More

    ಕೃಷಿ ಕಾಯಕದಲ್ಲಿ ಗ್ರಾಮೀಣ ಮಕ್ಕಳು

    ಹಾವೇರಿ: ಪ್ರತಿದಿನ ಪಾಟೀ ಚೀಲ ಹಾಕಿಕೊಂಡು ಶಾಲೆಗೆ ಹೋಗುತ್ತಿದ್ದ ಗ್ರಾಮೀಣ ಭಾಗದ ಬಹುತೇಕ ಬಡ ಮಕ್ಕಳು ಈಗ ತಲೆ ಮೇಲೆ ಬುತ್ತಿಗಂಟು, ಹೆಗಲ ಮೇಲೆ ನೀರಿನ ಕೊಡ ಹೊತ್ತು ಕೃಷಿ ಕೆಲಸಕ್ಕೆ ಹೋಗುತ್ತಿದ್ದಾರೆ.

    ಇವು ತಾಲೂಕಿನ ಕೋಡಬಾಳ ಗ್ರಾಮ ಸೇರಿದಂತೆ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ನಿತ್ಯ ಕಂಡುಬರುತ್ತಿರುವ ದೃಶ್ಯಗಳು.

    ಕರೊನಾ ವೈರಸ್ ನಿಯಂತ್ರಣಕ್ಕೆ ಬಾರದೇ ಇರುವ ಪರಿಣಾಮ ಸರ್ಕಾರ ಶಾಲೆಗಳನ್ನು ಆಗಸ್ಟ್ ಅಂತ್ಯದವರೆಗೆ ತೆರೆಯದಂತೆ ಆದೇಶಿಸಿದೆ. ಚಂದನ ವಾಹಿನಿ ಮೂಲಕ ಆನ್​ಲೈನ್ ಪಾಠಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಇದು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಅಷ್ಟಾಗಿ ಹೊಂದಾಣಿಕೆಯಾದಂತಿಲ್ಲ. ಹೀಗಾಗಿ ಪಾಲಕರು ಮಕ್ಕಳನ್ನು ಮನೆಯಲ್ಲಿ ಬಿಡದೆ ಕೃಷಿ ಕೆಲಸಕ್ಕೆ ಕರೆದೊಯ್ಯುತ್ತಿದ್ದಾರೆ.

    ಇದರಿಂದ ನಿತ್ಯ ಶಾಲೆಯಲ್ಲಿ ಸಹಪಾಠಿಗಳೊಂದಿಗೆ ಆಡಿ, ನಲಿದು, ಪಾಠ ಕಲಿಯುತ್ತಿದ್ದ ಮಕ್ಕಳು ಕೃಷಿ ಕೆಲಸದಲ್ಲಿ ಅನಿವಾರ್ಯವಾಗಿ ತೊಡಗಿಕೊಳ್ಳುವ ಸ್ಥಿತಿ ನಿರ್ವಣವಾಗಿದೆ. ಗ್ರಾಮೀಣ ಭಾಗದ ಶಾಲಾ ಮಕ್ಕಳು ಕೃಷಿ ಕೆಲಸದಲ್ಲಿ ತೊಡಗಿಕೊಳ್ಳುವುದು ಇದೇ ಮೊದಲೇನಲ್ಲ. ಈ ಮೊದಲು ಶಾಲೆಗೆ ರಜೆಯಿದ್ದ ಸಮಯದಲ್ಲಿ ಮಕ್ಕಳು ಪಾಲಕರೊಂದಿಗೆ ಕೃಷಿ ಕೆಲಸದಲ್ಲಿ ಸಹಾಯ ಮಾಡುತ್ತಿದ್ದರು. ಇದೀಗ ಶಾಲೆಗಳಿಗೆ ರಜೆಯಿರುವುದರಿಂದ ನಿತ್ಯ ಕೃಷಿ ಕೆಲಸದಲ್ಲಿ ತೊಡಗಿಕೊಂಡು ಪಾಲಕರಿಗೆ ನೆರವಾಗುವುದು ಮಕ್ಕಳಿಗೆ ಅನಿವಾರ್ಯವಾಗಿದೆ.

    ದುಬಾರಿ ಕೂಲಿ: ಸದ್ಯ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಬಿಟಿಹತ್ತಿ, ಮೆಕ್ಕೆಜೋಳ, ಮೆಣಸಿನಕಾಯಿ, ಬೆಂಡಿ ಬೀಜೋತ್ಪಾದನೆ ಸೇರಿ ವಿವಿಧ ಬೆಳೆಗಳಲ್ಲಿ ಕಳೆ ತೆಗೆಯುವ ಕೆಲಸ ಹೆಚ್ಚಿದೆ. ಕೂಲಿಯಾಳುಗಳ ಕೊರತೆಯಿರುವುದರಿಂದ ದಿನಕ್ಕೆ ಒಬ್ಬರಿಗೆ 200 ರೂ.ಗಳಿಂದ 300 ರೂ.ಗಳ ವೇತನ ನೀಡಬೇಕಿದೆ. ಅದಕ್ಕಾಗಿ ಬಡ ಕುಟುಂಬದ ಪಾಲಕರು ಅನಿವಾರ್ಯವಾಗಿ ತಮ್ಮ ಮಕ್ಕಳನ್ನು ತಮ್ಮೊಂದಿಗೆ ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ.

    ಮಕ್ಕಳು ಕಲಿಕೆಯಿಂದ ಹಿಂದುಳಿಯಬಾರದೆಂದು ರಾಜ್ಯ ಸರ್ಕಾರ ಹಲವು ಮಾರ್ಗಸೂಚಿಗಳನ್ನು ರೂಪಿಸಿದೆ. ಕೆಲವು ಖಾಸಗಿ ಶಾಲೆಗಳು ಈಗಾಗಲೇ ಆನ್​ಲೈನ್ ಮೂಲಕ ಶಿಕ್ಷಣ ನೀಡುತ್ತಿವೆ. ಇದು ನಗರ ಭಾಗದ ಮಕ್ಕಳಿಗೆ ಸ್ವಲ್ಪ ಅನುಕೂಲ ಕಲ್ಪಿಸಿದೆ. ಗ್ರಾಮೀಣ ಭಾಗದ ಹಿಂದುಳಿದ ಕುಟುಂಬದ ಮಕ್ಕಳಿಗೆ ಈ ಶಿಕ್ಷಣ ನಿಲುಕುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಶೇ. 65ರಷ್ಟು ಬಡ ಕೂಲಿ ಕಾರ್ವಿುಕರೇ ಇದ್ದಾರೆ. ಅವರ ಮಕ್ಕಳು ಕಲಿಕೆಗೆ ಸರ್ಕಾರಿ ಶಾಲೆಗಳನ್ನೇ ಅವಲಂಬಿಸಿದ್ದಾರೆ. ಇಷ್ಟೊತ್ತಿಗೆ ಶಾಲೆಗಳು ಪ್ರಾರಂಭವಾಗಿ ಸೇತುಬಂಧ ಪುನರ್ಮನನ ಪರೀಕ್ಷೆಗಳು ನಡೆಯಬೇಕಿತ್ತು. ಆದರೆ, ಕರೊನಾ ಹಾವಳಿ ಮಕ್ಕಳ ಕಲಿಕೆ ಹಿಂದುಳಿಯುವಂತೆ ಮಾಡಿದೆ.

    ಆನ್​ಲೈನ್ ಶಿಕ್ಷಣದಿಂದ ವಂಚಿತರು: ಒಂದು ಹೊತ್ತಿನ ಊಟಕ್ಕೂ ಪರದಾಡುವ ಬಹುತೇಕ ಬಡ ಕುಟುಂಬಗಳ ಮನೆಯಲ್ಲಿ ಟಿವಿಗಳೇ ಇಲ್ಲ. ತಮ್ಮ ಸಹಪಾಠಿಗಳ ಮನೆಗೆ ತೆರಳಿ ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಪಠ್ಯದ ಪಾಠಗಳನ್ನು ನೋಡಿ ಕಲಿಯಬೇಕೆಂದರೆ ಪಾಲಕರ ಸಹಕಾರ ದೊರೆಯುವುದಿಲ್ಲ. ಶಿಕ್ಷಣ ಇಲಾಖೆ ಕೆಲವರಿಗೆ ಈಗಾಗಲೇ ಪಠ್ಯಪುಸ್ತಕಗಳನ್ನು ವಿತರಣೆ ಮಾಡಿದೆ. ಆದರೆ, ಅವುಗಳನ್ನು ಓದಿ ಗ್ರಹಿಸಿಕೊಳ್ಳುವಷ್ಟು ಸಾಮರ್ಥ್ಯ ಮಕ್ಕಳಲ್ಲಿಲ್ಲ. ಹೀಗಾಗಿ ಈ ವರ್ಷ ಶಾಲಿ ಏನಾಗೋತ್ತೋ ಗೊತ್ತಿಲ್ಲ. ನಮ್ಮ ಜೊತೆ ಕೆಲಸಕ್ಕೆ ಬಂದ್ರೆ ಕೂಲಿನಾದರೂ ಸಿಗುತ್ತೇ ಎನ್ನುವುದು ಬಹುತೇಕ ಪಾಲಕರ ಅಭಿಪ್ರಾಯವಾಗಿದೆ.

    ಶಾಲಿ ಶುರುವಾದ್ರ ಶಾಲಿಗೆ…ಇಲ್ಲಾಂದ್ರ ಕೂಲಿಗೆ…

    ತಾಲೂಕಿನ ಕೋಡಬಾಳ ಗ್ರಾಮದ 6 ಮತ್ತು 7ನೇ ತರಗತಿಯ ಮಕ್ಕಳು ಕೂಲಿ ಕೆಲಸಕ್ಕೆ ಹೋಗುತ್ತಿರುವ ಕುರಿತು ಮಕ್ಕಳೊಂದಿಗೆ ರ್ಚಚಿಸಿರುವ ಗ್ರಾಮದ ಲೋಕೇಶ ಕುಬಸದ ಎಂಬುವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಅದರಲ್ಲಿ ಮಕ್ಕಳು, ‘ಶಾಲಿ ಶುರುವಾದ್ರ ಶಾಲಿಗೆ ಹೊಕ್ಕೀವ್ರಿ, ಇಲ್ಲಾಂದ್ರ ಕೂಲಿ ಹೊಕ್ಕೀವ್ರಿ’ ಎಂದು ಹೇಳಿದ್ದಾರೆ. ಸರ್ಕಾರ ಆನ್​ಲೈನ್ ಪಾಠ ಶುರು ಮಾಡಿದ ಕುರಿತು ಕೇಳಿದಾಗ ‘ನಮ್ಮ ಕಡೆ ಪೋನ್ ಇಲ್ಲಾರ್ರಿ, ಅವರು ಪೋನ್ಯಾಗ ಪಾಠ ಮಾಡಕತ್ತಾರೀ ನಮ್ಮ ಕಡೆ ಪೋನು ಇಲ್ಲಾರ್ರಿ, ಪೋನು ತೋಗಳಾಕ್ ನಮ್ಮ ಅಪ್ಪನ ಕಡೆ ರೊಕ್ಕ ಇಲ್ಲರಿ. ರಾತ್ರಿ ಮನ್ಯಾಗ ನಾವ ಪುಸ್ತಕ ಓದುತ್ತೇವ್ರಿ, ಆದ್ರಾ ಏನು ಸರಿಯಾಗಿ ತಿಳಿಯೋಲ್ಲ. ಜಲ್ದಿ ಶಾಲಿ ಶುರು ಮಾಡಿದ್ರ ಚಲೋ ಆಕೈತ್ತಿ ನೋಡ್ರಿ’ ಎಂದಿದ್ದಾರೆ.

    ಶಾಲೆ ಆರಂಭವಾಗದೇ ಇರುವುದರಿಂದ ನಮ್ಮೂರಿನ ಮಕ್ಕಳು ತಮ್ಮ ತಮ್ಮ ಜಮೀನು ಕೆಲಸಗಳಲ್ಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಅವರನ್ನು ಕೆಲಸದಿಂದ ಬಿಡಿಸಿ ಅವರ ಕೈಗೆ ಪುಸ್ತಕ ಕೊಟ್ಟು ಕಲಿಕೆಯಲ್ಲಿ ಪಾಲ್ಗೊಳ್ಳವಂತೆ ಮಾಡಬೇಕಿದೆ. ಸರ್ಕಾರ ಶೀಘ್ರವೇ ಕರೊನಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಶಾಲೆ ಪ್ರಾರಂಭಿಸಬೇಕು. ಇಲ್ಲವೇ ಶಿಕ್ಷಕರನ್ನು ವಾರದಲ್ಲಿ ಮೂರು ದಿನ ಮನೆಮನೆಗೆ ಕಳಿಸಿ ಮಕ್ಕಳಿಗೆ ಪಾಠ ಮಾಡುವಂತೆ ಆದೇಶ ನೀಡಬೇಕು.
    | ಲೋಕೇಶ ಕುಬಸದ, ಕೋಡಬಾಳ ಗ್ರಾಮಸ್ಥ

    ನನಗೆ ಮೂರು ಮಕ್ಕಳು ಇದ್ದಾರೀ. ಶಾಲಿ ಬಂದ್ ಆಗಿದ್ದಕ್ಕೆ ಅವರೆಲ್ಲ ಮನೆಬಿಟ್ಟು ಅಡವಿ, ಅಡವಿ ತಿರಗಾಕ ಹೊಂಟಾರ್ರಿ, ಯಾರ್ಯಾರದೋ ಹೊಲಕ್ಕಾ ಹೋಗಿ ಜಗಳ ತರಕಾ ಹತ್ಯಾರ. ಹಿಂಗಾಗಿ ನಮ್ಮ ಹೊಲಕ್ಕಾ ಕರ್ಕೊಂಡು ಹೊಂಟೇವಿ.
    | ಬಸಪ್ಪ ಬಸಣ್ಣನವರ, ಪಾಲಕರು

    ಗ್ರಾಮೀಣ ಭಾಗದಲ್ಲಿ ಪಾಲಕರೇ ಮಕ್ಕಳನ್ನು ಕೃಷಿ ಕೆಲಸಕ್ಕೆ ಕರೆದುಕೊಂಡು ಹೋಗುತ್ತಿರುವ ವಿಷಯ ತಿಳಿದು ಆತಂಕ ಮೂಡಿಸಿದೆ. ಮಕ್ಕಳಿಗೆ ಶಾಲೆಯ ರೂಢಿ ತಪ್ಪಬಾರದು ಎಂಬ ಉದ್ದೇಶದಿಂದ ಗ್ರಾಮ, ವಾರ್ಡ್​ವಾರು 1ರಿಂದ 10ನೇ ತರಗತಿಯ ಮಕ್ಕಳನ್ನು ಶಾಲೆ ಬಿಟ್ಟು ಪ್ರತ್ಯೇಕ ವಿಶಾಲ ಜಾಗದಲ್ಲಿ ಪರಸ್ಪರ ಅಂತರದಲ್ಲಿ ಸೇರಿಸಿ ಶಿಕ್ಷಕರಿಂದ ಪಾಠ ಮಾಡಿಸುವ ಕುರಿತು ಚಿಂತನೆ ನಡೆಸಿದ್ದೇವೆ. ಅದನ್ನು ಇದೇ ವಾರದಲ್ಲಿ ಜಾರಿಗೆ ತರುತ್ತೇವೆ.
    | ಅಂದಾನೆಪ್ಪ ವಡಗೇರಿ, ಡಿಡಿಪಿಐ, ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts