More

    ಕಾಂಗ್ರೆಸ್ ಪಕ್ಷ ವೈಚಾರಿಕ ದಿವಾಳಿ

    ಬೀದರ್: ರಾಜಕೀಯವಾಗಿ ಅಧಃಪತನ ಕಂಡ ಕಾಂಗ್ರೆಸ್ ಪಕ್ಷವು, ಇದೀಗ ರಾಷ್ಟ್ರ ವಿರೋಧಿಗಳ ಬೆಂಗಾವಲಿಗೆ ನಿಲ್ಲುವ ಮೂಲಕ ವೈಚಾರಿಕವಾಗಿ (ಬೌದ್ಧಿಕವಾಗಿ) ದಿವಾಳಿಯಾಗಿದೆ. ವೋಟ್ ಬ್ಯಾಂಕ್ನ ಚಿಲ್ಲರೆ ರಾಜಕಾರಣಕ್ಕಾಗಿ ರಾಷ್ಟ್ರ ದ್ರೋಹಿಗಳಿಗೆ ಸಮರ್ಥಿಸುತ್ತ ದೇಶದ ಹಿತಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಆಕ್ರೋಶ ವ್ಯಕ್ತಪಡಿಸಿದರು.
    ನಗರದ ಝಿರಾ ಫಂಕ್ಷನ್ ಹಾಲ್ನಲ್ಲಿ ಬುಧವಾರ ಜರುಗಿದ ಪಕ್ಷದ ನೂತನ ಜಿಲ್ಲಾ ಅಧ್ಯಕ್ಷ ಶಿವಾನಂದ ಮಂಠಾಳಕರ್ ಅವರ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿ, ದೇಶ ಸ್ವಾತಂತ್ರೃಕ್ಕೆ ಶ್ರಮಿಸಿದ್ದ ಅಂದಿನ ಕಾಂಗ್ರೆಸ್ ರಾಷ್ಟ್ರಭಕ್ತ ಆಗಿತ್ತು. ಆದರೆ ಇಂದಿನ ಕಾಂಗ್ರೆಸ್ ನೀತಿ, ತತ್ವ, ಸಿದ್ಧಾಂತಗಳು ರಾಷ್ಟ್ರ ವಿರೋಧಿಯಾಗಿ ಬದಲಾಗಿವೆ. ಹುಬ್ಬಳ್ಳಿಯಲ್ಲಿ ಪಾಕಿಸ್ತಾನ ಪರ ಜೈಕಾರ ಹಾಕಿದವರಿಗೆ, ಬೀದರ್ನಲ್ಲಿ ಶಾಹೀನ್ ಶಿಕ್ಷಣ ಸಂಸ್ಥೆ ಸೇರಿ ವಿವಿಧೆಡೆ ದೇಶದ್ರೋಹದ ಆರೋಪ ಹೊತ್ತವರಿಗೆ ಬೆಂಗಾವಲಾಗಿ ನಿಲ್ಲುತ್ತಿರುವುದೇ ಇದಕ್ಕೆ ಸಾಕ್ಷಿ. ಈ ಬಗ್ಗೆ ದಿನಕ್ಕೊಂದು ಹೇಳಿಕೆ ನೀಡುತ್ತಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರದ್ದು ರಾಷ್ಟ್ರ ಭಕ್ತಿಯೋ? ರಾಷ್ಟ್ರ ದ್ರೋಹವೋ ಎಂಬುದು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು.
    ದೇಶ ಸ್ವಾತಂತ್ರೃ ನಂತರ ಅಧಿಕಾರಕ್ಕೆ ಬರುತ್ತ್ತಲೇ ಕಾಂಗ್ರೆಸ್ ಧೋರಣೆ ಬದಲಾಗಿದೆ. ಅಧಿಕಾರದ ಲಾಲಸೆ, ಕುಟುಂಬ ರಾಜಕಾರಣ, ಭ್ರಷ್ಟಾಚಾರ ತನ್ನ ಧ್ಯೇಯವಾಗಿಸಿಕೊಂಡು ತತ್ವ, ಸಿದ್ಧಾಂತಗಳಿಗೆ ತಿಲಾಂಜಲಿ ನೀಡಿದೆ. 7 ಸಲ ಭರ್ಜರಿ ಗೆದ್ದಿದ್ದವರು ಇಂದು ಸಂಸತ್ತಿನಲ್ಲಿ ಪ್ರತಿಪಕ್ಷವಾಗುವಷ್ಟು ಸ್ಥಾನ ಪಡೆಯುವ ಯೋಗ್ಯತೆ ಹೊಂದಿಲ್ಲ. ರಾಷ್ಟ್ರ ವಿರೋಧಿ ನಿಲುವು ಬರುವ ದಿನಗಳಲ್ಲಿ ಕಾಂಗ್ರೆಸ್ ಮುಕ್ತ ಭಾರತ ಮಾಡಲಿದೆ. ಭಾರತೀಯರು ಯಾವತ್ತೂ ದೇಶ ವಿರೋಧಿಗಳನ್ನು ಸಹಿಸುವುದಿಲ್ಲ ಎಂದು ಹೇಳಿದರು.
    ನಮ್ಮದು ದೇಶ ಮೊದಲು, ಪಕ್ಷ ನಂತರ ಎಂಬ ಸಿದ್ಧಾಂತ. ಇದೇ ತಳಹದಿಯಲ್ಲಿ ಪಕ್ಷ ಸಂಘಟನೆ ಜತೆಗೆ ದೇಶ, ಸಮಾಜ ಕಟ್ಟುವಲ್ಲಿ ತೊಡಗಿದ್ದೇವೆ. ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ ಬಂದ ನಂತರ ಪರಿವರ್ತನೆ ಪರ್ವ ಶುರುವಾಗಿದೆ. ಗುಜರಾತ ಸಿಎಂ ಇದ್ದಾಗ ಅಮೆರಿಕವು ಮೋದಿ ಅವರ ವೀಸಾ ನಿರಾಕರಿಸಿತ್ತು. ಇಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರೇ ಸ್ನೇಹಹಸ್ತ ಚಾಚಿ ಗುಜರಾತ ಬರುತ್ತಿದ್ದಾರೆ. ಸಬ್ಕಾ ಸಾಥ್ ಸಬ್ಕಾ ವಿಕಾಸ ಎಂಬ ಮಂತ್ರವನ್ನೇ ಟ್ರಂಪ್ ಪಠಿಸುತ್ತಿದ್ದಾರೆ. ಇದು ಪರಿವರ್ತನೆಗೆ ನಿದರ್ಶನ. ರಾಷ್ಟ್ರ ವೇ ಸರ್ವೋಪರಿ ತತ್ವದಡಿ ಪಕ್ಷದ ಕಾರ್ಯಕರ್ತರೆಲ್ಲ ಹಗಲಿರುಳು ಕೆಲಸ ಮಾಡುವಂತೆ ಕರೆ ನೀಡಿದರು.
    ಸಂಸದ ಭಗವಂತ ಖೂಬಾ ಮಾತನಾಡಿದರು. ಸೇಡಂ ಶಾಸಕ, ಚುನಾವಣಾ ಉಸ್ತುವಾರಿ ರಾಜಕುಮಾರ ಪಾಟೀಲ್ ತೇಲ್ಕೂರ್, ಮಾಜಿ ಶಾಸಕರಾದ ಸುಭಾಷ ಕಲ್ಲೂರ್, ರಾಜೇಂದ್ರ ವರ್ಮಾ, ಮಲ್ಲಿಕಾರ್ಜುನ ಖೂಬಾ, ಶಶೀಲ್ ನಮೋಶಿ, ಪ್ರಮುಖರಾದ ಎನ್.ಆರ್.ವರ್ಮಾ, ಬಾಬುರಾವ ಮದಕಟ್ಟಿ, ಶಿವರಾಜ ಗಂದಗೆ, ಸೂರ್ಯಕಾಂತ ನಾಗಮಾರಪಳ್ಳಿ, ಡಿ.ಕೆ. ಸಿದ್ರಾಮ, ಬಾಬು ವಾಲಿ, ಪದ್ಮಾಕರ ಪಾಟೀಲ್, ಗುರುನಾಥ ಜ್ಯಾಂತಿಕರ್, ಬಸವರಾಜ ಆರ್ಯ, ವಿಜಯಕುಮಾರ ಪಾಟೀಲ್ ಗಾದಗಿ, ಹಣಮಂತ ಬುಳ್ಳಾ, ಸೂರಜಸಿಂಗ್ ರಾಜಪುತ, ಶಿವಪುತ್ರ ವೈದ್ಯ, ಸಂಜಯ್ ಪಟವಾರಿ, ಜಗನ್ನಾಥ ಪಾಟೀಲ್ ಸಿರಕಟನಳ್ಳಿ, ರೌಫೊದ್ದೀನ್ ಕಚೇರಿವಾಲೆ, ಶಶಿ ಹೊಸಳ್ಳಿ, ಜಗದೀಶ ಬಿರಾದಾರ, ವಿವಿಧ ಮಂಡಲ್ಗಳ ಅಧ್ಯಕ್ಷರು ಇದ್ದರು. ಈಶ್ವರಸಿಂಗ್ ಠಾಕೂರ್ ಪ್ರಾಸ್ತಾವಿಕ ಮಾತನಾಡಿದರು. ಸೋಮನಾಥ ಪಾಟೀಲ್ ಸ್ವಾಗತಿಸಿದರು. ಜಯಕುಮಾರ ಕಾಂಗೆ ನಿರೂಪಣೆ ಮಾಡಿದರು. ಬಾಬುರಾವ ಕಾರಬಾರಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts