More

    ಗುತ್ತಲದ ವಿವಿಧೆಡೆ ಕಾಡಾನೆ ಓಡಾಟ

    ಗುತ್ತಲ: ಕಾಡಾನೆಯೊಂದು ಗುತ್ತಲ ಪಟ್ಟಣದ ವಿವಿಧೆಡೆ ಮಂಗಳವಾರ ತಡರಾತ್ರಿ ಸಂಚರಿಸಿದ್ದು ಬೆಳೆ ಹಾನಿಮಾಡಿದೆ. ಹೀಗಾಗಿ ರೈತರು ಜಮೀನುಗಳಿಗೆ ಹೋಗಲು ಹಿಂಜರಿಯುವಂತಾಗಿದೆ.
    ಮಂಗಳವಾರ ಕನವಳ್ಳಿ ಭಾಗದಲ್ಲಿ ಸಂಚರಿಸಿದ್ದ ಕಾಡಾನೆ ನಂತರ ಗುತ್ತಲ ಪಟ್ಟಣಕ್ಕೆ ಹೊಂದಿಕೊಂಡ ಜಮೀನುಗಳಲ್ಲಿ ಓಡಾಡಿದೆ. ಬುಧವಾರ ಬೆಳಗ್ಗೆ ಜಮೀನಿಗೆ ತೆರಳಿತ ರೈತರು ಆನೆಯ ಹೆಜ್ಜೆ ಗುರುತುಗಳನ್ನು ನೋಡಿ ಆತಂಕಗೊಂಡಿದ್ದಾರೆ. ಆನೆಯು ಪಟ್ಟಣದ ಯಲ್ಲಮ್ಮನ ಕೆರೆಯ ಸುತ್ತಲಿನ ಜಮೀನುಗಳಲ್ಲಿ ಕಬ್ಬಿನ ಜಮೀನುಗಳಲ್ಲಿ ಹೆಚ್ಚಾಗಿ ಓಡಾಡಿದೆ. ಎಲೆ ಬಳ್ಳಿಯ ತೋಟದ ಒಳಗೂ ಸಂಚರಿಸಿ ಹಾನಿ ಮಾಡಿದೆ.
    ಯಲ್ಲಮ್ಮನ ಕೆರೆಯ ಸುತ್ತ ಹಾಗೂ ಐತಿಹಾಸಿಕ ದೊಡ್ಡ ಕೆರೆಯ ಸುತ್ತ ಮುತ್ತ ಸಂಚರಿಸಿರುವುದನ್ನು ಗಮನಿಸಿದರೆ ಅದು ನೀರಿಗಾಗಿ ಬಂದಿರುವ ಶಂಕೆ ವ್ಯಕ್ತವಾಗಿದೆ. ಬ್ಯಾಡಗಿ ತಾಲೂಕಿನ ಭಾಗದಿಂದ ಆಗಮಿಸಿರುವ ಕಾಡಾನೆ ಸೋಮವಾರ-ಮಂಗಳವಾರ ಕಳ್ಳಿಹಾಳ, ಕಾಟೇನಹಳ್ಳಿ, ಕನವಳ್ಳಿ ಗ್ರಾಮಗಳ ಜಮೀನುಗಳಲ್ಲಿ ಸಂಚರಿಸಿ ನಂತರ ಗುತ್ತಲ ಭಾಗಕ್ಕೆ ಬಂದಿದೆ. ಹೆಜ್ಜೆ ಗುರುತುಗಳನ್ನು ಗಮನಿಸಿದರೆ ಅದು ಮಧ್ಯ ವಯಸ್ಕ ಕಾಡಾನೆಯಾಗಿದ್ದು ಹಿಂಡಿನಿಂದ ತಪ್ಪಿಸಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಅಲ್ಲದೆ, ಎಲ್ಲಿಯೂ ಹೆಚ್ಚು ಹಾನಿ ಮಾಡಿಲ್ಲ. ಜಮೀನುಗಳಲ್ಲಿನ ಕೊಳವೆಬಾವಿಗಳ ವಿದ್ಯುತ್ ವಯರ್​ಗಳನ್ನು ದಾಟಿ ಎಲ್ಲೆಡೆ ಓಡಾಡಿದೆ.
    ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ರೈತರಿಂದ ಮಾಹಿತಿ ಪಡೆಯಿತು. ಹೆಜ್ಜೆ ಗುರುತುಗಳನ್ನು ಅನುಸರಿಸಿ ಆನೆಯನ್ನು ಪತ್ತೆ ಮಾಡುವಲ್ಲಿ ನಿರತರಾಗಿದ್ದಾರೆ. ಡಿಆರ್​ಒಎಫ್ ಎ.ಎಸ್ ಹುಬ್ಬಳ್ಳಿ, ಅರಣ್ಯ ರಕ್ಷಕ ಎಂ.ಪಿ. ಭಜಂತ್ರಿ, ಕಾವಲುಗಾರರಾದ ಸಿದ್ದು ಹಿರೇಮಠ, ಲಕ್ಕಪ್ಪ ಲಮಾಣಿ, ಗಣೇಶ ಲಮಾಣಿ ಪತ್ತೆ ಕಾರ್ಯದಲ್ಲಿ ನಿರತರಾಗಿದ್ದರು.

    ಗುತ್ತಲ ಭಾಗದಲ್ಲಿ ಕಾಡಾನೆ ಆಗಮಿಸಿರುವ ಕುರಿತು ಮಾಹಿತಿ ಬಂದಿದೆ. ನಮ್ಮ ಸಿಬ್ಬಂದಿಯನ್ನು ಅಲ್ಲಿಗೆ ಕಳುಹಿಸಲಾಗಿದೆ. ವನ್ಯ ಜೀವಿಗಳ ಗಣತಿಯಲ್ಲಿರುವ ತೊಡಗಿರುವ ಸಿಬ್ಬಂದಿಯನ್ನು ಮಧ್ಯಾಹ್ನದ ನಂತರ ಕಳುಹಿಸಿ ಆನೆ ಪತ್ತೆಗೆ ಯತ್ನಿಸಲಾಗುತ್ತದೆ.
    | ರಾಮಪ್ಪ ಪೂಜಾರ, ಆರ್​ಎಫ್​ಒ, ಪ್ರಾದೇಶಿಕ ಅರಣ್ಯ ಇಲಾಖೆ, ಹಾವೇರಿ

    ನಮ್ಮ ಜಮೀನಿನಲ್ಲಿ ಆನೆ ಓಡಾಡಿದೆ. ಹೆಜ್ಜೆ ಗುರುತುಗಳು ಸ್ಪಷ್ಟವಾಗಿ ಕಾಣುತ್ತವೆ. ಅರಣ್ಯ ಇಲಾಖೆಯ ಅಧಿಕಾರಿಗಳು ಶೀಘ್ರವೇ ಆನೆಯನ್ನು ಪತ್ತೆ ಮಾಡಬೇಕು. ಬೆಳೆಗಳಿಗೆ ನಿತ್ಯ ನೀರುಣಿಸಬೇಕಿರುವುದರಿಂದ ರಾತ್ರಿಯೂ ಜಮೀನಿಗೆ ಬರಬೇಕಾದ ಅನಿವಾರ್ಯತೆ ಇದೆ. ಇಂತಹ ಸಮಯದಲ್ಲಿ ಆನೆ ದಾಳಿ ಮಾಡಿದರೆ ಹೇಗೆ? ಎಂಬ ಭಯ ರೈತರನ್ನು ಕಾಡುತ್ತಿದೆ.
    | ಅಶೋಕ ಲೆಕ್ಕಣ್ಣನವರ, ರೈತ, ಗುತ್ತಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts