಸರ್ಕಾರ ಸ್ಪಂಧಿಸಲಿಲ್ಲ. ಬರಗಾಲ ಪರಿಹಾರ ಒದಗಿಸುವಂತೆ ಕೇಂದ್ರಕ್ಕೆ ಎರಡು ಮೂರು ಬಾರಿ ವರದಿ ಸಲ್ಲಿಸಲಾಯಿತು. ಆದರೆ,  ಪರಿಹಾರ ನೀಡದೇ ಮಲತಾಯಿ ಧೋರಣೆ ತೋರಿತು. ಹಾಗಾಗಿ ನಾವು ಸುಪ್ರೀಂ ಕೋರ್ಟ್ ಮೆಟ್ಟಿಲೇರಬೇಕಾಯಿತು ಎಂದರು.

    ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ವಾಗ್ದಾನ ಮಾಡಿದ್ದೇವು. ಕೇಂದ್ರದಿಂದ ಅಕ್ಕಿಯನ್ನೇ ನೀಡಲಿಲ್ಲ. ಬಡವರಿಗೆ ಕೇಂದ್ರ ಸರ್ಕಾರ ಮಾಡಿದ ಅನ್ಯಾಯಗಳಲ್ಲಿ ಒಂದು.‌ ಗ್ಯಾರಂಟಿ ಯೋಜನೆಗಳಿಂದ ಕೋಟಿಗೂ ಅಧಿಕ ಕುಟುಂಬ ಬಡತನ ರೇಖೆಯಿಂದ ಮೇಲಕ್ಕೆ ಬಂದಿದೆ. ಕೊಟ್ಟ ಮಾತಿನಂತೆ ರಾಜ್ಯ ಸರ್ಕಾರ ನಡೆದಿದೆ. ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರನ್ನು ಕನಿಷ್ಠ 1 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಬೇಕು. ಬಸವರಾಜ ಬೊಮ್ಮಾಯಿ ಸೋಲಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ಮನವಿ ಮಾಡಿದರು, ಬಿಜೆಪಿ ಜೆಡಿಎಸ್ ಹೊಂದಾಣಿಕೆ ಅಭ್ಯರ್ಥಿಯಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸ್ಪರ್ಧಿಸಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ಇದನ್ನು ಪ್ರತಿಷ್ಠೆ ಕಣವಾಗಿ ತೆಗೆದುಕೊಂಡಿದ್ದಾರೆ. ಅವರನ್ನು ಸೋಲಿಸುವ ಕೆಲಸ ನಿಮ್ಮಿಂದಾಗಬೇಕು ಎಂದು ಹೇಳಿದರು.

     ರೋಣ ವಿಧಾಸಭಾ ಕ್ಷೇತ್ರದಿಂದ ಕನಿಷ್ಠ 25 ಸಾವಿರ‌ ಮತಗಳ ಅಂತರ ನೀಡುವುದಾಗಿ ಶಾಸಕ ಜಿ. ಎಸ್. ಪಾಟೀಲ ಅವರು ಹೇಳಿದ್ದಾರೆ. ಅವರ ಮಾತನ್ನು ನೀವೆಲ್ಲರೂ ಉಳಿಸಿಕೊಡಬೇಕು ಎಂದು ಮನವಿ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ನೀಡಿದ ಭರವಸೆ ಈಡೇರಿಸಿಲ್ಲ. ಅವರಿಗೆ ಮತ ಕೇಳುವ ಹಕ್ಕಿಲ್ಲ.  ಬೆಲೆ ಏರಿಕೆ, ಪೆಟ್ರೋಲಿಯಂ ಉತ್ಪನ್ನಗಳು ಎರಿಕೆ, ದವಸ ಧಾನ್ಯಗಳ ಬೆಲೆ ಏರಿಕೆ, ಗ್ಯಾಸ ಏರಿಕೆ ಅಚ್ಚೇ ದಿನದ ಬದಲಾಗಿ ಸಂಕಷ್ಟಕ್ಕೆ ತಳ್ಳಿದರು.

    ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣರಾದರು. ಕಳೆದ ಲೋಕಸಭಾ ಚುನಾವಣೆಯಲ್ಲಿ 25 ಬಿಜೆಪಿ ಸಂಸದರು ಆಯ್ಕೆಯಾಗಿದ್ದರು. ಪಾರ್ಲಿಮೆಂಟ್ ನಲ್ಲಿ ರಾಜ್ಯಕ್ಕಾದ ಅನ್ಯಾಯವನ್ನು ಯಾರೊಬ್ಬರೂ ಕೇಳಲಿಲ್ಲ. ಹೇಳಿದಂತೆ ನಡೆದುಕೊಳ್ಳಲಿಲ್ಲ. ತೆರಿಗೆ ಹಂಚಿಕೆ‌ ತಾರತಮ್ಯ, ಬರಗಾಲದ ಪರಿಹಾರ‌ ನೀಡಲಿಲ್ಲ. ಪಾರ್ಲಿಮೆಂಟ್ ಚುನಾವಣೆ ಬಂದಾಗ ಮಾತ್ರ ಕರ್ನಾಟಕ ನೆನಪಾಗುತ್ತದೆ. ಪ್ರವಾಹ ಬಂದಂತಹ ಸಂದರ್ಭದಲ್ಲಿ ಸಂತ್ರಸ್ತರ ಕಷ್ಟ ಸುಖ ಕೇಳಲು ಆಗಮಿಸಲಿಲ್ಲ. ಬರಗಾಲದ ದಿನಗಳಲ್ಲಿ ರಾಜ್ಯಕ್ಕೆ ಬರಲಿಲ್ಲ ಎಂದು ಪ್ರಧಾನಿ ವಿರುದ್ಧ ಆರೋಪಗಳ ಸುರಿಮಳೆಗೈದರು.

    ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ನರೇಂದ್ರ ಮೋದಿ ಅವರು ನಿಂತಿರುವ ನೆಲ ಅಲಗಾಡುತ್ತಿದೆ. ರಾಜ್ಯ ಕಾಂಗ್ರೆಸ್ ಸರಕಾರದ ಗ್ಯಾರಂಟಿಗಳನ್ನು ನಕಲು ಮಾಡಿಕೊಂಡು ಮೋದಿ ಗ್ಯಾರಂಟಿ ಎಂದು ನಾಮ ಫಲಕ ಹಾಕಿಕೊಂಡಿದ್ದಾರೆ. ಗದಗ ಜಿಲ್ಲೆಯಲ್ಲಿ ಪಂಚ ಗ್ಯಾರಂಟಿಗಳು ಶೇ. 97ರಷ್ಟು ಫಲಾನುಭವಿಗಳಿಗೆ ತಲುಪಿವೆ. . ಮಹಿಳೆಯರ ಜೊತೆಗೆ ಪುರುಷ ಮತದಾರರು ನಮ್ಮ ಅಭ್ಯರ್ಥಿಗೆ ಅಧಿಕ ಮತಗಳನ್ನು ನೀಡಿ ಕಾಂಗ್ರೆಸ್ ಗೆ ಅಧಿಕಾರಕ್ಕೆ‌ತಂದಿದ್ದೇ ಆದಲ್ಲಿ ರೈತರ ಸಾಲವನ್ನು ಮನ್ನಾ ಮಾಡಲಾಗುತ್ತದೆ. ಸಿಎಂ ಸಿದ್ದರಾಮಯ್ಯ ಅವರಿಗೆ ಬಲ ತುಂಬಿರಿ ಎಂದು ಹೇಳಿದರು.

    ವಿಧಾನಸಭಾ ಉಪಸಭಾಪತಿ ರುದ್ರಪ್ಪ ಲಮಾಣಿ, ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಸರಕಾರದ ಮುಖ್ಯಸಚೇತಕರು ಸಲೀಂ ಅಹ್ಮದ್, ಶಾಸಕರಾದ ಶ್ರೀನಿವಾಸ್ ಮಾನೆ, ಬಸವರಾಜ ಶಿವಣ್ಣನವರ, ಮಾಜಿ ಸಂಸದ ಆರ್.ಎಸ್. ಪಾಟೀಲ, ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಬಿ.ಆರ್. ಯಾವಗಲ್, ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ,  ಆರ್. ಶಂಕರ, ಸೇರಿ ಅನೇಕರು ಇದ್ದರು.

     *ವಂದೇ ಮಾತರಂ ಹೇಳಲು ಮುಜಗುರು:* 

    ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದ ವಿ.ಬಿ. ಸೋಮನಕಟ್ಟಿ ಮಠ ಅವರು ಭಾಷಕ್ಕೆ ಸಿಎಂ ಸಿದ್ದರಾಮಯ್ಯ ಅವರನ್ನು ಆಹ್ವಾನಿಸುವ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರತ್ತ ನೋಡಿ  ಜಯಘೋಷ ಕೂಗಿದರು. ನಂತರದಲ್ಲಿ ವಂದೇಮಾತರಂ ಎನ್ನುವುದಕ್ಕಾಗಿ ‘ವಂದೇ’ ಎನ್ನುತ್ತಿದ್ದಂತೆ ಬಸವರಾಜ ರಾಯರೆಡ್ಡಿ, ಶ್ರೀನಿವಾಸ ಮಾನೆ ಸೇರಿದಂತೆ ಇತರರು ವಿಬಿ ಸೋಮನಕಟ್ಟಿ ಅವರನ್ನು ನೇರಗಣ್ಣಿನಲ್ಲಿ ನೋಡಿ ಸನ್ನೆ ಮಾಡಿದರು. ಇದರಿಂದ ಮುಜಗುರುಗೊಂಡ ವಿ.ಬಿ. ಸೋಮನಕಟ್ಟಿಮಠ ‘ವಂದೇ ಮಾತರಂ’ ಎಂದು ಪೂರ್ಣಗೊಳಿಸಲು ಹಿಂದೇಟು ಹಾಕಿ ಮೆತ್ತಗೆ ಹಿಂದೆ ಸರಿದರು.

     ಕೋಟ್ : ಅಧಿಕಾರಕ್ಕೆ ಬಂದರೆ ಮಹದಾಯಿ ಯೋಜನೆ ಪೂರ್ಣಗೊಳಿಸುವುದಾಗಿ ಬಿಜೆಪಿ ಮುಖಂಡರು ರಕ್ತದಲ್ಲಿ ಪತ್ರ ಬರೆದಿದ್ದರು. ಎಲ್ಲವೂ ಡೋಂಗಿ ಹೇಳಿಕೆಗಳು. ಈ ಹೇಳಿಕೆಗಳಿಂದ ಚುನಾವಣಾ ಎದುರಿಸಲಾಗದು.

    – ಜಿ.ಎಸ್. ಪಾಟೀಲ, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts