More

    ಗೋಡೆಗಳಲ್ಲಿ ಕಂಗೊಳಿಸುತ್ತಿದೆ ಹಳ್ಳಿ ಜನರ ಹಾಡು ಪಾಡು

    ಹುಣಸೂರು: ಗ್ರಾಮೀಣ ರಸ್ತೆಯಲ್ಲಿ ನಡೆದು ಹೋಗುತ್ತಿರುವ ಹೆಂಗಳೆಯರು..ನೀರಿನ ಬಿಂದಿಗೆಯೊಂದಿಗೆ ಬರುತ್ತಿರುವ ಮಹಿಳೆಯರು..ಕೋಲಾಟವಾಡುತ್ತಿರುವ ಪುರುಷರು..

    ಇದು ಯಾವುದೊ ಗ್ರಾಮದ ಚಿತ್ರಣಲ್ಲ..ತಾಲೂಕಿನ ಬಿಳಿಕೆರೆ ಹೋಬಳಿಯ ದೇವಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೋಡೆಗಳ ಮೇಲೆ ಚಿತ್ರ ಕಲಾವಿದ ಕುಂಚದಿಂದ ಮೂಡಿರುವ ಹಳ್ಳಿ ಜನರ ಹಾಡು ಪಾಡು..

    4 ತಿಂಗಳ ಹಿಂದೆ ಮೈಸೂರಿನ ಜೆಎಸ್‌ಎಸ್ ಪದವಿ ಕಾಲೇಜಿನ ಎನ್ನೆಸ್ಸೆಸ್ಸ್ ತಂಡದ ವಾರ್ಷಿಕ ವಿಶೇಷ ಶಿಬಿರದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ದೇವಗಳ್ಳಿ ಶಾಲೆಯ ಗೋಡೆಗಳ ಮೇಲೆ ಗ್ರಾಮೀಣ ಜನರ ಬಣ್ಣಬಣ್ಣದ ಬದುಕನ್ನು ಚಿತ್ರಿಸಿದರು. ಚಿತ್ರಿಕಲಾವಿದ ಸ್ವಾಮಿ ನೇತೃತ್ವದ ತಂಡ ಈ ಶಾಲೆಯ ಗೋಡೆಗಳಲ್ಲಿ ಕಲಾಪ್ರಪಂಚವನ್ನೇ ಸೃಷ್ಟಿಸಿದೆ. ಗೋಧೂಳಿ ಸಮಯದಲ್ಲಿ ಹಸುಗಳನ್ನು ಕರೆದುಕೊಂಡು ಮನೆಗೆ ತೆರಳುತ್ತಿರುವ ರೈತ ಸಮೂಹವಿದೆ. ಹಬ್ಬದ ಪ್ರಯುಕ್ತ ಕೋಲಾಟದ ಕುಣಿತದ ಮೂಲಕ ಸಂತಸ ಪಡುತ್ತಿರುವ ಯುವಪಡೆ ಇದೆ. ಅಲ್ಲದೆ ತಮಟೆ, ವೀಣೆ, ತಂಬೂರಿ ವಾದನದ ಕಲಾವಿದರಿದ್ದಾರೆ. ಕರಾವಳಿಯ ಗಂಡುಕಲೆ ಯಕ್ಷಗಾನದ ಪಾತ್ರಧಾರಿಗಳೂ ಇಲ್ಲಿ ಮೂಡಿಬಂದಿದ್ದಾರೆ.

    ಇದಲ್ಲದೆ ಹಣ್ಣು ತರಕಾರಿ ಹೊತ್ತು ಬೀದಿಯಲ್ಲಿ ಮಾರಾಟ ಮಾಡುತ್ತಿರುವ ಹೆಂಗಸರು ಇದ್ದಾರೆ. ಮನೆಬಾಗಿಲಿನಲ್ಲಿ ತಾಯಿ ತನ್ನ ಮಗುವಿನೊಂದಿಗೆ ಆಡುತ್ತಿರುವ ದೃಶ್ಯ ಅಮೋಘವಾಗಿ ಮೂಡಿಬಂದಿದೆ. ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರಕ್ಕೆ ಬಂದು ಗ್ರಾಮೀಣ ಜನಜೀವನವನ್ನು ಕಂಡು ಅದನ್ನು ಯಥಾವತ್ತಾಗಿ ಗೋಡೆಗಳ ಮೇಲೆ ಚಿತ್ರಿಸಿದ್ದೇವೆ ಎಂದು ಸ್ವಾಮಿ ಹೆಮ್ಮೆಯಿಂದ ಹೇಳುತ್ತಾರೆ.

    ವೈಶಿಷ್ಟ್ಯಪೂರ್ಣ ಸರ್ಕಾರಿ ಶಾಲೆ: ದೇವಗಳ್ಳಿ ಸರ್ಕಾರಿ ಶಾಲೆ ತಾಲೂಕಿನ ಗಡಿಭಾಗದಲ್ಲಿದ್ದರೂ(ಹುಣಸೂರು-ಎಚ್.ಡಿ.ಕೋಟೆ ಗಡಿಭಾಗ) ಶೈಕ್ಷಣಿಕವಾಗಿ ವೈಶಿಷ್ಟ್ಯ ಪೂರ್ಣದಿಂದ ಕೂಡಿದೆ. 50 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಶಾಲೆಯ ಆವರಣದಲ್ಲಿ ಔಷಧ ಸಸ್ಯಗಳೊಂದಿಗೆ ಬಣ್ಣಬಣ್ಣದ ಹೂವುಗಳಿಂದ ಆವರಣ ಕಂಗೊಳಿಸುತ್ತದೆ.

    ವಿಜ್ಞಾನ ವಿಷಯದ ಟೀಚರ್ ಶಶಿಕಲಾ ಅವರ ಕ್ರಿಯಾಶೀಲ ಮನೋಭಾವವೇ ವಿದ್ಯಾರ್ಥಿಗಳಿಗೆ ಸ್ಫೂರ್ತಿ. ಇವರ ಪ್ರೇರಣೆಯಿಂದ ಶಾಲೆಯಲ್ಲಿ ಸೈನ್ಸ್ ಲ್ಯಾಬ್‌ಇದೆ. ಮಾಸಿಕ ಪತ್ರಿಕೆಯನ್ನು ಹೊರತರುತ್ತಾರೆ. ಶಾಲಾ ಆವರಣದಲ್ಲಿ ಅರ್ಧ ಗುಂಟೆ ಭೂಮಿಯಲ್ಲೇ ವಿದ್ಯಾರ್ಥಿಗಳು ರೈತರಾಗಿ ದುಡಿದು ರಾಗಿ, ಭತ್ತ ಬೆಳೆಯುತ್ತಾರೆ. ಕೃಷಿಯ ಬದುಕನ್ನು ವಿದ್ಯಾರ್ಥಿ ದೆಸೆಯಿಂದಲೇ ಕಲಿಯುತ್ತಿದ್ದಾರೆ.

    ಜೆಎಸ್‌ಎಸ್ ಕಾಲೇಜಿನ ವಿದ್ಯಾರ್ಥಿಗಳ ಕಲಾಪ್ರತಿಭೆ ನಮ್ಮ ವಿದ್ಯಾರ್ಥಿಗಳಿಗೂ ಪ್ರೇರಣೆ ನೀಡಿದೆ. ಶಾಲೆ ವಾತಾವರಣ ಇನ್ನಷ್ಟು ಪ್ರಕಾಶಮಾನವಾಗಿದೆ. ಓದಿನೊಂದಿಗೆ ಇತರ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳು ತೊಡಗಿಕೊಂಡಲ್ಲಿ ಅವರ ಜ್ಙಾನ ಅಭಿವೃದ್ಧಿಗೆ ಸಾಧ್ಯ. ಈ ನೆಲದ ಕಲೆ, ಸಂಸ್ಕೃತಿಗಳನ್ನು ಚಿತ್ರಗಳ ಮೂಲಕ ಬಿಚ್ಚಿಟ್ಟು ವಿದ್ಯಾರ್ಥಿಗಳನ್ನು ಮುದಗೊಳಿಸಿರುವ ಕಲಾತಂಡಕ್ಕೆ ಶಾಲೆಯ ಶಿಕ್ಷಕರ ಪರವಾಗಿ ಧನ್ಯವಾದಗಳು.
    ಶಶಿಕಲಾ, ವಿಜ್ಞಾನ ಶಿಕ್ಷಕಿ, ದೇವಗಳ್ಳಿ ಸರ್ಕಾರಿ ಶಾಲೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts