More

    ಕರೊನಾಕ್ಕಿಂತ ಹೆಚ್ಚುತ್ತಿದೆ ಬಹಿಷ್ಕಾರದ ಆತಂಕ

    ಸುಭಾಸ ಧೂಪದಹೊಂಡ ಕಾರವಾರ

    ನಾವು ಸಮಾಜದ ಸೇವೆಗಾಗೇ ಇದ್ದವರು, ಪಾಪ ಮಾಡಿ ಬಂದವರಲ್ಲ, ಕೀಳಾಗಿ, ಕಾಣಬೇಡಿ ಕರೊನಾ ಸೇನಾನಿಗಳು ಎನಿಸಿಕೊಂಡವರು ಈಗ ಹೀಗೆ ಹೇಳುವ ಸ್ಥಿತಿ ಬಂದಿದೆ. ಕರೊನಾ ರೋಗದ ಭಯಕ್ಕಿಂತ ಈಗ ಸಾಮಾಜಿಕ ಬಹಿಷ್ಕಾರದ ಆತಂಕ ಸೋಂಕಿತರಲ್ಲಿ ಹಾಗೂ ಕರೊನಾ ಹೊಡೆದೋಡಿಸಲು ಹೆಣಗಾಡುತ್ತಿರುವವರಲ್ಲಿ ಕಾಡಿದೆ. ಕರೊನಾ ಎದುರಿಸಲು ನಿಂತ ಸರ್ಕಾರಿ ಖಾಸಗಿ ಆಸ್ಪತ್ರೆಗಳ ವೈದ್ಯರಿಗೆ, ನರ್ಸ್ ಹಾಗೂ ಇತರ ಸಿಬ್ಬಂದಿಗೆ ಬಾಡಿಗೆ ಮನೆಗಳು ಸಿಗುತ್ತಿಲ್ಲ. ಕೋವಿಡ್​ನಿಂದ ಗುಣವಾಗಿ ಬಂದವರನ್ನು ಬಾಡಿಗೆ ಮನೆಗಳಿಂದ ಹೊರ ಹಾಕಲಾಗುತ್ತಿದೆ. ಇಂಥ ಘಟನೆಗಳು ಕರೊನಾ ಸೇನಾನಿಗಳನ್ನು ಅಧೀರರನ್ನಾಗಿ ಮಾಡುತ್ತಿದೆ. ಇದೇ ಕಾರಣಕ್ಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಆಂಬುಲೆನ್ಸ್ ಡ್ರೈವರ್​ಗಳು, ಡಾಟಾ ಎಂಟ್ರಿ ಆಪರೇಟರ್​ಗಳು ಕೆಲಸ ಬಿಟ್ಟು ಹೋಗುತ್ತಿದ್ದಾರೆ. ಸ್ವಚ್ಛತೆಗೆ ಡಿ ದರ್ಜೆ ನೌಕರರು ಬರಲು ಹಿಂದೇಟು ಹಾಕುತ್ತಿದ್ದಾರೆ.

    ಮನೆ ಬಾಗಿಲಿಗೆ ಬಂತು: ಮೊದಲೆಲ್ಲ ಹೊರ ಊರಿನಿಂದ ಬಂದವರಲ್ಲಿ ಮಾತ್ರ ಕೋವಿಡ್-19 ಸೋಂಕು ಕಾಣಿಸಿಕೊಳ್ಳುತ್ತಿತ್ತು. ಅವರನ್ನು ಕ್ವಾರಂಟೈನ್​ನಲ್ಲಿ ಇರಿಸಲಾಗುತ್ತಿತ್ತು. ಈಗ ಯಾವುದೇ ಪ್ರಯಾಣದ ಹಿನ್ನೆಲೆ ಇಲ್ಲದವರಿಗೂ ಕರೊನಾ ಕಾಣಿಸುತ್ತಿದೆ. ಜಿಲ್ಲೆಯಲ್ಲೇ ಐದಕ್ಕೂ ಅಧಿಕ ಖಾಸಗಿ ವೈದ್ಯರು, ನಾಲ್ವರು ಸರ್ಕಾರಿ ವೈದ್ಯರು, ನರ್ಸ್​ಗಳು, ಲ್ಯಾಬ್ ಟೆಕ್ನೀಶಿಯನ್, ಆಶಾ ಕಾರ್ಯಕರ್ತೆಯರು, ಪೊಲೀಸ್ ಸಿಬ್ಬಂದಿ, ಬ್ಯಾಂಕ್ ನೌಕರರು ಹೀಗೆ ಕರೊನಾ ಸೇನಾನಿಗಳು ಎಂದು ಕರೆಸಿಕೊಂಡ ಫ್ರಂಟ್ ಲೈನ್​ನ ಸಾಕಷ್ಟು ನೌಕರರಿಗೆ ಸೋಂಕು ತಗುಲಿದೆ. ಇನ್ನು ಹೆಚ್ಚು ಜನರ ಸಂಪರ್ಕಕ್ಕೆ ಬರುವ ಅಂಗಡಿಕಾರರು, ಕಟ್ಟಿಂಗ್ ಶಾಪ್​ನವರು, ಸರ್ಕಾರಿ ನೌಕರರನ್ನೂ ವೈರಸ್ ಬಿಟ್ಟಿಲ್ಲ. ಅಷ್ಟೇ ಅಲ್ಲ, ಪ್ರತಿ ದಿನವೂ ಕನಿಷ್ಠ 20 ರಷ್ಟು ರೋಗದ ಮೂಲವೇ ಪತ್ತೆ ಇಲ್ಲದ, ಯಾರ ಸಂಪರ್ಕಕ್ಕೂ ಬಾರದ ಸಾಮಾನ್ಯ ಜನರಿಗೂ ರೋಗ ಕಾಣಿಸಿಕೊಳ್ಳುತ್ತಿದೆ. ಶಹರದ ಪ್ರತಿ ಗಲ್ಲಿಗಳಲ್ಲಿ ಅಷ್ಟೇ ಏಕೆ ಪ್ರತಿ ಊರುಗಳಿಗೂ ವೈರಾಣು ದಾಂಗುಡಿ ಇಟ್ಟಿದೆ.

    ಸಾಮಾಜಿಕ ಅಂತರ ತಪ್ಪು ಅರ್ಥ?: ಕರೊನಾ ಒಬ್ಬರಿಂದ ಒಬ್ಬರಿಗೆ ಹರಡುವುದು ನಿಜ. ಇದನ್ನು ತಡೆಯಲು ಪರಸ್ಪರ ಅಂತರ ಕಾಯ್ದುಕೊಳ್ಳಬೇಕು ಎಂದು ಸರ್ಕಾರ ಹೇಳಿದೆ.ಆಂಗ್ಲ ಭಾಷೆಯ ‘ಸೋಶಿಯಲ್ ಡಿಸ್ಟೆನ್ಸಿಂಗ್’ ಶಬ್ದವನ್ನು ಕನ್ನಡೀಕರಿಸಿ ‘ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು’ ಎಂದು ತಿಳಿಸಲಾಗಿತ್ತು. ಆದರೆ, ಜನ ಅದನ್ನು ತಪ್ಪು ಅರ್ಥ ಮಾಡಿಕೊಂಡಂತಿದೆ. ಜನ ಪರಸ್ಪರ ಅಂತರದ ಬದಲು ಶಂಕಿತರಿಂದ ಸಾಮಾಜಿಕ ಅಂತರವನ್ನು ಹೆಚ್ಚು ಪಾಲಿಸುತ್ತಿದ್ದಾರೆ. ರೋಗದ ವಿರುದ್ಧ ಹೋರಾಡುವವರನ್ನು, ರೋಗದಿಂದ ಗುಣವಾಗಿ ಬಂದವರನ್ನು, ಅವರ ಕುಟುಂಬದವರನ್ನು ಬಹಿಷ್ಕಾರ ಮಾಡುತ್ತಿದ್ದಾರೆ. ಸಾಮಾಜಕ್ಕೆ ಹೆದರಿ ಹಲವರು ರೋಗ ಲಕ್ಷಣ ಇದ್ದರೂ ಮುಚ್ಚಿಟ್ಟುಕೊಳ್ಳುವ ಪರಿಸ್ಥಿತಿ ಇದೆ.

    ಮನೆಗೆ ಪ್ರವೇಶ ನೀಡಿಲ್ಲ: ರೋಗಿಗಳ ಶುಶ್ರೂಷೆಯಲ್ಲಿ ತೊಡಗಿದ ಸಂದರ್ಭದಲ್ಲಿ ಕಾರವಾರದ ಗ್ರಾಮೀಣ ಭಾಗದ ವ್ಯಕ್ತಿಯೊಬ್ಬರಿಗೆ ಕರೊನಾ ಸೋಂಕು ತಗುಲಿತ್ತು. ಅದನ್ನು ಗೆದ್ದು ಗುಣಹೊಂದಿ ಬಂದವರಿಗೆ ಆಘಾತ ಕಾದಿತ್ತು. ಬಾಡಿಗೆ ಮನೆಯ ಮಾಲೀಕರು ಮನೆಯ ಒಳಗೆ ಪ್ರವೇಶ ನೀಡದೇ ಹೊರ ಹಾಕಿದರು. ಸಮಾಜಕ್ಕಾಗಿ ಹೋರಾಡಿದ ವ್ಯಕ್ತಿ ಆಶ್ರಯ ಇಲ್ಲದೆ ಪರದಾಡಬೇಕಾಯಿತು. ಇಂಥದ್ದೇ ಮನ ಕಲಕುವ ಇನ್ನೊಂದು ಘಟನೆ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ದಂಪತಿ ನಗರದ ಫ್ಲಾ್ಯಟ್ ಒಂದರಲ್ಲಿ ವಾಸವಿದ್ದರು. ಅವರ ಮಗಳು ಹೊರ ಊರಿನಿಂದ ಬಂದಿದ್ದರು. ಗಂಟಲ ದ್ರವ ತಪಾಸಣೆ ನಡೆಸಿದಾಗ ತಂದೆಗೆ ಕರೊನಾ ಪಾಸಿಟಿವ್ ಬಂದಿತ್ತು. ಸುತ್ತಲಿನವರ ಒತ್ತಡ ತಾಳಲಾರದೇ ತಾಯಿ, ಮಗಳು ದೂರದ ಸಂಬಂಧಿಕರ ಮನೆಗೆ ಹೋಗಿ ಉಳಿಯುವ ಪರಿಸ್ಥಿತಿ ಎದುರಾಯಿತು. ಕೆಲ ದಿನ ಬಿಟ್ಟು ತಾಯಿಗೂ ಪಾಸಿಟಿವ್ ಬಂದಿದೆ ಎಂಬುದು ಗೊತ್ತಾದಾಗ ಆಕೆ ಆಂಬುಲೆನ್ಸ್ ಮನೆಗೆ ತರಬೇಡಿ ಎಂದು ಬೇಡಿಕೊಂಡರು. ಆಂಬುಲೆನ್ಸ್ ತಾವಿರುವಲ್ಲಿ ಬಂದರೆ, ತಮಗೆ ಆಶ್ರಯ ನೀಡಿದ ಸಂಬಂಧಿಕರಿಗೂ ತೊಂದರೆಯಾದೀತು ಎಂಬ ಕಾರಣಕ್ಕೆ ತಾನಾಗಿ ಆಸ್ಪತ್ರೆಗೆ ಬಂದು ದಾಖಲಾದರು.

    ಸಾಮಾಜಿಕ ಮನಸ್ಥಿತಿ ಬದಲಾಗಬೇಕು: ಕರೊನಾ ಬಂದವರನ್ನು ಪಾಪಿಗಳು ಎಂಬಂತೆ ಕಾಣುವ ಸಾಮಾಜಿಕ ಮನಸ್ಥಿತಿ ಬದಲಾಗಬೇಕು ಎಂದು ಕರೊನಾ ಗೆದ್ದು ಬಂದ ಆಯುರ್ವೆದ ವೈದ್ಯ ಡಾ.ಸಂಗಮೇಶ್ ಅಭಿಪ್ರಾಯಪಟ್ಟಿದ್ದಾರೆ. ‘ವಿಜಯವಾಣಿ’ ಜತೆ ಮಾತನಾಡಿದ ಅವರು, ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ನನಗೆ ಜುಲೈ 5 ರಂದು ಲಕ್ಷಣ ಕಾಣಿಸಿಕೊಂಡಿತು. 7 ರಂದು ಗಂಟಲ ದ್ರವ ಪರೀಕ್ಷೆ ಮಾಡಿಸಿದೆ. ಜುಲೈ 10 ರಂದು ಪಾಸಿಟಿವ್ ಇರುವ ವರದಿ ಬಂದಿತ್ತು. 12 ವರೆಗೂ ನಾನು ಮನೆಯಲ್ಲೇ ಚಿಕಿತ್ಸೆ ಪಡೆದಿದ್ದೆ. ನಂತರವೂ ಹೆಚ್ಚುವ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಕಾರವಾರ ಸರ್ಕಾರಿ ಆಸ್ಪತ್ರೆಗೆ ಹೋಗಿ ದಾಖಲಾಗಿದ್ದೆ. ಚಿಕಿತ್ಸೆ ಪಡೆದು 16 ರಂದು ಗಂಟಲ ದ್ರವದ ವರದಿ ನೆಗೆಟಿವ್ ಬಂದಿದ್ದರಿಂದ ವಾಪಸಾದೆ. ಈಗಲೂ ಆಯುರ್ವೆದ ಪದ್ಧತಿಯ ಕೆಲವು ಔಷಧಗಳನ್ನು ಮಾಡುತ್ತಿದ್ದೇನೆ.

    ಕರೊನಾ ಎಂಬುದು ಸಾಮಾನ್ಯ ಜ್ವರ. ಜನ ಆತಂಕಪಡುವ ಅಗತ್ಯವಿಲ್ಲ. ಮಕ್ಕಳು, ವೃದ್ಧರು, ಶ್ವಾಸಕೋಶದ ಸಮಸ್ಯೆ ಹಾಗೂ ಬೇರೆ ಗಂಭೀರ ಕಾಯಿಲೆ ಇದ್ದವರಿಗೆ ಇದರಿಂದ ತೊಂದರೆಯಾಗುತ್ತದೆ. ಅಂಥವರು ಹೆಚ್ಚು ಕಾಳಜಿ ತೆಗೆದುಕೊಳ್ಳಬೇಕು. ಸೋಂಕು ಹರಡದಂತೆ ತಡೆಯಲು ಇರುವ ಇರುವ ಮುನ್ನೆಚ್ಚರಿಕಾ ಕ್ರಮಗಳನ್ನು ಕ್ರಮಗಳನ್ನು ಎಲ್ಲರೂ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts