More

    ಗಣೇಶ ವಿಗ್ರಹ ತಯಾರಕರಿಗೆ ಸಂಕಷ್ಟ

    ರಾಣೆಬೆನ್ನೂರ: ಕರೊನಾ ಮೂರನೇ ಅಲೆ ಭೀತಿ ಹಿನ್ನೆಲೆಯಲ್ಲಿ ಸಾರ್ವಜನಿಕ ಗಣೇಶ ಮೂರ್ತಿ ಸ್ಥಾಪನೆಯನ್ನು ಸರ್ಕಾರ ನಿಷೇಧಿಸಿದ ಹಿನ್ನೆಲೆಯಲ್ಲಿ ಗಣಪತಿ ಮೂರ್ತಿ ಮಾಡುವ ಕಲಾವಿದರು ಕಂಗಾಲಾಗಿದ್ದಾರೆ.

    ನಗರದಲ್ಲಿ ರಾಣೆಬೆನ್ನೂರ ಕಾ ರಾಜಾ ಗಣಪತಿ ಸೇರಿ 100ಕ್ಕೂ ಅಧಿಕ ಬಡಾವಣೆಗಳಲ್ಲಿ ಹಾಗೂ ತಾಲೂಕಿನ ವಿವಿಧ ಗ್ರಾಮಗಳಲ್ಲಿ 1 ಸಾವಿರಕ್ಕೂ ಹೆಚ್ಚು ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿತ್ತು. ಸ್ಥಳೀಯ ವಿವಿಧ ಸಂಘಟನೆಗಳು ಸ್ಥಳೀಯವಾಗಿಯೇ ಮೂರ್ತಿಗಳನ್ನು ಖರೀದಿಸುತ್ತಿದ್ದರು.

    ಆದರೀಗ ಸರ್ಕಾರ ಸಾರ್ವಜನಿಕ ಗಣಪತಿ ಮೂರ್ತಿ ಪ್ರತಿಷ್ಠಾಪನೆಗೆ ಬ್ರೇಕ್ ಹಾಕಿದೆ. ಇದರಿಂದಾಗಿ ಕಲಾವಿದರಿಗೆ ಯಾರೊಬ್ಬರು ದೊಡ್ಡ ಮೂರ್ತಿ ತಯಾರಿಕೆಗೆ ಬೇಡಿಕೆ ಇಟ್ಟಿಲ್ಲ. ದೇವಸ್ಥಾನ, ಮನೆಗಳಲ್ಲಿ ಪ್ರತಿಷ್ಠಾಪಿಸಲು ಚಿಕ್ಕ ಮೂರ್ತಿಗಳನ್ನು ಮಾತ್ರ ಮಾಡಿಕೊಡುವಂತೆ ತಿಳಿಸಿದ್ದಾರೆ.

    ಆದಾಯಕ್ಕೆ ಕೊಕ್ಕೆ: ನಗರದ ಕುರುಬಗೇರಿ, ಮಾರುತಿ ನಗರ, ಕುಂಬಾರ ಓಣಿಯಲ್ಲಿ ಗಣಪತಿ ತಯಾರಿಸುವ ಕುಟುಂಬಗಳಿವೆ. ಈಗಾಗಲೇ ಅವರು ಕೆರೆಗಳಿಂದ ಮಣ್ಣು ತಂದು ದೊಡ್ಡ ದೊಡ್ಡ ಮೂರ್ತಿ ತಯಾರಿಸಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಕರೊನಾ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಿಂದ ಅವರಿಗೆ ದಿಕ್ಕು ತೋಚದಂತಾಗಿದೆ.

    ದೊಡ್ಡ ಗಣಪತಿ ಮೂರ್ತಿ ತಯಾರಿಕೆಯಿಂದ ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಆದಾಯ ಬರುತ್ತಿತ್ತು. ಆದರೆ, ಕೋವಿಡ್​ನಿಂದಾಗಿ ಕಳೆದ ಎರಡು ವರ್ಷದಿಂದ ನಿರೀಕ್ಷಿತ ಆದಾಯ ಲಭಿಸುತ್ತಿಲ್ಲ. ಹೀಗಾಗಿ ಮೂರ್ತಿ ತಯಾರಿಕೆಯನ್ನೇ ನಂಬಿಕೊಂಡಿರುವ ನಮಗೆ ಆರ್ಥಿಕ ಸಂಕಷ್ಟದ ಸ್ಥಿತಿ ಎದುರಾಗಿದೆ ಎಂದು ಕಲಾವಿದರು ಅಳಲು ತೋಡಿಕೊಂಡಿದ್ದಾರೆ.

    ನಗರದ ಕಲಾವಿದರು, ಮನೆಗಳಲ್ಲಿ ಪ್ರತಿಷ್ಠಾಪಿಸುವ ಚಿಕ್ಕಪುಟ್ಟ ಗಣಪತಿ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. ಇವುಗಳಿಗೂ ಇನ್ನೂ ಯಾರಿಂದಲೂ ಬೇಡಿಕೆಯಿಲ್ಲ. ಕೊನೆಯ ಘಳಿಗೆಯಲ್ಲಾದರೂ ಬೇಡಿಕೆ ಬರಬಹುದು ಎಂಬ ಆಶಯದೊಂದಿಗೆ ತಯಾರಿಸಲಾಗುತ್ತಿದೆ ಎಂಬುದು ಕಲಾವಿದರ ಅಭಿಪ್ರಾಯ.

    ಗಣಪತಿ ಮೂರ್ತಿ ತಯಾರಿಕೆಯನ್ನೇ ನೆಚ್ಚಿಕೊಂಡು ವರ್ಷವಿಡೀ ದುಡಿಮೆ ಮಾಡುತ್ತೇವೆ. ಆದರೆ, ಕರೊನಾ ಹಿನ್ನೆಲೆಯಲ್ಲಿ ಕಳೆದ ವರ್ಷವೂ ದುಡಿಮೆ ಮಾಡಲಾಗಿಲ್ಲ. ಈ ವರ್ಷವೂ ಸರ್ಕಾರ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ ನಿಷೇಧಿಸಿದ ಕಾರಣ ಸಂಪೂರ್ಣ ದುಡಿಮೆ ಕಸಿದುಕೊಂಡಂತಾಗಿದೆ. ಆದರೆ, ಗಣಪತಿ ತಯಾರಿಸುವ ಕಲಾವಿದರಿಗೆ ಈವರೆಗೂ ಸರ್ಕಾರ ನಯಾಪೈಸೆ ಪರಿಹಾರ ನೀಡಿಲ್ಲ. ಇದನ್ನೇ ನಂಬಿಕೊಂಡವರು ಜೀವನ ಹೇಗೆ ಮಾಡಬೇಕು ?

    | ರಾಘವೇಂದ್ರ ತ್ರಾಸದ

    ಗಣಪತಿ ಮೂರ್ತಿ ತಯಾರಕ, ರಾಣೆಬೆನ್ನೂರ

    ರಾಜ್ಯ ಸರ್ಕಾರದ ಮಾರ್ಗಸೂಚಿ

    ಗಣೇಶ ಹಬ್ಬವನ್ನು ಸರಳವಾಗಿ ದೇವಸ್ಥಾನಗಳಲ್ಲಿ ಹಾಗೂ ಮನೆಗಳಲ್ಲಿ ಆಚರಿಸಬಹುದು. ಇದನ್ನು ಹೊರತುಪಡಿಸಿ ಸಾರ್ವಜನಿಕ ಸ್ಥಳಗಳಲ್ಲಿ, ಹೊರಾಂಗಣಗಳಲ್ಲಿ ಶಾಮಿಯಾನ, ಪೆಂಡಾಲ್ ಹಾಕಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವಂತಿಲ್ಲ. ಗಣೇಶ ಮೂರ್ತಿಗಳನ್ನು ತರುವಾಗ ಹಾಗೂ ವಿಸರ್ಜಿಸುವಾಗ ಯಾವುದೇ ಮೆರವಣಿಗೆ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ. ಮೂರ್ತಿಗಳನ್ನು ಸಾಧ್ಯವಾದಷ್ಟು ಮನೆಯಲ್ಲಿಯೇ ವಿಸರ್ಜಿಸಬೇಕು. ಇಲ್ಲವೇ ಮನೆಯ ಸಮೀಪದಲ್ಲಿನ ಮಾರ್ಗಗಳನ್ನು ಬಳಸಿಕೊಂಡು ನಗರಸಭೆ, ಮಾಲಿನ್ಯ ಇಲಾಖೆ ನಿರ್ವಿುಸಿರುವ ಕೃತಕ ಹೊಂಡಗಳು ಅಥವಾ ಮೊಬೈಲ್ ಟ್ಯಾಂಕ್​ಗಳಲ್ಲಿ ವಿಸರ್ಜಿಸಬೇಕು. ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ದೇವಸ್ಥಾನಗಳಲ್ಲಿ ನಿತ್ಯ ಸ್ಯಾನಿಟೈಸೇಶನ್ ಮಾಡಬೇಕು. ಥರ್ಮಲ್ ಸ್ಕ್ರೀನಿಂಗ್ ನಡೆಸಬೇಕು. ಪರಸ್ಪರ ಅಂತರ ಹಾಗೂ ಮಾಸ್ಕ್ ಕಡ್ಡಾಯವಾಗಿದೆ. ಕಾಲಕಾಲಕ್ಕೆ ಸ್ಥಳೀಯ ಆಡಳಿತಗಳು ಹೊರಡಿಸುವ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಸೂಚಿಸಲಾಗಿದೆ.

    ಗಣೇಶ ಚತುರ್ಥಿ ಆಚರಣೆ ಕುರಿತು ಸರ್ಕಾರದಿಂದ ಸ್ಪಷ್ಟ ಆದೇಶ ಹೊರಡಿಸಲಾಗಿದೆ. ಯಾವುದೇ ಕಾರಣಕ್ಕೂ ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ ಮಾಡುವಂತಿಲ್ಲ. ಸಂಘಟಕರು ತಮ್ಮ ಬಡಾವಣೆಯ ದೇವಸ್ಥಾನದಲ್ಲಿ ಅಥವಾ ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡಬಹುದು. ಅವುಗಳ ವಿಸರ್ಜನೆ ಸಮಯದಲ್ಲೂ ಮೆರವಣಿಗೆ ಮಾಡುವಂತಿಲ್ಲ. ಸರ್ಕಾರದ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.

    | ಶಂಕರ ಜಿ.ಎಸ್. ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts