More

    ಜಿಲ್ಲಾಡಳಿತದಿಂದ ಹೊಸ ಮಾರ್ಗಸೂಚಿ ಪ್ರಕಟ

    ಹಾವೇರಿ: ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿ ಹೊರಡಿಸಿರುವ ಪರಿಷ್ಕೃತ ಆದೇಶದಂತೆ ಜಿಲ್ಲೆಯಲ್ಲಿ ಜುಲೈ 7ರವರೆಗೆ ಲಾಕ್​ಡೌನ್ ವಿಸ್ತರಿಸಲಾಗಿದ್ದು, ಅಗತ್ಯವಸ್ತುಗಳ ಖರೀದಿ ಹಾಗೂ ಬಸ್​ಗಳ ಸಂಚಾರ ಸೇರಿ ಇತರ ಸೇವೆಗಳ ಆರಂಭಕ್ಕೆ ಸಮಯ ನಿಗದಿ ಪಡಿಸಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಹೊಸ ಮಾರ್ಗಸೂಚಿ ಪ್ರಕಟಿಸಿದ್ದಾರೆ.

    ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಅಗತ್ಯ ವಸ್ತು ಖರೀದಿ, ಹೋಟೆಲ್ ಹಾಗೂ ಇತರ ಸೇವೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಎಲ್ಲ ಉತ್ಪಾದನಾ ಘಟಕಗಳು ಹಾಗೂ ಕೈಗಾರಿಕೆಗಳು ತಮ್ಮ ಸಿಬ್ಬಂದಿ ಸಾಮರ್ಥ್ಯದ ಶೇ. 50ರಷ್ಟು ಸಿಬ್ಬಂದಿಯೊಂದಿಗೆ ಹಾಗೂ ಗಾರ್ವೆಂಟ್​ಗಳು ಶೇ. 30ರಷ್ಟು ಸಿಬ್ಬಂದಿಯೊಂದಿಗೆ ಕೋವಿಡ್-19 ನಿಯಮಾವಳಿ ಪಾಲಿಸಿ ಆರಂಭಿಸಲು ಅನುಮತಿಸಿದೆ. ಹವಾನಿಯಂತ್ರಣ ವ್ಯವಸ್ಥೆ ಚಾಲನೆಗೊಳಿಸದೆ ಬೆಳಗ್ಗೆ 6ರಿಂದ ಸಂಜೆ 5ವರೆಗೆ ಹೋಟೆಲ್, ರೆಸ್ಟೋರೆಂಟ್, ಬಾರ್ ಮತ್ತು ಕ್ಲಬ್​ಗಳಲ್ಲಿ (ಮದ್ಯಪಾನ ಹೊರತು ಪಡಿಸಿ) ಕುಳಿತುಕೊಂಡು ಆಹಾರ ಸೇವಿಸಲು ಶೇ. 50ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲು ಅನುಮತಿಸಿದೆ. ಲಾಡ್ಜ್ ಹಾಗೂ ರೆಸಾರ್ಟ್​ಗಳಲ್ಲಿ ಶೇ. 50ರಷ್ಟು ಸಾಮರ್ಥ್ಯದೊಂದಿಗೆ ಆರಂಭಿಸಬಹುದು.

    ಕಟ್ಟಡ ನಿರ್ಮಾಣ ಮತ್ತು ದುರಸ್ತಿಗೆ ಸಂಬಂಧಿಸಿದ ಸಾಮಗ್ರಿಗಳೊಂದಿಗೆ ವ್ಯವಹರಿಸುವ ಅಂಗಡಿಗಳು, ಸಂಸ್ಥೆಗಳಿಗೆ ಬೆಳಗ್ಗೆ 5ರಿಂದ ಸಂಜೆ 6ರವರೆಗೆ ಅನುಮತಿ ನೀಡಲಾಗಿದೆ. ವಾಯು ವಿಹಾರಕ್ಕಾಗಿ ಎಲ್ಲ ಉದ್ಯಾನಗಳನ್ನು ತೆರೆಯಬೇಕು. ಆದರೆ, ಯಾವುದೇ ಗುಂಪು ಸೇರಿ ವಾಕಿಂಗ್ ಮಾಡುವಂತಿಲ್ಲ. ಜಿಮ್ಳನ್ನು ತೆರೆಯಲು ಅನುಮತಿಸಿದೆ. ಹವಾನಿಯಂತ್ರಣ ಇಲ್ಲದೆ ಜಿಮ್ ಮಾಡಲು ಸೂಚಿಸಲಾಗಿದೆ.

    ಆಟೋರಿಕ್ಷಾ ಹಾಗೂ ಟ್ಯಾಕ್ಸಿಗಳು ಸಂಚರಿಸಲು ಅನುಮತಿಸಿದೆ. ಗರಿಷ್ಠ 2 ಪ್ರಯಾಣಿಕರನ್ನು ಮಾತ್ರ ಹತ್ತಿಸಿಕೊಳ್ಳಬೇಕು. ಎಲ್ಲ ಸರ್ಕಾರಿ ಕಚೇರಿಗಳು ಶೇ. 50ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಅನುಮತಿಸಿದೆ. ಮದುವೆ ಸಮಾರಂಭ ಗಳನ್ನು ಅವರವರ ಮನೆಗಳಲ್ಲಿಯೇ ಹತ್ತಿರದ ಸಂಬಂಧಿಕರನ್ನು ಒಳಗೊಂಡು 40 ಜನರಿಗೆ ಮೀರದಂತೆ ನೆರವೇರಿಸಲು ಅನುಮತಿಸಿದೆ. ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7 ಗಂಟೆಯಿಂದ ಬೆಳಗ್ಗೆ 5ರವರೆಗೆ ಅಗತ್ಯ ಮತ್ತು ತುರ್ತು ಸೇವೆಗೆ ಮಾತ್ರ ಅವಕಾಶವಿದ್ದು, ಉಳಿದ ಎಲ್ಲ ಸೇವೆಗಳನ್ನು ನಿಷೇಧಿಸಲಾಗಿದೆ. ಈ ಮಾರ್ಗಸೂಚಿಯನ್ನು ಪ್ರತಿಯೊಬ್ಬರೂ ಕಟ್ಟುನಿಟ್ಟಾಗಿ ಪಾಲಿಸಬೇಕು. ವಾರಾಂತ್ಯದ ಕರ್ಫ್ಯೂ ಪ್ರಕಾರ ಪ್ರತಿ ಶುಕ್ರವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೆ ಅಗತ್ಯ ಹಾಗೂ ತುರ್ತು ಸೇವೆ ಹೊರತು ಪಡಿಸಿ ಇನ್ನುಳಿದ ಎಲ್ಲ ಸೇವೆಗಳನ್ನು ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ ಬಸ್ ಸಂಚಾರ ಇಂದಿನಿಂದ

    ಹಾವೇರಿ: ಲಾಕ್​ಡೌನ್​ನಿಂದಾಗಿ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿದ್ದ ಬಸ್ ನಿಲ್ದಾಣಗಳಿಗೆ ಸೋಮವಾರ ದಿಂದ ಜೀವ ಕಳೆ ಬರಲಿದೆ.

    ಬೆಳಗ್ಗೆ 6 ಗಂಟೆಯಿಂದಲೇ ಜಿಲ್ಲಾದ್ಯಂತ ಬಸ್​ಗಳ ಸಂಚಾರ ಆರಂಭವಾಗಲಿದ್ದು, ಭಾನುವಾರ ಸಾರಿಗೆ ಘಟಕದಲ್ಲಿ ಬಸ್​ಗಳನ್ನು ಸ್ವಚ್ಛಗೊಳಿಸುವುದು, ಸ್ಯಾನಿಟೈಸ್ ಮಾಡುವುದು ಸೇರಿದಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಯಿತು. ಮೊದಲನೇ ಹಂತವಾಗಿ ಜಿಲ್ಲೆಯಲ್ಲಿ 150 ಬಸ್​ಗಳು ಸಂಚಾರ ಆರಂಭಿಸಲಿವೆ. ಜಿಲ್ಲೆಯ ಎಲ್ಲ ತಾಲೂಕು ಕೇಂದ್ರ, ದೊಡ್ಡ ಹೋಬಳಿಗಳಾದ ಬಂಕಾಪುರ, ತುಮ್ಮಿನಕಟ್ಟಿ, ಗುತ್ತಲ, ಹೊಸರಿತ್ತಿ ಸೇರಿ ಹೋಬಳಿಗಳಿಗೆ ಬಸ್​ಗಳು ಸಂಚರಿಸಲಿವೆ. ಜತೆಗೆ ಮುಖ್ಯ ನಗರ, ಪಟ್ಟಣದಿಂದ ದಾವಣಗೆರೆ, ಗದಗ, ಶಿರಸಿ, ಹುಬ್ಬಳ್ಳಿಗೆ ಬಸ್​ಗಳು ಸಂಚರಿಸಲಿವೆ. ಬಸ್​ಗಳಲ್ಲಿ ಶೇ. 50ರಷ್ಟು ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಪ್ರಯಾಣಿಕರು ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್ ಹಚ್ಚಿಕೊಂಡು ಹತ್ತಲು ನಿಲ್ದಾಣದಲ್ಲಿ ವ್ಯವಸ್ಥೆ ರೂಪಿಸಲಾಗಿದೆ.

    16.5 ಕೋಟಿ ರೂ. ನಷ್ಟ…: ಜಿಲ್ಲೆಯಲ್ಲಿ ಮೇ 27ರಿಂದ ಕರೊನಾ ಎರಡನೇ ಅಲೆಯಿಂದಾಗಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ ಒಂದೇ ಒಂದು ಬಸ್​ಗಳು ರಸ್ತೆಗೆ ಇಳಿದಿರಲಿಲ್ಲ. ಇದರಿಂದಾಗಿ ಜಿಲ್ಲಾ ಸಾರಿಗೆ ಘಟಕಕ್ಕೆ ಒಟ್ಟು 13 ಕೋಟಿ ರೂಪಾಯಿ ನಷ್ಟವಾಗಿದೆ. ಅಲ್ಲದೆ, ಲಾಕ್​ಡೌನ್​ಗೂ ಮುಂಚೆ ಸಾರಿಗೆ ಸಂಸ್ಥೆ ನೌಕರರು ಮುಷ್ಕರ ಹಮ್ಮಿಕೊಂಡಿದ್ದ ಕಾರಣ 3.5 ಕೋಟಿ ರೂಪಾಯಿ ಸೇರಿ ಈವರೆಗೂ ಒಟ್ಟು 16.5 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ.

    ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳ ನಡುವೆ ಹಾಗೂ ಅನ್​ಲಾಕ್ ಆಗಿರುವ ಅಕ್ಕಪಕ್ಕದ ಜಿಲ್ಲೆಗಳಿಗೂ ಸೇರಿ 150 ಬಸ್​ಗಳನ್ನು ಶೇ. 50ರಷ್ಟು ಪ್ರಯಾಣಿಕರ ಮಿತಿಯಲ್ಲಿ ಸಂಚಾರಕ್ಕೆ ಸಿದ್ಧತೆ ಮಾಡಲಾಗಿದೆ. ಚಾಲಕರು, ನಿರ್ವಾಹಕರಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಲಾಗಿದ್ದು, ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಬಸ್​ಗಳನ್ನು ಓಡಿಸಲು ನಿರ್ಧರಿಸಲಾಗಿದೆ.

    | ವಿ.ಎಸ್. ಜಗದೀಶ

    ಎನ್​ಡ್ಲ್ಯೂಕೆಎಸ್​ಆರ್​ಟಿಸಿ ವಿಭಾಗೀಯ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts