More

    ಗೋಲಿಬಾರ್, ಲಾಠಿಚಾರ್ಜ್​ಗೂ ಬಗ್ಗಲ್ಲ ಮಾಜಿ ಶಾಸಕ ಜಿ.ಎಸ್. ಪಾಟೀಲ ಗುಡುಗು

    ವಿಜಯವಾಣಿ ಸುದ್ದಿಜಾಲ ಗಜೇಂದ್ರಗಡ
    ಉಣಚಗೇರಿ ಗ್ರಾಮದ ಜಮೀನುಗಳಿಗೆ ನಿರಂತರ ವಿದ್ಯುತ್ ಪೂರೈಸಬೇಕೆಂಬ ರೈತರ ನ್ಯಾಯಸಮ್ಮತ ಬೇಡಿಕೆ ಈಡೇರುವ ತನಕ ಪ್ರತಿಭಟನೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಬೇಕಿದ್ದರೆ ನಮ್ಮ ಮೇಲೆ ಗೋಲಿಬಾರ್ ಆಥವಾ ಲಾಠಿ ಚಾರ್ಜ್ ಮಾಡಿಸಿ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಜಿ.ಎಸ್. ಪಾಟೀಲ ಗುಡುಗಿದರು.
    ಪಟ್ಟಣದ ಹೆಸ್ಕಾಂ ಕಚೇರಿ ಆವರಣದಲ್ಲಿ ಉಣಚಗೇರಿ ಗ್ರಾಮದ ರೈತರು ಜಮೀನುಗಳಿಗೆ ನಿರಂತರ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿ ಶುಕ್ರವಾರ ಕರೆ ನೀಡಿದ್ದ ಗಜೇಂದ್ರಗಡ ಬಂದ್ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
    ‘ರೈತರು ಪ್ರತಿಭಟನೆಗೆ ಕರೆದಾಗ 2 ದಿನ ನಾನು ಬರಲಿಲ್ಲ. ಶಾಸಕರು ಸಮಸ್ಯೆ ಆಲಿಸಿ ಪರಿಹಾರ ನೀಡುತ್ತಾರೆ ಎಂದುಕೊಂಡಿದ್ದೆ. ಆದರೆ, ಶಾಸಕರ ಮನೆ ಎದುರಿಗಿರುವ ಹೆಸ್ಕಾಂ ಕಚೇರಿ ಆವರಣದಲ್ಲಿ ಐದು ದಿನ ನಿರಂತರ ಪ್ರತಿಭಟನೆ ನಡೆಸಿದರೂ ಸ್ಥಳಕ್ಕೆ ಆಗಮಿಸುವ ಸೌಜನ್ಯವನ್ನೂ ಶಾಸಕರು ತೋರಿಲ್ಲ. ರೈತರ ನ್ಯಾಯಸಮ್ಮತ ಬೇಡಿಕೆ ಈಡೇರಿಕೆಗಾಗಿ ಹೋರಾಟಕ್ಕೆ ನಾನು ಕಾಂಗ್ರೆಸ್ ಜಿಲ್ಲಾಧ್ಯಕ್ಷನಾಗಿ ಬಂದಿಲ್ಲ. ರೈತನ ಮಗನಾಗಿ ಬಂದಿದ್ದೇನೆ. ಹೀಗಾಗಿ ನ್ಯಾಯ ಸಿಗುವವರೆಗೆ ಪ್ರತಿಭಟನೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ’ ಎಂದು ತಿಳಿಸಿದರು.
    ರೈತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಸ್ಥಳೀಯ ಅಧಿಕಾರಿಗಳು ವಿಫಲವಾಗಿದ್ದಾರೆ. ಜಿಲ್ಲೆಗೆ ಅರಣ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಆಗಮಿಸಿದ್ದರೂ ಅವರ ಗಮನಕ್ಕೆ ತರಲಿಲ್ಲ. ಮೇಲಧಿಕಾರಿಗಳನ್ನು ಸ್ಥಳಕ್ಕೆ ಕರೆಸುವ ಪ್ರಯತ್ನಕ್ಕೆ ಅಧಿಕಾರಿಗಳು ಮುಂದಾಗಿಲ್ಲ. ಬದಲಿಗೆ ರಸ್ತೆ ಸಂಚಾರಕ್ಕೆ ತೊಂದರೆ ಆಗುತ್ತದೆ, ಪ್ರತಿಭಟನೆ ಸಡಿಲಿಸಿ ಎನ್ನುತ್ತಿರುವುದು ವಿಪರ್ಯಾಸ. ಬೇಕಿದ್ದರೆ ನೀವು ನನ್ನ ಗುಂಡು ಹಾರಿಸಿ ಅಥವಾ ನನ್ನನ್ನು ಬಂಧಿಸಿ ರೈತರ ಸಮಸ್ಯೆಗೆ ಪರಿಹಾರ ಸಿಗುವವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದರು.
    ಜಯ ಕರ್ನಾಟಕ, ಡಿಎಸ್​ಎಸ್, ಕರವೇ ಹಾಗೂ ಕರ್ನಾಟಕ ಅಭಿವೃದ್ಧಿ ವೇದಿಕೆ ಸೇರಿ ವಿವಿಧ ಸಂಘಟನೆಗಳು ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts