More

    ಗೋಕರ್ಣದಲ್ಲಿ ಜಾರಿಗೆ ಬಂದ ವಸ್ತ್ರ ಸಂಹಿತೆ

    ಗೋಕರ್ಣ: ಆರು ತಿಂಗಳಿಗೂ ಹೆಚ್ಚಿನ ಸಮಯದ ತರುವಾಯ ಗೋಕರ್ಣದ ಪುರಾಣ ಖ್ಯಾತ ಮಹಾಬಲೇಶ್ವರ ಮಂದಿರದಲ್ಲಿ ಸೋಮವಾರದಿಂದ ಹಿಂದಿನಂತೆ ಭಕ್ತರು ಎಲ್ಲ ಬಗೆಯ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಯಿತು. ಬೆಳಗ್ಗೆ 6 ಗಂಟೆಯಿಂದ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಬಗೆ ಬಗೆಯ ಸೇವೆ ಕೈಗೊಂಡು ಆತ್ಮಲಿಂಗವನ್ನು ಮುಟ್ಟಿ ಪೂಜಿಸಿ ಪುನೀತರಾದರು.

    ಇದೇ ಮೊದಲ ಬಾರಿಗೆ ಆಡಳಿತ ಮಂಡಳಿಯ ನೂತನ ಉಪಕ್ರಮಗಳಿಂದ ಮಂದಿರದಲ್ಲಿ ಶಿಸ್ತು ಮತ್ತು ಸಂಪ್ರದಾಯ ಒಟ್ಟಾಗಿ ಆಚರಿಸಲ್ಪಟ್ಟಿರುವುದು ಎದ್ದುಕಂಡಿತು. ಪೂಜೆ ಮಾಡಿಸುವ ಉಪಾಧಿವಂತರು ಮತ್ತು ಸೇವೆ ಕೈಗೊಳ್ಳುವ ಭಕ್ತರು ಮಾಸ್ಕ್ ಧರಿಸಿ ಪರಸ್ಪರ ಅಂತರ ಕಾಯ್ದುಕೊಂಡರು. ಹಿಂದಿನಂತೆ ಸಂಕಲ್ಪ ಮಾಡಿಸಲು ಎಲ್ಲೆಂದರಲ್ಲಿ ಕುಳಿತುಕೊಳ್ಳುವ ಹಾಗಿಲ್ಲ. ಅರ್ಧ ಚಂದ್ರಾಕೃತಿಯಲ್ಲಿ ಅಲ್ಲಲ್ಲಿ ಗುರುತು ಹಾಕಲಾದ ಸ್ಥಳದಲ್ಲಿ ಮಾತ್ರ ಸಂಕಲ್ಪಸೇವೆಗೆ ಆದ್ಯತೆ ನೀಡಲಾಗಿದೆ. ಮಂದಿರದಲ್ಲಿ ಹೊಸ ವಸ್ತ್ರ ಸಂಹಿತೆ ಜಾರಿಗೆ ಬಂದ ಹಿನ್ನೆಲೆಯಲ್ಲಿ ಪ್ಯಾಂಟ್ ಉಡುಪು ಮಾಯವಾಗಿ ಸಂಪೂರ್ಣ ಮಂದಿರ ಸಂಪ್ರದಾಯಸ್ಥ ವಸ್ತ್ರ ಮಯವಾಗಿ ಕಂಗೊಳಿಸಿತು. ಅಗತ್ಯವಿರುವವರಿಗೆ ಮಂದಿರದಲ್ಲಿಯೇ ಲುಂಗಿ ಮತ್ತು ವಸ್ತ್ರದ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ಹಿಂದಿನಂತೆ ಗರ್ಭಗುಡಿಗೆ ಒಮ್ಮೆಗೆ ನುಗ್ಗುವಂತಿಲ್ಲ. ಗರ್ಭಗುಡಿಯಲ್ಲಿ ಸೀಮಿತ ಸ್ಥಳಾವಕಾಶ ಇರುವುದರಿಂದ ಪರಸ್ಪರ ಅಂತರ ನಿರ್ವಹಣೆಯ ಹಿನ್ನೆಲೆಯಲ್ಲಿ ನಿಗದಿತ ಸಂಖ್ಯೆಯ ಭಕ್ತರು ಪೂಜೆ ಮುಗಿಸಿ ಹೊರ ಬಂದ ನಂತರ ಸಾಲಿನಲ್ಲಿದ್ದವರು ಒಳ ಪ್ರವೇಶಿಸಲು ಅನುವು ಮಾಡಲಾಗಿದೆ.

    ಮಂದಿರದಲ್ಲಿ ಕೋವಿಡ್ ನಿಯಮ ಮತ್ತು ವಸ್ತ್ರ ಸಂಹಿತೆಗೆ ಅನುಗುಣವಾಗಿ ಜಾರಿಗೆ ತರಲಾದ ಹೊಸ ಕ್ರಮಗಳಿಗೆ ಭಕ್ತರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸ್ಥಳೀಯ ಉಪಾಧಿವಂತರು ಕೂಡ ಇದಕ್ಕೆ ತಕ್ಕುದಾಗಿ ಹೊಂದಿಕೊಂಡು ಪೂಜಾದಿ ಸೇವೆಗಳನ್ನು ಶಾಸ್ತ್ರೀಯವಾಗಿ ನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ಆತ್ಮಲಿಂಗ ಸನ್ನಿಧಿಯಲ್ಲಿ ಹೊಸ ಬಗೆಯ ಪ್ರಶಾಂತತೆ ಮೈದಳೆದಿದೆ.| ಜಿ.ಕೆ.ಹೆಗಡೆ ಆಡಳಿತಾಧಿಕಾರಿಗಳು

    ಉತ್ತಮ ಪ್ರತಿಕ್ರಿಯೆ: ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ನೇತೃತ್ವದ ಆಡಳಿತ ಮಂಡಳಿಯ ನೂತನ ಸಂಪ್ರದಾಯ ಬದ್ಧ ನಿಯಮಗಳಿಗೆ ಭಕ್ತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೊಸ ಪದ್ಧತಿಯಿಂದ ಮಂದಿರದಲ್ಲಿ ಆಹ್ಲಾದಕರ ವಾತಾವರಣ ಸೃಷ್ಟಿಯಾಗಿರುವುದು ಭಕ್ತರ ಸಂತಸವನ್ನು ಹೆಚ್ಚಿಸಲು ಕಾರಣವಾಗಿದೆ. ಆರು ತಿಂಗಳ ನಂತರ ಪೂಜಾದಿ ಸೇವೆಗಳು ಮತ್ತೆ ಪ್ರಾರಂಭವಾದ ಹಿನ್ನೆಲೆಯಲ್ಲಿ ಸೋಮವಾರ ಈ ಹಿಂದಿನ ಭಕ್ತರ ದಟ್ಟಣೆ ಇರಲಿಲ್ಲ. ಸುಮಾರು ಸಾವಿರ ಭಕ್ತರು ವಿವಿಧ ಸೇವೆ ಮಾಡಿ ಆತ್ಮಲಿಂಗಕ್ಕೆ ಅರ್ಚನೆ ಸಲ್ಲಿಸಿದರು.</

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts