More

    ಕೊನೆಗೂ ಆಸ್ತಿ ವಾರಸಾ ಪಡೆದ ವಿಧವೆ

    ಹುಬ್ಬಳ್ಳಿ: ಪತಿ ಮೃತಪಟ್ಟ ನಂತರ ಆಸ್ತಿ ವಾರಸಾಕ್ಕಾಗಿ ಕಳೆದ 2 ವರ್ಷಗಳಿಂದ ನಗರ ಮೋಜಣಿ ಕಚೇರಿಗೆ ಅಲೆದಾಡುತ್ತಿದ್ದ ವಿಧವೆಯೊಬ್ಬರ ಹೆಸರು ಆಸ್ತಿ ದಾಖಲೆಯಲ್ಲಿ ಕೊನೆಗೂ ನೋಂದಣಿಯಾಗಿದೆ.

    ದೇಶಪಾಂಡೆ ನಗರದ ದಸರಾ ಅಪಾರ್ಟ್​ವೆುಂಟ್​ನಲ್ಲಿ ವಾಸವಿರುವ ಸೀತಾಲಕ್ಷ್ಮೀ ಗುರು ರಾಜ ಕುಲಕರ್ಣಿ ಅವರು ಆಸ್ತಿ ವಾರಸಾಕ್ಕಾಗಿ ಪಡುತ್ತಿದ್ದ ತೊಂದರೆ ಕುರಿತು ‘ಆಸ್ತಿ ವಾರಸಾಕ್ಕಾಗಿ ತಬರನಂತಾದ ವಿಧವೆ’ ಶೀರ್ಷಿಕೆಯಡಿ ‘ವಿಜಯವಾಣಿ’ ಬುಧವಾರ ವಿಶೇಷ ವರದಿ ಪ್ರಕಟಿಸಿತ್ತು.

    ವರದಿಯಿಂದ ಎಚ್ಚೆತ್ತ ನಗರ ಮೋಜಣಿ ಕಚೇರಿ ಅಧಿಕಾರಿಗಳು, ಸೀತಾಲಕ್ಷ್ಮೀ ಕುಲಕರ್ಣಿ ಹಾಗೂ ಆತನ ಮಗನ ಹೆಸರಿನಲ್ಲಿ ಬುಧವಾರವೇ ವಾರಸಾ ಸಿದ್ಧಪಡಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿದ ನಗರ ಮೋಜಣಿ ಕಚೇರಿಯ ಭೂ ದಾಖಲೆಗಳ ಸಹಾಯಕ ನಿರ್ದೇಶಕ ಎಂ.ಜಿ. ಖಂಡಾಟೆ, ‘ಕುಲಕರ್ಣಿಯವರ ವಾರಸಾ ಸಿದ್ಧವಾಗಿದೆ. ಅವರು ಕಚೇರಿಗೆ ಬಂದು ತೆಗೆದುಕೊಂಡು ಹೋಗಬಹುದು’ ಎಂದು ಹೇಳಿದರು. ಸೀತಾಲಕ್ಷ್ಮೀ ಕುಲಕರ್ಣಿಯವರ ಪತಿ 3 ವರ್ಷಗಳ ಹಿಂದೆ ಮೃತಪಟ್ಟ ನಂತರ ತನ್ನ ಹಾಗೂ ಮಗನ ಹೆಸರನ್ನು ಆಸ್ತಿ ದಾಖಲೆಯಲ್ಲಿ ನೋಂದಾಯಿಸುವಂತೆ ನಗರದ ಮಿನಿ ವಿಧಾನಸೌಧದ ಆವರಣದಲ್ಲಿರುವ ನಗರ ಮೋಜಣಿ ಕಚೇರಿಗೆ ನಿತ್ಯ ಅಲೆದಾಡುತ್ತಿದ್ದರು. ವಿಧವೆಯ ತಂದೆಯೂ ತನ್ನ ಮಗಳು ಹಾಗೂ ಮೊಮ್ಮಗನ ಹೆಸರಿನ ವಾರಸಾಕ್ಕಾಗಿ ಮೋಜಣಿ ಕಚೇರಿಯ ಮೆಟ್ಟಿಲುಗಳನ್ನು ನೂರಾರು ಬಾರಿ ಏರಿಳಿದಿದ್ದರು.

    ಪತ್ರಿಕೆಯ ಕಳಕಳಿಯಿಂದಾಗಿ ಮೋಜಣಿ ಕಚೇರಿಯ ಸಿಬ್ಬಂದಿ ಸೀತಾಲಕ್ಷ್ಮೀಯವರು ನೀಡಿದ್ದ ದಾಖಲೆಗಳ ನಕಲು ಸಿದ್ಧಪಡಿಸಿ, ವಾರಸಾ ತಯಾರಿಸಿದ್ದಾಗಿ ಅಧಿಕಾರಿ ಹೇಳಿದ್ದಾರೆ.

    ಇತರರ ಸಮಸ್ಯೆ ಪರಿಹರಿಸಿ: ನಗರ ಮೋಜಣಿ ಕಚೇರಿಯಲ್ಲಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಗುಮಾಸ್ತರೊಬ್ಬರು ನೂರಾರು ದಾಖಲೆಗಳನ್ನು ಕಳೆದಿದ್ದಾರೆ. ಈ ಅವಾಂತರದಿಂದ ಜನ ನಿತ್ಯ ಕಚೇರಿಗೆ ಅಲೆಯುತ್ತಿದ್ದಾರೆ. ಸೀತಾಲಕ್ಷ್ಮೀ ಕುಲಕರ್ಣಿಯವರ ನಕಲು ದಾಖಲೆ ಸಿದ್ಧಪಡಿಸಿ, ಅವರಿಗೆ ವಾರಸಾ ನೀಡಿದಂತೆ ಇತರರ ಸಮಸ್ಯೆಯನ್ನೂ ಬಗೆಹರಿಸಲು ಕಚೇರಿ ಅಧಿಕಾರಿಗಳು ಮುಂದಾಗಬೇಕಿದೆ ಎಂದು ನಾಗರಿಕರು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts