More

    ಕಾರ್ಯಕ್ರಮಗಳಿಂದ ಫಲಿತಾಂಶ ಬೇಕು

    ಕೋಲಾರ: ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಅದರಲ್ಲಿ ಫಲಿತಾಂಶ ಕಾಣಬೇಕು, ಉದ್ದೇಶಪೂರ್ವಕವಾಗಿ,ಒತ್ತಡಕ್ಕೆ ಮಣಿದು ತಪ್ಪು ಎಸಗಿದರೆ ಸಹಿಸಲಾರೆ, ಕ್ರಮ ಜರುಗಿಸುವುದು ಅನಿವಾರ್ಯ ಎಂದು ಜಿಪಂ ಸಿಇಒ ಆಗಿ ಅಧಿಕಾರ ಸ್ವೀಕರಿಸಿದ ಉಕೇಶ್‌ಕುಮಾರ್ ಎಚ್ಚರಿಸಿದರು.

    ಜಿಪಂ ಸಭಾಂಗಣದಲ್ಲಿ ಮಂಗಳವಾರ ಸ್ವಾಗತ ಸಮಾರಂಭದಲ್ಲಿ ಮಾತನಾಡಿ, ಆಯಾ ಇಲಾಖೆ, ವಿಭಾಗದ ಅಧಿಕಾರಿ, ಸಿಬ್ಬಂದಿಯಾಗಿದ್ದುಕೊಂಡು ಸಾಧನೆ ಮಾಡುವ ದಿಸೆಯಲ್ಲಿ ಕೆಲಸ ಮಾಡಬೇಕೆಂಬುದು ನನ್ನ ನಿರೀಕ್ಷೆ. ಅದಕ್ಕೆ ತಕ್ಕಂತೆ ಸಿದ್ಧರಾಗಿ, ನಿಮಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದರು.

    ಕೋಲಾರವೆಂದರೆ ಬೇರೆಯದೇ ಹೆಸರಿದೆ. ಇಲ್ಲಿ ಸಾಕಷ್ಟು ಸವಾಲುಗಳಿರುವುದರಿಂದ ಅಧಿಕಾರಿಗಳು ಹೆಚ್ಚು ಅನ್ವೇಷಕರಾಗಬೇಕು, ಜನಪ್ರತಿನಿಧಿಗಳಿಂದ ಒತ್ತಡ ಇರುತ್ತವೆ. ಶ್ರಮವಹಿಸಿ ಕೆಲಸ ಮಾಡಿ, ಎಲ್ಲ ಸಮಸ್ಯೆಗಳಿಗೂ ಅಧಿಕಾರಿಗಳನ್ನೇ ದೂರಲಾಗದು, ವ್ಯವಸ್ಥೆಯೇ ಹಾಗಾಗಿದೆ. ಕಡತ ನಿರ್ವಹಣೆ ಸರಿಯಾಗಿರಲಿ. ನಿಯಮ ಸ್ವಲ್ಪ ಸಡಿಲಿಸಿದರೆ ಫಲಿತಾಂಶ ಬರುತ್ತದೆ ಎಂದಾದರೆ ಇದಕ್ಕೆ ಕಾರಣವಾದ ಅಂಶಗಳನ್ನು ದಾಖಲಿಸಿ ಮುಂದುವರಿಯಿರಿ, ಆಗ ಏನೂ ಸಮಸ್ಯೆಯಾಗದು ಎಂದು ಕಿವಿಮಾತು ಹೇಳಿದರು.

    ನಿಮ್ಮಲ್ಲಿರುವ ಸಲಹೆಗಳನ್ನು ನನ್ನ ಜತೆ ಹಂಚಿಕೊಳ್ಳಲು ಹಿಂಜರಿಕೆ ಬೇಡ. ಹತ್ತಾರು ವರ್ಷಗಳ ನಿಮ್ಮ ಅನುಭವ, ಕಾರ್ಯಕ್ಷೇತ್ರದಲ್ಲಿನ ವಾಸ್ತವ ಅಂಶಗಳನ್ನು ನಿಮ್ಮಿಂದ ಕಲಿಯುವುದು ಸಾಕಷ್ಟಿದೆ. ನಾನು ತಪ್ಪು ಮಾಡಿದರೂ ಹೇಳಿ, ಎಲ್ಲರೂ ತಂಡವಾಗಿ ಕೆಲಸ ಮಾಡೋಣ ಎಂದರು.

    ನಿರ್ಗಮಿತ ಸಿಇಒ ಎನ್.ಎಂ. ನಾಗರಾಜ್ ಮಾತನಾಡಿ, ಕೋಲಾರ ಜಿಲ್ಲೆ ಚಿನ್ನದ ನಾಡು, ಇಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಾಗ ಭಯ ಹಿಡಿಸುವವರಿದ್ದಾರೆ. ಜಿಲ್ಲೆಗೆ ಬಂದ ಮೇಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಿದ ಅನುಭವವನ್ನು ಎರಡು ತಿಂಗಳಲ್ಲಿ ಹೋಲಿಕೆ ಮಾಡಿದೆ, ಅಲ್ಲಿ ಸಲೀಸಾಗಿದ್ದರೆ ಇಲ್ಲಿ ಕಷ್ಟ ಪಟ್ಟು ಓಡಬೇಕಿತ್ತು ಎಂದು ಆರಂಭದ ದಿನಗಳನ್ನು ಸ್ಮರಿಸಿದರು.

    ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ, ದಾಖಲೆಗಳನ್ನು ಸರಿಯಾಗಿ ನಿರ್ವಹಿಸಿದರೆ ಸಮಸ್ಯೆ ಅರ್ಥಮಾಡಿಕೊಳ್ಳುವುದು ಸರಳ. ಪಾರದರ್ಶಕವಾಗಿದ್ದರೆ ಮಾಹಿತಿ ಹಕ್ಕಿನಡಿ ಬರುವ ಅರ್ಜಿಗಳಿಗೆ ಉತ್ತರಿಸುವುದು ಕಷ್ಟವಲ್ಲ. ಈ ವಿಚಾರದಲ್ಲಿ ಜಿಪಂನಲ್ಲಿ ಇನ್ನಷ್ಟು ಸುಧಾರಣೆಯಾಗವೇಕು. ಜಿಪಂ ವ್ಯಾಪ್ತಿಯ ಇಲಾಖೆಗಳ ಸಾಧನೆ ರಾಜ್ಯಮಟ್ಟದಲ್ಲಿ ಕಳಪೆಯೇನಿಲ್ಲ. ಅಷ್ಟರ ಮಟ್ಟಿಗೆ ನನಗೆ ಆತ್ಮತೃಪ್ತಿಯಿದೆ ಎಂದರು.

    ಆರ್‌ಡಿಪಿಆರ್ ಇಲಾಖೆಯಲ್ಲಿ ಒಟ್ಟಾರೆ 25 ತಿಂಗಳು ಕೆಲಸ ಮಾಡುವ ಅವಕಾಶ ಸಿಕ್ಕಿತು, ನನಗೆ ಕೆಟ್ಟ ಸಮಯ ಎಂದು ಅನಿಸಿಲ್ಲ, ಬೇರೆಯ ಅವಕಾಶಕ್ಕಾಗಿ ಹೋಗುತ್ತಿದ್ದೇನೆ ಎಂದರು. ನಿರ್ಗಮಿತ ಸಿಇಒ ಕುರಿತು ಅನಿಸಿಕೆ ವ್ಯಕ್ತಪಡಿಸಿದ ಜಿಪಂ ಉಪ ಕಾರ್ಯದರ್ಶಿ ಸಂಜೀವಪ್ಪ, 11 ತಿಂಗಳ ಆಡಳಿತಾವಧಿಯಲ್ಲಿ ಯಾರ ಮೇಲೂ ಕೋಪ ಮಾಡದೆ, ಅಧೀನ ಸಿಬ್ಬಂದಿ ಹುದ್ದೆ ನೋಡದೆ ತಂಡದ ನಾಯಕನಾಗಿ ನಡೆಸಿಕೊಂಡು ಹೋಗಿದ್ದಾರೆ. ತಾಳ್ಮೆ ಕಲಿತಿದ್ದೇನೆ, 11 ತಿಂಗಳ ಅವಧಿಯಲ್ಲಿ 11 ವರ್ಷದ ಅನುಭವ ಪಡೆದಿದ್ದೇವೆ. ನೂತನ ಸಿಇಒ ಅವರಿಗೂ ನಮ್ಮ ತಂಡ ಸಂಪೂರ್ಣ ಸಹಕಾರ ನೀಡುತ್ತದೆ ಎಂದರು. ಜಿಪಂ ಯೋಜನಾಧಿಕಾರಿ ಶ್ರುತಿ, ತಾಪಂ ಕಾರ್ಯನಿರ್ವಹಣಾಧಿಕಾರಿಗಳಾದ ಎನ್.ವಿ. ಬಾಬು, ಕೃಷ್ಣಪ್ಪ ಅನಿಸಿಕೆ ವ್ಯಕ್ತಪಡಿಸಿದರು.

    ನನ್ನ ಮೇಲಿದೆ ಅತೃಪ್ತಿಯಿದೆ: ಗಣ್ಯ ವ್ಯಕ್ತಿಗಳಿಗೆ ನನ್ನ ಮೇಲೆ ಅತೃಪ್ತಿ ಇದೆ. ಜನಪ್ರತಿನಿಧಿಗಳ ಮನಸ್ಸು ಗೆಲ್ಲವುದಕ್ಕಾಗಿ ನಾನು ಬಂದಿದ್ದಲ್ಲ, ಅಭಿವೃದ್ಧಿ ದೃಷ್ಟಿಯಿಂದ ಕಾರ್ಯನಿರ್ವಹಿಸಿದ್ದೇನೆ. ಸರ್ಕಾರಿ ಶಾಲೆ, ಅಂಗನವಾಡಿಗಳಿಗೆ ಮೂಲಸೌಕರ್ಯ ಕಲ್ಪಿಸಲು ಒತ್ತು ನೀಡಿದ್ದೇನೆ. ಮಾಸ್ತಿ ವೆಂಕಟೇಶ ಐಯಂಗಾರ್ ಶಾಲೆ, ಮ್ಯೂಸಿಯಂ , ಡಿವಿಜಿ ಶಾಲೆ ಅಭಿವೃದ್ಧಿ ಕೆಲಸ ಆಗಬೇಕಿದೆ ಎಂದು ನಿರ್ಗಮಿತ ಸಿಇಒ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts