More

    ಕಾಂಗ್ರೆಸ್ ಬಂದ ಮೇಲೆ ಆರ್ಥಿಕ ಸ್ಥಿತಿ ಅಯೋಮಯ; ಬಸವರಾಜ ಬೊಮ್ಮಾಯಿ

    ರಾಣೆಬೆನ್ನೂರ: ಬಿಜೆಪಿ ಅವಧಿಯಲ್ಲಿಯೇ ಕರ್ನಾಟಕ ಆರ್ಥಿಕವಾಗಿ ಸದೃಡ ಆಗಿದೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಕರ್ನಾಟಕದ ಆರ್ಥಿಕ ಸ್ಥಿತಿ ಅಯೋಮಯ ಆಗಿದೆ. ಖಜಾನೆಯೂ ಖಾಲಿಯಾಗಿದೆ. ಬರಗಾಲದಲ್ಲಿಯೂ ಸಹ ಇವರು ಹಣ ಬಿಡುಗಡೆ ಮಾಡುವ ಪರಿಸ್ಥಿತಿಯಲ್ಲಿ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
    ತಾಲೂಕಿನ ಮಾಕನೂರ ಕ್ರಾಸ್ ಬಳಿ ಇಟ್ಟಿಗೆ ಭಟ್ಟಿಯವರು, ನಗರದ ಔಷಧ ವ್ಯಾಪಾರಸ್ಥರು ಹಾಗೂ ವಿವಿಧ ಸಂಘ ಸಂಸ್ಥೆಯವರೊಂದಿಗೆ ಗುರುವಾರ ಸಭೆ ನಡೆಸಿ ಮಾತನಾಡಿದ ಅವರು, ಬಿಜೆಪಿ ಅಂದರೆ ಭಾವನೆ, ಕಾಂಗ್ರೆಸ್ ಅಂದರೆ ಬದುಕು ಎಂಬ ಸಚಿವ ಎಚ್.ಕೆ. ಪಾಟೀಲ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ ಬೊಮ್ಮಾಯಿ, ಅವರ ಹೇಳಿದ್ದಕ್ಕೆಲ್ಲ ಉತ್ತರ ಕೊಡುವ ಅಗತ್ಯ ಇಲ್ಲ. ಜನರಿಗೆ ಗೊತ್ತಿದೆ ಯಾವುದು ಬದುಕು ಯಾವುದು ಭಾವನೆ ಅಂತ ಎಂದು ಹೇಳಿದರು.
    ರಾಜ್ಯದಲ್ಲಿ ನೀರಾವರಿ ವ್ಯವಸ್ಥೆ ದೊಡ್ಡ ಪ್ರಮಾಣದಲ್ಲಿ ಆಗಿರುವುದು ಬಿಜೆಪಿ ಕಾಲದಲ್ಲಿ, ತುಳಿತಕ್ಕೆ ಒಳಗಾಗಿರುವವರಿಗಾಗಿ ವಿಶೇಷ ಕಾರ್ಯಕ್ರಮ ಮಾಡಿದ್ದು ಯಡಿಯೂರಪ್ಪನವರು. ಸಾಮಾಜಿಕ ನ್ಯಾಯ ಆರ್ಥಿಕ ಬೆಳವಣಿಗೆ ಇವೆರಡೂ ಬದುಕಿಗೆ ಸಂಬಂಧ ಪಟ್ಟವುಗಳು. ಕಾಂಗ್ರೆಸ್‌ನವರು ಬರಗಾಲದಲ್ಲಿ ಕುಡಿಯುವ ನೀರಿಗೆ ನಯಾಪೈಸೆ ಬಿಡುಗಡೆ ಮಾಡಿಲ್ಲ. ಬರಿ ಹೇಳಿಕೆಗಳ ಮೂಲಕ ಮೀಟಿಂಗ್‌ಗಳ ಮೂಲಕ ಬರಗಾಲ ನೀಗಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
    ರಾಜ್ಯ ಬಿಜೆಪಿ ಶುದ್ದೀಕರಣ ಮಾಡುತ್ತೇನೆ ಎಂಬ ಮಾಜಿ ಸಿಎಂ ಸದಾನಂದಗೌಡ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸದಾನಂದಗೌಡರು ಹಿರಿಯರಿದ್ದಾರೆ. ಅವರು ಅವರದೇ ಆದ ನಿಲುವು ತೆಗೆದುಕೊಂಡಿದ್ದಾರೆ. ಅವರಿಗೆ ಪಕ್ಷದ ಮೇಲಿನ ಬದ್ದತೆ ಹಾಗೂ ಅಭಿಮಾನ ಎಂದೂ ಕಡಿಮೆ ಆಗುವುದಿಲ್ಲ ಎಂದರು.
    ತಂದೆ ಮಕ್ಕಳಿಂದ ಬಿಜೆಪಿ ಉಳಿಸುತ್ತೇವೆ ಎಂಬ ಈಶ್ವರಪ್ಪ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಈಶ್ವರಪ್ಪನವರು ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಕೆಲವೇ ದಿನಗಳಲ್ಲಿ ನಮ್ಮ ವರಿಷ್ಟರು ಗಂಭೀರವಾಗಿ ಅವರೊಂದಿಗೆ ಮಾತನಾಡುತ್ತಾರೆ. ಇನ್ನೂ ಎರಡ್ಮೂರು ದಿನದಲ್ಲಿ ಸರಿಯಾಗುತ್ತದೆ. ಒಬ್ಬೊಬ್ಬರನ್ನಾಗಿ ನಾಯಕರು ಮಾತಾಡಿಸುವ ಪ್ರಯತ್ನ ನಡೆದಿದೆ. ಟಿಕೆಟ್ ಸಿಗದ ಕಾರಣ ಬೇಸರವಾಗಿದೆ ಎಂದರು.
    ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ, ನಗರಸಭೆ ಸದಸ್ಯರಾದ ಮಲ್ಲಣ್ಣ ಅಂಗಡಿ, ಪ್ರಕಾಶ ಪೂಜಾರ, ಪ್ರಮುಖರಾದ ಪರಮೇಶಣ್ಣ ಗೂಳಣ್ಣನವರ, ದೀಪಕ ಹರಪನಹಳ್ಳಿ ಮತ್ತಿತರರು ಪಾಲ್ಗೊಂಡಿದ್ದರು.
    ಬಾಕ್ಸ್…
    ಶಿವಾನಂದ ಹೇಳಿಕೆಗೆ ತಿರುಗೇಟು…
    ಬಸವರಾಜ ಬೊಮ್ಮಾಯಿ ಏಕಾಂಗಿಯಾಗಿ ಚುನಾವಣೆ ಎದುರಿಸುತ್ತಿದ್ದಾರೆ ಎಂಬ ಸಚಿವ ಶಿವಾನಂದ ಪಾಟೀಲ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ಚುನಾವಣೆ ಬಂದರೂ ಏಕಾಂಗಿಯಾಗೇ ಇರುತ್ತೇನೆ. ನಾನೊಬ್ಬನೇ ಸಾಕು ಎಂದು ತಿರುಗೇಟು ನೀಡಿದರು. ಬುಧವಾರ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಹಾಲ್‌ಗಿಂತ ಸ್ಟೇಜ್ ಮೇಲೆನೇ ಜನ ಜಾಸ್ತಿ ಇದ್ದರು. ಕಾಂಗ್ರೆಸ್ ನಾಯಕರು ಸ್ಟೇಜ್ ಮೇಲೆ ಒಗ್ಗಟ್ಟು ಪ್ರದರ್ಶನ ಮಾಡುವ ಪರಿಸ್ಥಿತಿ ಬಂತು. ಆದರೆ, ನಿಜವಾಗಿಯೂ ಅವರಲ್ಲಿ ಒಗ್ಗಟ್ಟಿಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts