More

    ಗಂಗಾವತಿ-ಅಂಜನಾದ್ರಿಗೆ ಕೇಬಲ್ ಕಾರ್: ಪ್ರವಾಸೋದ್ಯಮ ಇಲಾಖೆಗೆ ಜಿಲ್ಲಾಡಳಿತದಿಂದ ಪ್ರಸ್ತಾವನೆ ಸಲ್ಲಿಕೆ

    ಕೊಪ್ಪಳ: ಹನುಮನ ಜನ್ಮ ಸ್ಥಳ ಗಂಗಾವತಿ ತಾಲೂಕಿನ ಅಂಜನಾದ್ರಿ ಅಭಿವೃದ್ಧಿಗೆ ಸರ್ಕಾರ ಚಾಲನೆ ನೀಡಿದೆ. ಈ ನಡುವೆ ಸಾರಿಗೆ ಸಂಪರ್ಕ ಬೆಳವಣಿಗೆ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗಂಗಾವತಿ ರೈಲ್ವೆ ನಿಲ್ದಾಣದಿಂದ ಅಂಜನಾದ್ರಿ ಬೆಟ್ಟಕ್ಕೆ ಕೇಬಲ್ ಕಾರ್ ಸಂಪರ್ಕ ಕಲ್ಪಿಸಲು ಜಿಲ್ಲಾಡಳಿತ ಪ್ರವಾಸೋದ್ಯಮ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ.

    ದಿನ ಕಳೆದಂತೆ ಅಂಜನಾದ್ರಿ ಬೆಟ್ಟದ ಕೀರ್ತಿ ದೇಶ-ವಿದೇಶಗಳಿಗೆ ಹಬ್ಬುತ್ತಿದೆ. ಈ ನಿಟ್ಟಿನಲ್ಲಿ ಕ್ಷೇತ್ರ ಅಭಿವೃದ್ಧಿಗೆ ಸರ್ಕಾರ ಆಸಕ್ತಿ ತೋರಿದ್ದು, ಭೂ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಿದೆ. ಮತ್ತೊಂದೆಡೆ ಬೆಟ್ಟ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗಾಗಿ ಎರಡು ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಒಂದು ಅನುಷ್ಠಾನ ಮಾಡುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಕಾರ್ಯ ಆರಂಭಿಕ ಹಂತದಲ್ಲಿದ್ದು, ಲೋಹದ ಹಕ್ಕಿ ಹಾರಾಟಕ್ಕೆ ಇನ್ನಷ್ಟು ವರ್ಷಗಳು ಹಿಡಿಯಲಿವೆ. ಪ್ರವಾಸೋದ್ಯಮ ರಂಗ ಬೆಳವಣಿಗೆಗೆ ಸದ್ಯ ರಸ್ತೆ ಸಂಪರ್ಕ ಮಾತ್ರ ಎಂಬಂತಾಗಿದೆ.

    ರೈಲುಗಳ ಓಡಾಟವಿದ್ದರೂ ಅಂಜನಾದ್ರಿಗೆ ಸಂಪರ್ಕ ಕಲ್ಪಿಸಿಲ್ಲ. ಅಯೋಧ್ಯೆ-ಅಂಜನಾದ್ರಿ ರೈಲ್ವೆ ನಿರ್ಮಾಣಕ್ಕೆ ಕೇಂದ್ರಕ್ಕೆ ಮನವಿ ಸಲ್ಲಿಕೆಯಾಗಿದೆ. ಗಂಗಾವತಿ ನಗರದಿಂದ ಅಂಜನಾದ್ರಿ 14 ಕಿಮೀ ದೂರವಿದೆ. ಗಂಗಾವತಿವರೆಗೆ ರೈಲ್ವೆ ಸಂಪರ್ಕವಿದ್ದು, ಹುಬ್ಬಳ್ಳಿ, ಬೆಂಗಳೂರುವರೆಗೆ ರೈಲು ಓಡಾಡುತ್ತಿವೆ. ಹೀಗಾಗಿ ಗಂಗಾವತಿ ರೈಲ್ವೆ ನಿಲ್ದಾಣದಿಂದ ಅಂಜನಾದ್ರಿವರೆಗೆ ಕೇಬಲ್ ಕಾರ್ ಸೌಲಭ್ಯ ಕಲ್ಪಿಸಿದಲ್ಲಿ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲಿದೆ. ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಕೊಪ್ಪಳ ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿದ್ದು, ಸ್ಪಂದಿಸುವ ಭರವಸೆಯಿಂದ ಜಿಲ್ಲಾಡಳಿತ ಕೇಬಲ್ ಕಾರ್ ಸಂಪರ್ಕ ಯೋಜನೆ ಜಾರಿ ಕೋರಿ ಪ್ರಸ್ತಾವನೆ ಸಲ್ಲಿಸಿದೆ. ಅಲ್ಲಿಂದ ಮುಂದೆ ಹಂಪಿಗೂ ಸಂಪರ್ಕ ನೀಡಿದಲ್ಲಿ ಈ ಭಾಗದ ಪ್ರವಾಸೋದ್ಯಮಕ್ಕೆ ಪೂರಕವಾಗಲಿದೆ ಎಂದು ಲೆಕ್ಕಾಚಾರ ಹಾಕಲಾಗಿದೆ. ಸಂಸದ ಸಂಗಣ್ಣ ಕರಡಿ ಯೋಜನೆಗೆ ಉತ್ಸುಕರಾಗಿದ್ದು, ಕೇಂದ್ರಕ್ಕೂ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿ ಅನುದಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

    ಗಂಗಾವತಿ ರೈಲ್ವೆ ನಿಲ್ದಾಣದಿಂದ ಅಂಜನಾದ್ರಿವರೆಗೆ ಕೇಬಲ್ ಕಾರ್ ಸಂಪರ್ಕ ಕಲ್ಪಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದೊಂದು ಮಾದರಿ ಯೋಜನೆ ಆಗಲಿದೆ. ಅಂಜನಾದ್ರಿ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ.

    | ಸಂಗಣ್ಣ ಕರಡಿ ಸಂಸದ, ಕೊಪ್ಪಳ

    ಗಂಗಾವತಿ ರೈಲ್ವೆ ನಿಲ್ದಾಣದಿಂದ ಅಂಜನಾದ್ರಿ ಬೆಟ್ಟದವರೆಗೆ ಕೇಬಲ್ ಕಾರ್ ನಿರ್ಮಾಣಕ್ಕೆ ಪ್ರವಾಸೋದ್ಯಮ ಇಲಾಖೆಗೆ ಜಿಲ್ಲಾಡಳಿತದಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆ ದೊರೆತಲ್ಲಿ ಅಂಜನಾದ್ರಿಗೆ ಅಭಿವೃದ್ಧಿಗೆ ಸಹಕಾರಿಯಾಗಲಿದೆ.
    | ಎಂ.ಸುಂದರೇಶ ಬಾಬು ಕೊಪ್ಪಳ ಡಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts