More

    ಕಾಲತಿಪ್ಪಿಯಲ್ಲಿ ವೀರಭದ್ರೇಶ್ವರ, ಭದ್ರಕಾಳಿ ದೇಗುಲ ಲೋಕಾರ್ಪಣೆ

    ತೇರದಾಳ: ದೇವಸ್ಥಾನಗಳ ನಿರ್ಮಾಣ ಭಕ್ತರ ಭಕ್ತಿಯ ಮಹಾಕಾರ್ಯಗಳಲ್ಲೊಂದಾಗಿದೆ. ಭಕ್ತಿ ಮತ್ತು ಧರ್ಮ ಮಾರ್ಗದಿಂದಲೇ ದೇವನೊಲುಮೆಯಾಗುತ್ತದೆ. ಸದ್ಧರ್ಮ ನಿರತ ಭಕ್ತಿಯಿಂದಾಗಿ ದೇಶದ ಸರ್ವಾಂಗೀಣ ಬೆಳವಣಿಗೆ ಸಾಧ್ಯವಾಗಿದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶ್ರೀಗಳು ಹೇಳಿದರು.

    ತಾಲೂಕಿನ ಕಾಲತಿಪ್ಪಿಯಲ್ಲಿ ಲಟ್ಟಿ ಕುಟುಂಬ ಸೇರಿದಂತೆ ಗ್ರಾಮಸ್ಥರು ಕೂಡಿ ನಿರ್ಮಾಣ ಮಾಡಿರುವ ವೀರಭದ್ರೇಶ್ವರ ಹಾಗೂ ಭದ್ರಕಾಳಿ ನೂತನ ದೇವಸ್ಥಾನಗಳ ಲೋಕಾರ್ಪಣೆ ಹಾಗೂ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

    ದೇಶದ ಸನಾತನ ಸಂಸ್ಕೃತಿ ಉಳಿದಿರುವುದು ಗ್ರಾಮಗಳಲ್ಲಿ ಮಾತ್ರ. ಗ್ರಾಮೀಣ ಭಾಗದ ವಿದ್ಯಾವಂತ ಯುವಕರು ಧರ್ಮದಂತಹ ಕಾರ್ಯಗಳಲ್ಲಿ ತೊಡಗಿರುವುದು ಹೆಮ್ಮೆಯ ವಿಷಯ. ಅದರಲ್ಲೂ ಕಾಲತಿಪ್ಪಿಯಂತಹ ಪುಟ್ಟ ಗ್ರಾಮದಲ್ಲಿ ಹೊತ್ತಿಸಿರುವ ಈ ಧರ್ಮದ ಜ್ಯೋತಿ ನಾಡಿನುದ್ದಗಲಕ್ಕೂ ಬೆಳಕು ಚೆಲ್ಲಲಿ ಎಂದು ಆಶಿಸಿದರು.

    ಶಾಸಕ ಸಿದ್ದು ಸವದಿ ಮಾತನಾಡಿ, ಧರ್ಮದ ಉಳಿವಿಗೆ ಕೇವಲ ಮಠಾಧೀಶರು ಮಾತ್ರ ಶ್ರಮಿಸಿದರೆ ಸಾಲದು. ಅದು ಶ್ರೀಸಾಮಾನ್ಯನ ಪ್ರಥಮ ಕರ್ತವ್ಯ ಕೂಡ ಹೌದು. ಹಾಗಾಗಿ ಪ್ರತಿಯೊಬ್ಬರೂ ಕೂಡ ಧರ್ಮ ಹಾಗೂ ದೇಶಕ್ಕೆ ಸಂಕಷ್ಟ ಬಂದಾಗ ಎದುರಿಸಲು ಹೆಗಲು ಕೊಡಬೇಕು ಎಂದರು.

    ಜಮಖಂಡಿ ಕಲ್ಯಾಣ ಮಠದ ಗೌರಿಶಂಕರ ಶಿವಾಚಾರ್ಯರು, ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶ್ರೀಗಳು ಮಾತನಾಡಿ, ಧರ್ಮವನ್ನು ಆಚರಿಸುವುದರಿಂದ ನಮ್ಮನ್ನು ಧರ್ಮ ರಕ್ಷಿಸುತ್ತದೆ. ಪ್ರತಿಯೊಬ್ಬರು ಭಕ್ತಿ ಮತ್ತು ಧರ್ಮವನ್ನು ಪಾಲಿಸಿದರೆ ಬದುಕು ಸುಂದರವಾಗುತ್ತದೆ ಎಂದರು.

    ಬಸಪ್ಪ ಲಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮದ ಮಲ್ಲಿಕಾರ್ಜುನ ಮಠದ ಸೇರಿದಂತೆ ಲಟ್ಟಿ ಮನೆತನದ ಹಲವರು, ಗ್ರಾಮಸ್ಥರು ಉಪಸ್ಥಿತರಿದ್ದರು. ಅನೇಕ ದಂಪತಿ ಭಕ್ತಿಯ ಸೇವೆ ಸಲ್ಲಿಸಿದರು. ಪುರವಂತರು ಕರಡಿ ವಾದ್ಯಗಳೊಂದಿಗೆ ಒಡಪುಗಳನ್ನು ಹಾಕುತ್ತ, ವೀರಗಾಸೆ ಪ್ರದರ್ಶನ ಮಾಡಿದರು.

    ನೂತನ ಮೂರ್ತಿಗಳ ಪುರಪ್ರವೇಶ ಕಾರ್ಯ ಭಾನುವಾರ ಭವ್ಯ ಮೆರವಣಿಗೆಯೊಂದಿಗೆ ಜರುಗಿತು. ಇದೇ ಸಂದರ್ಭದಲ್ಲಿ ಜಗದ್ಗುರುಗಳನ್ನು ಸಾರೋಟ ಮೆರವಣಿಗೆ ಮೂಲಕ ಕರೆತರಲಾಯಿತು. ಮುತ್ತೈದೆಯರ ಕುಂಭಮೇಳ, ಕಲಾವಿದರ ವಾದ್ಯಮೇಳ ಮೆರವಣಿಗೆಗೆ ಕಳೆ ತಂದಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts