More

    ಗೃಹಲಕ್ಷ್ಮೀಗೆ ಯೋಜನೆಗೆ ಚಾಲನೆ ಇಂದು : ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾಹಿತಿ


    ಚಾಮರಾಜನಗರ: ಕುಟುಂಬದ ಯಜಮಾನಿಗೆ ತಿಂಗಳಿಗೆ 2 ಸಾವಿರ ರೂ. ನೀಡುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮೀ ಯೋಜನೆಗೆ ಜು.19 ರಂದು ಸಂಜೆ ಚಾಲನೆ ದೊರೆಯಲಿದ್ದು, ಜು.20 ರಿಂದ ಚಾಮರಾಜನಗರ ಜಿಲ್ಲೆಯಲ್ಲೂ ಯೋಜನೆಯಡಿ ಫಲಾನುಭವಿಗಳ ನೋಂದಣಿ ಪ್ರಕ್ರಿಯೆ ನಡೆಯಲಿದೆ.


    ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ವಿತರಿಸಿರುವ ಪಡಿತರ ಚೀಟಿಯಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಗೆ ಮಾತ್ರ ಗೃಹಲಕ್ಷ್ಮೀ ಯೋಜನೆ ಅನ್ವಯವಾಗುತ್ತದೆ. ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ ಯೋಜನೆಗೆ ಅರ್ಹರಾಗುವುದಿಲ್ಲ. ಅಲ್ಲದೆ, ಜಿಎಸ್‌ಟಿ ರಿಟರ್ನ್ಸ್ ಸಲ್ಲಿಸುವವರಾಗಿದ್ದಲ್ಲಿಯೂ ಈ ಯೋಜನೆಗೆ ಅರ್ಹರಾಗುವುದಿಲ್ಲ.


    ಯೋಜನೆಗೆ ನೋಂದಾಯಿಸಲು ಪಡಿತರ ಚೀಟಿಯ ಸಂಖ್ಯೆ, ಯಜಮಾನಿ ಹಾಗೂ ಯಜಮಾನಿ ಪತಿಯ ಆಧಾರ್ ಕಾರ್ಡ್ ಸಂಖ್ಯೆ, ಯಜಮಾನಿ ಆಧಾರ್‌ಗೆ ಜೋಡಣೆಯಾಗಿರುವ ಬ್ಯಾಂಕ್ ಖಾತೆಯ ಪಾಸ್‌ಬುಕ್ ಅಥವಾ ಫಲಾನುಭವಿ ಇಚ್ಛಿಸುವ ಪರ್ಯಾಯ ಬ್ಯಾಂಕ್ ಖಾತೆಯ ವಿವರ ದಾಖಲೆಗಳನ್ನು ನೀಡಬೇಕು.


    ಫಲಾನುಭವಿಗಳು ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಹಾಗೂ ಬಾಪೂಜಿ ಸೇವಾ ಕೇಂದ್ರದ ಮೂಲಕ ಸೇವಾ ಸಿಂಧು ಪೋರ್ಟಲ್‌ನಲ್ಲಿ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು. ಈ ಕೇಂದ್ರಗಳಲ್ಲದೆ ಪ್ರಜಾಪ್ರತಿನಿಧಿ ಮೂಲಕವೂ ಸೇವಾ ಸಿಂಧು ಪೋರ್ಟಲ್‌ನಲ್ಲಿ ಉಚಿತವಾಗಿ ನೋಂದಾಯಿಸಿಕೊಳ್ಳಬಹುದಾಗಿದೆ.


    ಪ್ರತಿ ದಿನ ಅರ್ಹ ಫಲಾನುಭವಿಗಳಿಗೆ (ಬೆಳಗ್ಗೆ 30 ಮತ್ತು ಮಧ್ಯಾಹ್ನ 30 ಜನರಿಗೆ ಮಾತ್ರ) ಸಮಯ ಹಾಗೂ ನೋಂದಣಿ ಕೇಂದ್ರದ ವಿವರಗಳು ಮೊಬೈಲ್ ಸಂದೇಶದ ಮೂಲಕ ಸ್ವೀಕೃತವಾಗಲಿವೆ. ಸದರಿ ಸಂದೇಶ ಸ್ವೀಕೃತಗೊಂಡ ಫಲಾನುಭವಿಗಳು ಮಾತ್ರ ಸಂದೇಶದಲ್ಲಿ ವಿವರಿಸಿದ ಸೇವಾ ಕೇಂದ್ರಕ್ಕೆ ನಿಗದಿಪಡಿಸಿದ ಸಮಯಕ್ಕೆ ಹಾಜರಾಗಿ ಅರ್ಜಿ ಸಲ್ಲಿಸಬಹುದಾಗಿದೆ.


    ಪ್ರತಿ ಫಲಾನುಭವಿಯ ನೋಂದಣಿಗೆ ನಿಗದಿ ಮಾಡಿರುವ ದಿನಾಂಕ, ಸಮಯ ಮತ್ತು ಸ್ಥಳವನ್ನು 1902 ಸಂಖ್ಯೆಗೆ ಕರೆ ಮಾಡಿ ಅಥವಾ 8147500500 ನಂಬರ್‌ಗೆ ಎಸ್.ಎಂ.ಎಸ್. ಮೂಲಕ ಸಂದೇಶ ಕಳುಹಿಸಿಯೂ ಮಾಹಿತಿ ಪಡೆಯಬಹುದಾಗಿದೆ.


    ನಿಗದಿತ ಸಮಯಕ್ಕೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗದೆ ಇದ್ದಲ್ಲಿ ಅದೇ ಕೇಂದ್ರಕ್ಕೆ ಮುಂದಿನ ಯಾವುದೇ ದಿನಗಳಲ್ಲಿ ಕಚೇರಿ ಸಮಯದ ನಂತರ ಅಂದರೆ ಸಂಜೆ 5 ಗಂಟೆಯ ಬಳಿಕ ತೆರಳಿ ನೋಂದಾಯಿಸಿಕೊಳ್ಳಬಹುದು. ಅನುಮೋದಿಸಲ್ಪಟ್ಟ ಅರ್ಹ ಫಲಾನುಭವಿಗಳಿಗೆ ಮಂಜೂರಾತಿ ಪತ್ರವನ್ನು ನೀಡಲಾಗುವುದು. ಯೋಜನೆಯಡಿ ನೋಂದಾಯಿಸುವ ಫಲಾನುಭವಿ ಯಾವುದೇ ಶುಲ್ಕವನ್ನು ಪಾವತಿಸಬೇಕಿಲ್ಲ. ಗೃಹಲಕ್ಷ್ಮೀ ಯೋಜನೆಯಡಿ ನೋಂದಾಯಿಸಿಕೊಳ್ಳಲು ಯಾವುದೇ ಅಂತಿಮ ದಿನಾಂಕ ಮತ್ತು ಸಮಯ ನಿಗದಿಪಡಿಸಿರುವುದಿಲ್ಲ.


    ಫಲಾನುಭವಿಗಳಿಗೆ ನೆರವು ಹಾಗೂ ಮಾಹಿತಿಗಾಗಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಸಹಾಯವಾಣಿ ತೆರೆಯಲಾಗಿದೆ. ಜಿಲ್ಲಾ ಸಹಾಯವಾಣಿ ಸಂಖ್ಯೆ 08226-223160 ಆಗಿದೆ. ಚಾಮರಾಜನಗರ ತಾಲೂಕು 08226-200254, ಗುಂಡ್ಲುಪೇಟೆ ತಾಲೂಕು 08229-222225, ಯಳಂದೂರು ತಾಲೂಕು 08226-240029, ಕೊಳ್ಳೇಗಾಲ ತಾಲೂಕು 08224-252042, ಹನೂರು ತಾಲೂಕು 08224-268032 ಸಹಾಯವಾಣಿ ಸಂಖ್ಯೆಯಾಗಿದೆ.


    ಚಾಮರಾಜನಗರ ಜಿಲ್ಲೆಯಲ್ಲಿ ನೋಂದಣಿಗಾಗಿ 115 ಗ್ರಾಮ ಒನ್, 130 ಬಾಪೂಜಿ ಸೇವಾ ಕೇಂದ್ರ, 7 ಕರ್ನಾಟಕ ಒನ್, ಸ್ಥಳೀಯ ಸಂಸ್ಥೆಗಳು ಪಟ್ಟಣಗಳಲ್ಲಿ ತೆರೆದಿರುವ 18 ಕೇಂದ್ರಗಳು ಸೇರಿದಂತೆ ಒಟ್ಟು 270 ಸೇವಾ ಕೇಂದ್ರಗಳಿವೆ.


    ಚಾಮರಾಜನಗರ ತಾಲೂಕು ವ್ಯಾಪ್ತಿಯಲ್ಲಿ 40 ಗ್ರಾಮಒನ್, 43 ಬಾಪೂಜಿ ಸೇವಾ ಕೇಂದ್ರ, 2 ಕರ್ನಾಟಕ ಒನ್, ನಗರ ಸ್ಥಳೀಯ ಸಂಸ್ಥೆಗಳು ಪಟ್ಟಣದಲ್ಲಿ ತೆರೆದಿರುವ 6 ಕೇಂದ್ರಗಳು ಸೇರಿ ಒಟ್ಟಾರೆ 91 ಸೇವಾ ಕೇಂದ್ರಗಳಿವೆ. ಗುಂಡ್ಲುಪೇಟೆ ತಾಲೂಕು ವ್ಯಾಪ್ತಿಯಲ್ಲಿ 24 ಗ್ರಾಮ ಒನ್, 34 ಬಾಪೂಜಿ ಸೇವಾ ಕೇಂದ್ರ, 2 ಕರ್ನಾಟಕ ಒನ್, ನಗರ ಸ್ಥಳೀಯ ಸಂಸ್ಥೆಗಳು ಪಟ್ಟಣದಲ್ಲಿ ತೆರೆದಿರುವ 3 ಕೇಂದ್ರಗಳು ಸೇರಿ ಒಟ್ಟಾರೆ 63 ಸೇವಾ ಕೇಂದ್ರಗಳಿವೆ.

    ಕೊಳ್ಳೇಗಾಲ ತಾಲೂಕು ವ್ಯಾಪ್ತಿಯಲ್ಲಿ 16 ಗ್ರಾಮ ಒನ್, 16 ಬಾಪೂಜಿ ಸೇವಾ ಕೇಂದ್ರ, 2 ಕರ್ನಾಟಕ ಒನ್, ನಗರ ಸ್ಥಳೀಯ ಸಂಸ್ಥೆಗಳು ಪಟ್ಟಣದಲ್ಲಿ ತೆರೆದಿರುವ 5 ಕೇಂದ್ರಗಳು ಸೇರಿ ಒಟ್ಟಾರೆ 39 ಸೇವಾ ಕೇಂದ್ರಗಳಿವೆ. ಹನೂರು ತಾಲೂಕು ವ್ಯಾಪ್ತಿಯಲ್ಲಿ 28 ಗ್ರಾಮ ಒನ್, 25 ಬಾಪೂಜಿ ಸೇವಾ ಕೇಂದ್ರ, ನಗರ ಸ್ಥಳೀಯ ಸಂಸ್ಥೆಗಳು ಪಟ್ಟಣದಲ್ಲಿ ತೆರೆದಿರುವ 2 ಕೇಂದ್ರಗಳು ಸೇರಿ ಒಟ್ಟಾರೆ 55 ಸೇವಾ ಕೇಂದ್ರಗಳಿವೆ. ಯಳಂದೂರು ತಾಲೂಕು ವ್ಯಾಪ್ತಿಯಲ್ಲಿ 7 ಗ್ರಾಮ ಒನ್, 12 ಬಾಪೂಜಿ ಸೇವಾ ಕೇಂದ್ರ, 1 ಕರ್ನಾಟಕ ಒನ್, ನಗರ ಸ್ಥಳೀಯ ಸಂಸ್ಥೆಗಳು ಪಟ್ಟಣದಲ್ಲಿ ತೆರೆದಿರುವ 2 ಕೇಂದ್ರಗಳು ಸೇರಿ ಒಟ್ಟಾರೆ 22 ಸೇವಾ ಕೇಂದ್ರಗಳಿವೆ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts