More

    ಕಳ್ಳ ಮಾರ್ಗಗಳೇ ರಹದಾರಿ !

    ಶಿವಮೊಗ್ಗ: ಕರೊನಾ ಸೋಂಕು ಕೊನೆಗೂ ತಬ್ಲಿಘಿಗಳ ಮೂಲಕ ಜಿಲ್ಲೆಗೆ ಅಂಟಿದ್ದು ಅಪಾಯದ ಮುನ್ಸೂಚನೆ ದೊರೆತಿದೆ. ಈ ನಡುವೆ ಜಿಲ್ಲೆಯ ಗಡಿ ಭಾಗಗಳ ಚೆಕ್​ಪೊಸ್ಟ್​ಗಳನ್ನು ಜಿಲ್ಲಾಡಳಿತ ಮತ್ತಷ್ಟು ಬಿಗಿಗೊಳಿಸುತ್ತಿದ್ದರೂ ಹಲವರು ಕಳ್ಳ ಮಾರ್ಗಗಳನ್ನೇ ರಹದಾರಿಯನ್ನಾಗಿಸಿ ಮಲೆನಾಡಿಗೆ ಪ್ರವೇಶಿಸುತ್ತಿದ್ದು ಜನರಲ್ಲಿ ಆತಂಕ ಸೃಷ್ಟಿಸುತ್ತಿದೆ.

    ಕೇಂದ್ರ ಸರ್ಕಾರ ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಲ್ಲಿರುವ ಜನರಿಗೆ ತವರಿಗೆ ಮರಳಲು ಪಾಸ್ ವ್ಯವಸ್ಥೆ ಕಲ್ಪಿಸಿದೆ. ಆದರೆ ದಾವಣಗೆರೆ, ಹಾವೇರಿ, ಉತ್ತರ ಕನ್ನಡ, ಉಡುಪಿ, ಮಂಗಳೂರು ಮತ್ತು ತುಮಕೂರು, ಚಿತ್ರದುರ್ಗ ಭಾಗಗಳಿಂದ ಪ್ರತಿನಿತ್ಯವೂ ನೂರಾರು ಮಂದಿ ಪಾಸ್ ಇಲ್ಲದೆ ಗಡಿಯನ್ನು ನಿರಂತರವಾಗಿ ದಾಟುತ್ತಿರುವುದು ಚೆಕ್​ಪೋಸ್ಟ್ ಭದ್ರತೆಗೆ ಹಿಡಿದ ಕೈಗನ್ನಡಿ. ಪೊಲೀಸ್ ಇಲಾಖೆಯು 17 ಜಿಲ್ಲಾ ಗಡಿ ಸೇರಿ 25ಕ್ಕೂ ಚೆಕ್​ಪೋಸ್ಟ್ ಅಳವಡಿಸಿದೆ. ಅದರಲ್ಲಿ ಆಗುಂಬೆ, ಭದ್ರಾವತಿಯ ಕಾರೇಹಳ್ಳಿ, ಶಿವಮೊಗ್ಗ ತಾಲೂಕಿನ ಮಡಿಕೆ ಚೀಲೂರು ಬಳಿ ಹೊರ ಜಿಲ್ಲೆಗಳಿಂದ ಬರುವವರ ಮೇಲೆ ಕಟ್ಟೆಚ್ಚರ ವಹಿಸಲಾಗಿದೆ. ಆದರೆ ಚಿತ್ರದುರ್ಗ, ಉತ್ತರಕನ್ನಡ, ಹಾವೇರಿ ಜಿಲ್ಲೆಗಳಿಂದ ಬರುವವರ ಮೇಲೆ ಹೆಚ್ಚಿನ ನಿಗಾ ವಹಿಸುತ್ತಿಲ್ಲ.

    ಚೆಕ್​ಪೋಸ್ಟ್​ಗಳಲ್ಲಿ ಜಿಲ್ಲೆ ಪ್ರವೇಶವನ್ನು ನಿರಾಕರಿಸಲು ಡಿಸಿ ಆದೇಶ ನೀಡಿದ್ದಾರೆ. ಜನರನ್ನು ನಿಯಂತ್ರಿಸಲು ಜಿಲ್ಲಾಡಳಿತ ಚೆಕ್​ಪೋಸ್ಟ್ ನಿರ್ವಿುಸಿ ಬಿಗಿಗೊಳಿಸಿದ್ದರೆ, ಮತ್ತೊಂದೆಡೆ ಜನರು ಅನಾಯಸವಾಗಿ ಗಡಿ ಪ್ರವೇಶಿಸುತ್ತಿದ್ದಾರೆ. ಮುಖ್ಯ ದಾರಿಗಳಲ್ಲಿ ಬರುವುದನ್ನು ಕಡಿಮೆ ಮಾಡಿ ಪೊಲೀಸರ ಕಣ್ತಪ್ಪಿಸಿ ಒಳ ರಸ್ತೆಗಳನ್ನು ಆಯ್ಕೆ ಮಾಡಿಕೊಂಡು ಕಳ್ಳ ಮಾರ್ಗಗಳಲ್ಲಿ ತವರು ಸೇರುತ್ತಿದ್ದಾರೆ.

    ಚೆಕ್​ಪೋಸ್ಟ್​ಗಳಲ್ಲಿ ಅನಾರೋಗ್ಯದ್ದೇ ನೆಪ: ಸಾಮಾನ್ಯವಾಗಿ ದಾವಣಗೆರೆ ಗಡಿ ಭಾಗದ ಹೊನ್ನಾಳ್ಳಿ, ನ್ಯಾಮತಿ, ಚನ್ನಗಿರಿ, ಹಾವೇರಿ ಜಿಲ್ಲೆಯ ಹಿರೇಕೆರೂರು, ಉತ್ತರ ಕನ್ನಡದ ಶಿರಸಿ, ಸಿದ್ದಾಪುರ, ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ಭಾಗಗಳಿಂದ ಪ್ರತಿನಿತ್ಯವೂ ಶಿವಮೊಗ್ಗಕ್ಕೆ ಜನರು ಬೈಕ್, ಕಾರುಗಳಲ್ಲಿ ಬರುತ್ತಿದ್ದಾರೆ. ಆದರೆ ಬಹಳಷ್ಟು ಮಂದಿ ಅನಾರೋಗ್ಯದ ನೆಪವೊಡ್ಡಿ ಚೆಕ್​ಪೋಸ್ಟ್ ದಾಟುತ್ತಿದ್ದಾರೆ. ಮತ್ತಷ್ಟು ಮಂದಿ ಸರ್ಕಾರಿ ನೌಕರರು, ಬ್ಯಾಂಕ್ ನೌಕರರು, ಬ್ಯಾಂಕ್ ಕೆಲಸ, ಕೃಷಿ ಚಟುವಟಿಕೆಗಳಿಗೆ ಬರುತ್ತಿದ್ದಾರೆ. ಇದು ಮಲೆನಾಡಿನಲ್ಲಿ ಆತಂಕದ ಕಾಮೋಡ ಹೆಚ್ಚುವಂತೆ ಮಾಡಿದೆ.

    ಜಿಲ್ಲೆಗೆ ಮರಳಿದ 3 ಸಾವಿರ ಜನ: ಕಳೆದ ಮೂರ್ನಾಲ್ಕು ದಿನಗಳ ನಡುವೆ ಮಲೆನಾಡಿಗೆ 3 ಸಾವಿರಕ್ಕೂ ಅಧಿಕ ಮಂದಿ ಪಾಸ್ ಪಡೆದು ವಿವಿಧ ಜಿಲ್ಲೆಗಳಿಂದ ಮರಳಿದ್ದಾರೆ. ಆದರೆ ಸಾವಿರಕ್ಕೂ ಅಧಿಕ ಜನರು ಪಾಸ್ ಇಲ್ಲದೇ ಮನೆ ಸೇರಿಕೊಂಡಿದ್ದಾರೆ. ಚೆಕ್​ಪೋಸ್ಟ್​ಗಳು ಬಿಗಿಯಾಗದ ಕಾರಣ ಹೊರ ಜಿಲ್ಲೆಗಳಿಂದ ಬರುವವರ ಸಂಖ್ಯೆ ನಿರಂತರವಾಗಿದ್ದು ಮತ್ತೆ ಆತಂಕದ ಕಾಮೋಡ ಮಲೆನಾಡನ್ನು ಆವರಿಸುತ್ತಿದೆ.

    ಬೇಕಿದೆ ಕಡಿವಾಣ: ಈಗಾಗಲೇ ಶಿವಮೊಗ್ಗ ಪಕ್ಕದ ದಾವಣಗೆರೆ, ಚಿತ್ರದುರ್ಗ, ತುಮಕೂರು, ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿವೆ. ಹೊರ ಹೋಗುವ ಮತ್ತು ಜಿಲ್ಲೆಗೆ ಬರುವವರಿಗೆ ಸಂಪೂರ್ಣ ಕಡಿವಾಣ ಹಾಕುವ ಉದ್ದೇಶದಿಂದ ಆರಂಭದಲ್ಲಿ ಕೇವಲ 6 ಕಡೆ ಇದ್ದ ಚೆಕ್​ಪೋಸ್ಟ್​ಗಳನ್ನು 25ಕ್ಕೆ ಏರಿಸಲಾಗಿದೆ. ಆದರೆ ತುರ್ತಸೇವೆ ನೆಪವೊಡ್ಡಿ ಕಳ್ಳಮಾರ್ಗಗಳ ಮೂಲಕ ಜನರು ಜಿಲ್ಲೆ ಪ್ರವೇಶಿಸುತ್ತಿರುವುದು ಸ್ಥಳೀಯರಲ್ಲಿ ಆತಂಕ ಉಂಟುಮಾಡುತ್ತಿದೆ. ಹಾಗಾಗಿ ಕಳ್ಳ ಮಾರ್ಗಗಳಿಗೆ ಜಿಲ್ಲಾಡಳಿತ ಕಡಿವಾಣ ಹಾಕಬೇಕಿದೆ.

    ಹಾವೇರಿಯಿಂದ ಬರುತ್ತಿದ್ದ 2 ಬೈಕ್ ಜಪ್ತಿ: ಶಿವಮೊಗ್ಗ: ಅಧಿಕೃತ ಪಾಸ್ ಹೊಂದದೇ ಶಿವಮೊಗ್ಗ ಜಿಲ್ಲಾ ಗಡಿ ಚೆಕ್​ಪೋಸ್ಟ್ ಮೂಲಕ ಹಾದು ಹೋಗುವ ಮುಖ್ಯ ರಸ್ತೆಯಲ್ಲಿ ಬರದೇ ಪೊಲೀಸರ ಕಣ್ತಪ್ಪಿಸಿ ನೆರೆ ಜಿಲ್ಲೆ ಹಾವೇರಿಯಿಂದ ಒಳ ರಸ್ತೆಯ ಮೂಲಕ ಶಿಕಾರಿಪುರಕ್ಕೆ ಬರುತ್ತಿದ್ದ ಎರಡು ಬೈಕ್​ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಹಾವೇರಿಯಿಂದ ಮದಗದ ಕೆರೆ ಅಂಗಳದ ಒಳ ರಸ್ತೆ ಮೂಲಕ ಬೈಕ್​ಗಳಲ್ಲಿ ಶಿಕಾರಿಪುರ ತಾಲೂಕಿಗೆ ಬಂದಿರುವ ಮಾಹಿತಿ ಮೇರೆಗೆ ಶಿಕಾರಿಪುರ ಗ್ರಾಮಾಂತರ ಠಾಣೆ ಪಿಎಸ್​ಐ ರವಿಕುಮಾರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts